ಅತಂತ್ರ ಫಲಿತಾಂಶ ಸಾಧ್ಯತೆ: ಕುಮಾರಣ್ಣ ಮತ್ತೆ 'ಕೈ' ಹಿಡಿಯುವರೇ? ಕಮಲದ ಕಡೆಗೆ ಒಲವು ತೋರುವರೇ? ಇಲ್ಲಿದೆ ನಿಖರ ವಿಶ್ಲೇಷಣೆ
ಬೆಂಗಳೂರು, ಏಪ್ರಿಲ್ 27: ಕರ್ನಾಟಕ ವಿಧಾನಸಭೆ ಚುನಾವಣೆಯು ರಾಷ್ಟ್ರದಾದ್ಯಂತ ಭಾರೀ ಕುತೂಹಲ ಕೆರಳಿಸಿದೆ. ರಾಜ್ಯದಲ್ಲಿ ಮತ್ತೆ ಅತಂತ್ರ ಸ್ಥಿತಿ ಎದುರಾಗಬಹುದು ಎಂದು ಬಹುತೇಕ ಚುನಾವಣಾಪೂರ್ವ ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ. ಎರಡೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಸಂಪೂರ್ಣ ಬಹುಮತ ಸಿಗುವುದು ಅನಿಶ್ಚಿತವಾಗಿದೆ. ಈ ಹಿನ್ನೆಲೆಯಲ್ಲಿ, ಪ್ರತಿ ಬಾರಿಯಂತೆ ಈ ಬಾರಿಯೂ ಎಲ್ಲರ ಗಮನ ಜೆಡಿಎಸ್ ಪಕ್ಷದ ಕಡೆಗೆ ತಿರುಗಿದೆ.
ಇದೇ ವೇಳೆ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜೆಡಿಎಸ್‌ಗೆ ಮತ ನೀಡಿದರೆ, ಕಾಂಗ್ರೆಸ್‌ಗೆ ಮತ ನೀಡಿದಂತೆ ಎಂದು ತಿಳಿಸಿದ್ದಾರೆ. ಜೆಡಿಎಸ್ ಬಿಜೆಪಿಯ ಬಿ- ಟೀಮ್ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಜೆಡಿಎಸ್‌ಗೆ ಮತ ನೀಡಬೇಡಿ ಎಂದು ಮತದಾರರಲ್ಲಿ ಆಗ್ರಹಿಸುತ್ತಿವೆ.

2004, 2008 ಮತ್ತು 2018 ರಂತೆಯೇ 2023 ರ ಕರ್ನಾಟಕ ಚುನಾವಣೆಯು ಫಲಿತಾಂಶ ಅತಂತ್ರವಾಗಲಿದೆ ಎಂಬ ಮುನ್ಸೂಚನೆಯನ್ನು ಸಮೀಕ್ಷೆಗಳು ನೀಡಿವೆ. ಸಮೀಕ್ಷೆಗಳ ಪ್ರಕಾರ ವಿಶ್ಲೇಷಿಸುವುದಾದರೆ, ಈ ಬಾರಿಯೂ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರೇ ಕಿಂಗ್‌ಮೇಕರ್ ಆಗಲಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಸಮೀಕ್ಷೆಗಳು ಹೇಳಿದ್ದೇನು?
ಟಿವಿ9 ಮತ್ತು ಸಿ-ವೋಟರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ಪಕ್ಷವು 106ರಿಂದ 116 ಕ್ಷೇತ್ರಗಳಲ್ಲಿ ಜಯಗಳಿಸಬಹುದು. ಬಿಜೆಪಿಗೆ 79 ರಿಂದ 89 ಸ್ಥಾನಗಳು ಬರಬಹುದು. ಜೆಡಿಎಸ್ 24ರಿಂದ 34 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಬಹುದು.
ಪಬ್ಲಿಕ್ ಟಿವಿ ಸರ್ವೇ ಪ್ರಕಾರ, ಕಾಂಗ್ರೆಸ್ 98ರಿಂದ 108 ಸ್ಥಾನಗಳನ್ನು ಕಾಂಗ್ರೆಸ್ ಗಳಿಸಬಹುದು. ಬಿಜೆಪಿಗೆ 85-95 ಸ್ಥಾನಗಳು ಸಿಗಬಹುದು. ಜೆಡಿಎಸ್ 28ರಿಂದ 33 ಕ್ಷೇತ್ರಗಳಲ್ಲಿ ಜಯಗಳಿಸಬಹುದು.
ಸುವರ್ಣ ನ್ಯೂಸ್- ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ, ಕಾಂಗ್ರೆಸ್‌ಗೆ 89 ರಿಂದ 97 ಸ್ಥಾನಗಳು ಬರಬಹುದು. ಜೆಡಿಎಸ್ 25ರಿಂದ 29 ಕ್ಷೇತ್ರಗಳಲ್ಲಿ ಜಯಗಳಿಸಬಹುದು. 98ರಿಂದ 109 ಸ್ಥಾನಗಳನ್ನು ಬಿಜೆಪಿ ಗೆಲ್ಲಬಹುದು.

ನ್ಯೂಸ್‌ಫಸ್ಟ್-ಮ್ಯಾಟ್ರಿಜ್ ಸಮೀಕ್ಷೆ ಪ್ರಕಾರ, 96ರಿಂದ 106 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಕಾಂಗ್ರೆಸ್‌ಗೆ 84ರಿಂದ 94 ಸ್ಥಾನಗಳು ಬರಲಿವೆ. ಜೆಡಿಎಸ್ 29ರಿಂದ 34 ಕ್ಷೇತ್ರಗಳಲ್ಲಿ ಜಯಗಳಿಸಲಿದೆ.
ಕಿಂಗ್‌ಮೇಕರ್ ಆಗಲಿದ್ದಾರೆಯೇ ಕುಮಾರಣ್ಣ?
ಸಮೀಕ್ಷೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕರ್ನಾಟಕದಲ್ಲಿ ಈ ಬಾರಿಯೂ ಕುಮಾರಣ್ಣ ಕಿಂಗ್‌ಮೇಕರ್ ಆಗಲಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಅವರ ನೇತೃತ್ವದ ಜೆಡಿಎಸ್ ಪಕ್ಷವು ಪ್ರಾಬಲ್ಯ ಹೊಂದಿದೆ. ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ತೀವ್ರ ಪೈಪೋಟಿ ನಡೆಸುತ್ತಿವೆ.
ಕಳೆದ ಚುನಾವಣೆಯಲ್ಲಿ ಬಿಜೆಪಿಗೆ 104, ಕಾಂಗ್ರೆಸ್‌ಗೆ 80 ಹಾಗೂ ಜೆಡಿಎಸ್‌ಗೆ 37 ಸ್ಥಾನಗಳು ಬಂದಿದ್ದವು. ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು. ಒಂದು ವೇಳೆ, ಇದೇ ರೀತಿಯ ಫಲಿತಾಂಶ ಹೊರಬಂದರೆ, ಕುಮಾರಣ್ಣನೇ ಕಿಂಗ್‌ಮೇಕರ್ ಆಗುವುದರಲ್ಲಿ ಸಂಶಯವಿಲ್ಲ.

ಮೈತ್ರಿ ಬಗ್ಗೆ ಮಾತನಾಡದ ಕುಮಾರಣ್ಣ
ಈ ವರೆಗೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಬಗ್ಗೆ ಕುಮಾರಣ್ಣ ಮಾತನಾಡಿಲ್ಲ. ನಾವು ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ಅವರು ಹೇಳಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕನಿಷ್ಠ 123 ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದು ಎಚ್‌ಡಿಕೆ ಭರವಸೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಮಾಜಿ ಪ್ರಧಾನಿ ದೇವೇಗೌಡರೂ ಕುಮಾರಸ್ವಾಮಿ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.
ಅತಂತ್ರ ಸ್ಥಿತಿ: ಕುಮಾರಣ್ಣನ ಮುಂದೆ ನಡೆ ಏನಿರಬಹುದು?
ಒಂದು ವೇಳೆ, ಕರ್ನಾಟಕದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ, ಕುಮಾರಸ್ವಾಮಿ ಅವರ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ನಾವು ಯಾರೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎನ್ನುತ್ತಿರುವ ಕುಮಾರಸ್ವಾಮಿ ಅವರಿಗೂ ಫಲಿತಾಂಶ ಏನಾಗಬಹುದು ಎಂಬುದರ ಬಗ್ಗೆ ಅಂದಾಜು ಇರುವುದಂತೂ ಸತ್ಯ.
ಕಳೆದ ಎರಡು ದಶಕಗಳಲ್ಲಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಜೊತೆಗೆ ಎರಡು ಬಾರಿ ಹಾಗೂ ಬಿಜೆಪಿಗೆ ಜೊತೆಗೆ ಒಂದು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದಾರೆ. ಆದರೆ, ಈ ಬಾರಿ ಸಮ್ಮಿಶ್ರ ಸರ್ಕಾರ ರಚಿಸಿವ ಪರಿಸ್ಥಿತಿ ಎದುರಾದರೆ ಅವರು ಬಿಜೆಪಿಗಿಂತ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಸಂಭವ ಜಾಸ್ತಿ ಇದೆ.

ಬಿಜೆಪಿಯೊಂದಿಗೆ ಸೈದ್ದಾಂತಿಕ ಭಿನ್ನಾಭಿಪ್ರಾಯ
ಜೆಡಿಎಸ್ ಪಕ್ಷವು ಜಾತ್ಯತೀತ ಸಿದ್ದಾಂತವನ್ನು ಪ್ರತಿಪಾದಿಸುತ್ತಿರುವುದರಿಂದ ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಸೈದ್ದಾಂತಿಕ ಸಂಘರ್ಷವನ್ನು ಹೊಂದಿದ್ದಾರೆ. ಅವರ ಪಕ್ಷದ ಸಿದ್ದಾಂತಕ್ಕೂ, ಕಾಂಗ್ರೆಸ್‌ನ ಸೆಕ್ಯೂಲರ್ ಸಿದ್ದಾಂತಕ್ಕೂ ತಾಳೆಯಾಗುವುದರಿಂದ ಅವರು ಮತ್ತೆ ಕಾಂಗ್ರೆಸ್ ಕಡೆಗೆ ಕೈಚಾಚಬಹುದು.
ಕುಮಾರಣ್ಣನ ಕನ್ನಡಪರ ನಿಲುವು
ಜಾತ್ಯತೀತ ಜನತಾದಳವು ಪ್ರಾದೇಶಿಕ ಪಕ್ಷವೆಂದೇ ಗುರುತಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಕನ್ನಡ ಅಸ್ಮಿತೆಯನ್ನು ಪ್ರತಿಪಾದಿಸುತ್ತಿದ್ದಾರೆ. ಆದರೆ, ಬಿಜೆಪಿಯು ಹಿಂದಿ ಭಾಷಿಗ ಪಕ್ಷವೆಂದು ಬಿಂಬಿತವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಬಿಜೆಪಿಯೊಂದಿಗೆ ಕೈಜೋಡಿಸಿದರೆ, ಜೆಡಿಎಸ್‌ನ ಕನ್ನಡಪರ ವಾದಕ್ಕೆ ಪೆಟ್ಟು ಬೀಳಲಿದೆ. ಇದನ್ನೆಲ್ಲ ಲೆಕ್ಕಾಚಾರ ಮಾಡಿ ಕುಮಾರಣ್ಣ ಕಾಂಗ್ರೆಸ್ ಜೊತೆ ಸ್ನೇಹ ಬೆಳಸಹುದು.
ದೇವೇಗೌಡರ ರಾಜ್ಯಸಭಾ ಸದಸ್ಯತ್ವಕ್ಕೆ ಕಾಂಗ್ರೆಸ್ ಬೆಂಬಲ
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ದೇವೇಗೌಡರು ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿದ್ದಾರೆ. ಅವರು ರಾಜ್ಯಸಭಾ ಸದಸ್ಯರಾಗಲು ಕಾಂಗ್ರೆಸ್ ಬೆಂಬಲ ನೀಡಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡರು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಆಶಯವನ್ನು ವ್ಯಕ್ತಪಡಿಸಬಹುದು. ರಾಜಕೀಯ ಲಾಭ ನಷ್ಟಗಳನ್ನು ನೋಡುವುದಾದರೆ, ಕುಮಾರಸ್ವಾಮಿ ಅವರು ಕಾಂಗ್ರೆಸ್‌ನೊಂದಿಗೆ ಕೈಜೋಡಿಸುವ ಎಲ್ಲಾ ಲಕ್ಷಣಗಳಿವೆ.












Click it and Unblock the Notifications