• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಸ್ ದರ ಇಳ್ಸೀ ಅಂದ್ರೆ ಮಠದ ವ್ಯವಹಾರಕ್ಕೆ ಕೈಹಾಕ್ತೀರಲ್ಲಾರೀ

By ಬಾಲರಾಜ್ ತಂತ್ರಿ
|

ರಾಜ್ಯ ಸರ್ವೋತೋಮುಖ ಅಭಿವೃದ್ದಿ ಹೊಂದಿ ನಾಡು ರಾಮರಾಜ್ಯದಂತಿದ್ದರೆ, ಹಿಂದೂ ದೇವಾಲಯಗಳಲ್ಲಿ ಇನ್ನೂ ಹೆಚ್ಚಿನ ಶುದ್ದ ಪೂಜೆ ಪುನಸ್ಕಾರ ನಡೆಯಲಿ ಎಂದು ಸರಕಾರ ಮಠಗಳ ವಿಚಾರಕ್ಕೆ ಹೋಗಿದ್ದರೆ ಭೇಷ್ ಅನ್ನಬಹುದಿತ್ತು.

ಆದರೆ ನಮ್ಮ ರಾಜ್ಯದಲ್ಲಿ ರಾಮರಾಜ್ಯದ ಪರಿಸ್ಥಿತಿ ಇಲ್ವೇ? ಹತೋಟಿಗೆ ಬರದ ಅತ್ಯಾಚಾರ ಪ್ರಕರಣಗಳು, ಕಳ್ಳತನ, ಕಳೆಗುಂದಿರುವ ಆಡಳಿತ ವ್ಯವಸ್ಥೆ, ರೈತರ ಸಮಸ್ಯೆ, ಬೆಲೆ ಏರಿಕೆ ಹೀಗೆ ಒಂದೇ ಎರಡೇ..

ಮೊದಲು ಸಿದ್ದರಾಮಯ್ಯ ಸರಕಾರ ಮಾತಿಗೆ ಬದ್ದರಾಗಿ ಬಸ್ ದರ ಇಳಿಸಿದ್ರೆ, ಕಬ್ಬಿಗೆ ಸೂಕ್ತವಾದ ಬೆಂಬಲ ಬೆಲೆ ನಿಗದಿ ಪಡಿಸಿದ್ದರೆ ಮುಖ್ಯಮಂತ್ರಿಗಳ ಕಾರ್ಯವೈಖರಿಯನ್ನು ಜನ ಮೆಚ್ಚುತ್ತಿದ್ದರು, ಅನ್ನದಾತರು ಹರಸುತ್ತಿದ್ದರು.

ಇನ್ನೆರಡು ದಿನದಲ್ಲಿ ಬಸ್ ದರ ಇಳಿಸ್ತೀವಿ ಎಂದು ವಾರದ ಕೆಳಗೆ ಹೇಳಿದ್ದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರಿಗೆ ಇನ್ನೂ ಎರಡು ದಿನವಾಗಲಿಲ್ಲವೇನೋ? ಅಥವಾ ಅಧಿವೇಶನ ನಡೆಯುತ್ತಿದ್ದರಿಂದ ವಿಪಕ್ಷಗಳ ಬಾಯಿ ಮುಚ್ಚಿಸಲು ಜನರ ಕಿವಿಗೆ ಹೂ ಇಟ್ಟರೋ? (ಎರಡು ದಿನದಲ್ಲಿ ಬಸ್ ದರ ಇಳಿಕೆ)

ಅದೆಷ್ಟೋ ರಾಜ್ಯದ ಮಧ್ಯಮವರ್ಗದ ಕುಟುಂಬ ಸರಕಾರ ಬಸ್ ದರ ಇಳಿಸಬಹುದು ಎನ್ನುವ ಆಶಾಭಾವನೆಯಲ್ಲಿದೆ. ಡೀಸೆಲ್ ಬೆಲೆ ಏರಿದಾಗ ರಾತ್ರೋರಾತ್ರಿ ಬಸ್ ದರ ಏರಿಸುವ ಇವರಿಗೆ, ಲೀಟರಿಗೆ ಸುಮಾರು ಆರು ರೂಪಾಯಿಯಷ್ಟು ದರ ಕಮ್ಮಿಯಾದರೂ ಬೆಲೆ ಇಳಿಸುವ ಮನಸ್ಸಿಲ್ಲ.

ಇವರು ನೀಡುವ standard ಕಾರಣವೆಂದರೆ, ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ನಷ್ಟದಲ್ಲಿ ಸಾಗುತ್ತಿದೆ ಎನ್ನುವುದು. ಸಾರಿಗೆ ಇಲಾಖೆಯಲ್ಲಿನ ಲೋಪ, ದೋಷ, ಭ್ರಷ್ಟಾಚಾರಕ್ಕೆ ಮೊದಲು ಮದ್ದು ಹುಡುಕದೇ ಇದ್ದಲ್ಲಿ ಡೀಸೆಲ್ ದರ ಹತ್ತು ರೂಪಾಯಿಗೆ ಇಳಿದರೂ ಇಲಾಖೆ ಲಾಭದ ದಾರಿಗೆ ಬರುವುದಿಲ್ಲ ಬಿಡಿ.

ಬೆಳಗ್ಗೆ ಮತ್ತು ಸಂಜೆ ಹೊರತು ಪಡಿಸಿದರೆ ಖಾಲಿ ಖಾಲಿ ಸಾಗುವ ವೊಲ್ವೋ ಬಸ್ಸುಗಳನ್ನು ಅದ್ಯಾವ ಶೋಕಿಗಾಗಿ ಓಡಿಸುತ್ತಾರೋ? ಇನ್ನಷ್ಟು ಟ್ರಾಫಿಕ್ ಸಮಸ್ಯೆ ಹುಟ್ಟುಹಾಕಲೋ ಎನ್ನುವುದು ಪ್ರಯಾಣಿಕರ ವಿಷಾದದ ಸತ್ಯನುಡಿ. ಜನರ ಈ ದೈನಂದಿನ ಸಮಸ್ಯೆಗೆ ಪರಿಹಾರ ನೀಡುವ ಬದಲು ಬಹುಸಂಖ್ಯಾತರ ಮಠದ ವಿಚಾರಕ್ಕೆ ಸರಕಾರ ಬಂದಿರುವುದು ಯಾವ ಪುರುಷಾರ್ಥಕ್ಕೋ?

ರಾಜ್ಯದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಠಗಳಿವೆ. ಕೆಲವೊಂದು ಅಪವಾದದ ನಡುವೆ ನಾಡಿನ ಹೆಚ್ಚಿನ ಮಠಗಳು ಉತ್ತಮ ಕೆಲಸವನ್ನೇ ಮಾಡುತ್ತಿವೆ ಎನ್ನುವುದು ಮುಖ್ಯಮಂತ್ರಿಗಳಿಗೆ ಅಥವಾ ಸಚಿವ ಜಯಚಂದ್ರ ಅವರಿಗಾಗಲಿ ತಿಳಿಯದ ವಿಚಾರವೇನೂ ಅಲ್ಲ. (ಮಠಗಳ ಮೇಲೆ ನಿಯಂತ್ರಣ, ಮಠಾಧೀಶರ ಹೋರಾಟ)

ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. 'ನಿತ್ಯಾನಂದನ ಮಠದ ಚಟುವಟಿಕೆಯ ಹಾಗಿರುವ ಮಠಗಳು ನಮಗೆ ಬೇಕಾ'ಎನ್ನುವುದು ಇವರ ವಾದ. ನಿತ್ಯಾನಂದ ಮತ್ತು ಬಿಡದಿ ಪೀಠವನ್ನು ಕನ್ನಡಿಗರು 'ಮಠ ಅಥವಾ ಸ್ವಾಮೀಜಿ' ಎಂದು ಭಾವಿಸಿಯೇ ಇಲ್ಲ ಎನ್ನುವುದು ಪೂಜಾರಪ್ಪ ನವರಿಗೆ ತಿಳಿದಿರಲಿ.

ಇದೇ ಉಡುಪಿ ಕೃಷ್ಣಮಠವನ್ನು ಮುಜರಾಯಿ ವ್ಯಾಪ್ತಿಗೆ ತರಲು ಸರಕಾರ ಮುಂದಾಗಿದ್ದಾಗ ಸಿದ್ದರಾಮಯ್ಯ ವಿರುದ್ದ ಗುಡುಗಿದ್ದ ಪೂಜಾರಿಯವರು ಈಗ ಸರಕಾರ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿರುವುದು ಯಾಕೆ? ಸುಮ್ಮನೆ ಮೈಕ್ ಇದೆ, ಎದುರಿಗೆ ಪತ್ರಕರ್ತರು ಇದ್ದಾರೆಂದು ಏನೋ ಹೇಳಿಕೆ ನೀಡೋದು ತಪ್ಪಲ್ವೇ ಪೂಜಾರಿಯವರೇ? (ಮಠದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಡಿ, ಪೂಜಾರಿ)

ಬಹುಸಂಖ್ಯಾತರ ಭಾವನೆಗೆ ಧಕ್ಕೆಯಾದರೆ ಎಲ್ಲೋ ಸ್ವಲ್ಪ ಪ್ರತಿಭಟನೆಯಾಗುತ್ತೆ, ಆಮೇಲೆ ಸುಮ್ಮನಾಗುತ್ತೆ ಎನ್ನೋ ವಿಶ್ವಾಸ ಸರಕಾರಕ್ಕೆ ಇರಬಹುದೇನೋ. ಇದೇ ಚರ್ಚ್, ಮಸೀದಿಯ ಆಡಳಿತದ ವಿಚಾರಕ್ಕೆ ಕೈಹಾಕುವ 'ಸಾಹಸ'ವನ್ನು ಸರಕಾರ ಕನಸಿನಲ್ಲಾದ್ರೂ ನೆನೆಸಿತೇ ಅಥವಾ ಮಾಡಿತೇ?

ಇತ್ತೀಚಿನ ದಿನಗಳಲ್ಲಿ ಮುಜರಾಯಿ ವ್ಯಾಪ್ತಿಗೆ ಬಂದ ದೇವಾಲಯಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಇಲಾಖಾ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳ ಆಡಳಿತ ನಿರ್ವಹಣೆ ಹೇಗಿರುತ್ತೆ ಎನ್ನುವುದು ಭಕ್ತರಿಗೆ ತಿಳಿದೇ ಇದೆ, ದೇವರಿಗೇ ಪ್ರೀತಿ.

ಬಿಜೆಪಿ ಮತ್ತು ಜೆಡಿಎಸ್ ನಿರೀಕ್ಷೆಯಂತೆ ಮಸೂದೆ ವಿರುದ್ದ ತಿರುಗಿ ಬಿದ್ದಿದೆ. ಆದರೆ ಎರಡೂ ಪಕ್ಷಗಳು ಈ ವಿಚಾರವನ್ನು ತಮ್ಮ ರಾಜಕೀಯದ ಆಟಕ್ಕೆ ಬಳಸಿಕೊಳ್ಳದೇ ಇರಲಿ ಎನ್ನುವುದು ಬಹುಸಂಖ್ಯಾತರ ಆಶಯ. (ಮಠಗಳಿಗೆ ನಿಯಂತ್ರಣ ಬೇಕು, ನಿಡುಮಾಮಿಡಿ)

ಸೂಕ್ತ ನಿರ್ವಹಣೆ ಇಲ್ಲದ ಮಠ, ವಿವಾದಕ್ಕೆ ಸಿಲುಕಿರುವ ಮಠ, ಧಾರ್ಮಿಕ ಸಂಸ್ಥೆಗಳು ಹಾಗೂ ದೇಗುಲಗಳ ಸ್ವಾಧೀನಕ್ಕಾಗಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ-2014ನ್ನು ರಾಜ್ಯ ಸರಕಾರ ಬೆಳಗಾವಿ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ತರಾತುರಿಯಲ್ಲಿ ಮಂಡಿಸಿದ್ದನ್ನು ನಾವು ಇಲ್ಲಿ ಸ್ಮರಿಸಿ ಕೊಳ್ಳಬಹುದು.

ನಾಡಿನ ಸಮಸ್ತ ಪೀಠಾಧಿಪತಿಗಳು, ಧಾರ್ಮಿಕ ಮುಖಂಡರು ಸರಕಾರದ ಈ ಕ್ರಮದ ವಿರುದ್ದ ತಿರುಗಿ ಬಿದ್ದ ನಂತರ ಎಚ್ಚೆತ್ತಿರುವ ಸರಕಾರ, ಇದು ಹಿಂದಿನ ಬಿಜೆಪಿ ಸರಕಾರದ ಕೂಸು, ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುತ್ತಿದ್ದೇವೆ ಎಂದು ಸಮಜಾಯಿಷಿ ನೀಡಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸ ಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ, ಒಪ್ಪಿಕೊಳ್ಳೋಣ. ಆದರೆ, ಸುಪ್ರೀಂಕೋರ್ಟ್ ನೀಡುವ ಆದೇಶವನ್ನೆಲ್ಲಾ ಸರಕಾರ ಕಟ್ಟುನಿಟ್ಟಾಗಿ ಪಾಲಿಸುತ್ತಿದೆಯಾ? ಅಥವಾ ತಮಗೆ ಅನುಕೂಲವಾಗುವಂತಹ ಆದೇಶಕ್ಕೆ ಮಾತ್ರ ಹೆಚ್ಚಿನ ಮಹತ್ವ ನೀಡುತ್ತಿದೆಯಾ ಎನ್ನುವುದೇ ಇಲ್ಲಿ ಕಾಡುತ್ತಿರುವ ಪ್ರಶ್ನೆ.

ಸದ್ಯಕ್ಕೆ ಮಂಗಳವಾರದ (ಡಿ 23) ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಅದೂ ತಮ್ಮದೇ ಪಕ್ಷದ ಸಚಿವರ ತೀವ್ರ ಒತ್ತಡಕ್ಕೆ ಮಣಿದು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿದ್ದ ಮಠಗಳಿಗೆ ಮೂಗುದಾರ ಹಾಕುವ ಮಸೂದೆಯನ್ನು ವಾಪಸ್ ಪಡೆಯಲು ಸರ್ಕಾರ ತೀರ್ಮಾನಿಸಿದೆ.

ಬರುವ ಜನವರಿ 13ರಂದು ಮಸೂದೆ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಅದಕ್ಕೆ ಮುನ್ನ ಹಿಂದೆ ಸರ್ಕಾರದ ಪರವಾಗಿ ವಾದ ಮಂಡಿಸಿದ್ದ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಎನ್. ರಾವ್, ಅಡ್ವೋಕೇಟ್ ಜನರಲ್ ಅವರ ಜೊತೆ ಚರ್ಚಿಸಿ ಮುಂದಿನ ಹೆಜ್ಜೆ ಇಡಲು ಸರಕಾರ ನಿರ್ಧರಿಸಿದೆ. ಒಟ್ಟಿನಲ್ಲಿ ಬಹುಸಂಖ್ಯಾತರ ಭಾವನೆಗೆ ಸ್ಪಂಧಿಸುವ ಮನಸ್ಥಿತಿ ಸಿದ್ದರಾಮಯ್ಯ ಸರಕಾರಕ್ಕೆ ಇರಬೇಕಷ್ಟೇ.

ಹಾಗೆಯೇ, ಸಾರಿಗೆ ಸಚಿವರು ಬುಧವಾರ (ಡಿ 24) ಪತ್ರಿಕಾಗೋಷ್ಠಿ ಕರೆದಿದ್ದಾರೆ. ಮೂಗಿಗೆ ತುಪ್ಪ ಹಚ್ಚುತ್ತಾರೋ, ನೋಡೋಣ.

ಬೆಳಗ್ಗೆ ದರ್ಶಿನಿ ಹೋಟೇಲ್ ನಲ್ಲಿ ತಿಂಡಿ ತಿನ್ನಬೇಕಾದರೆ ಕೆಲವರು ಹೀಗೆ ಮಾತಾಡ್ತಾ ಇದ್ರು ' ಬಸ್ ದರ ಇಳ್ಸೀ ಅಂದ್ರೆ, ಮಠದ ವಿಚಾರಕ್ಕೆ ಕೈಹಾಕೋಕೆ ಹೋಗ್ತಾರೆ, ಅದನ್ನು ಇನ್ನೇನು ಹಾಳು ಮಾಡ್ತಾರೋ'.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
What happened to the government promise to cut down the bus fare. During Belagavi winter session government promise to decrease the fare within 2 days, but so far no news from Transport Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more