ಯಾವ Fuc* Kannada Nadu ಎಂದ ನಾರ್ಥಿ: ಕನ್ನಡ ನಾಡು ಚಿನ್ನದ ಬೀಡು ಎಂದ ಕನ್ನಡಿಗರು!
Kannada Nadu: ಬೆಂಗಳೂರಿನ ಉದ್ಯಮಿಗಳು ಬೆಂಗಳೂರಿನ ಮೂಲಸೌಕರ್ಯದ ವಿಷಯ ಪ್ರಶ್ನೆ ಮಾಡುತ್ತಿದ್ದಂತೆಯೇ ಇದೀಗ ಬಯೋಕಾನ್ ಮುಖ್ಯಸ್ಥೆ ಕನ್ನಡಿಗರೇ ಎನ್ನುವ ಪ್ರಶ್ನೆ ಎದುರಾಗಿದೆ. ಇದರ ನಡುವೆ ವ್ಯಕ್ತಿಯೊಬ್ಬ ಮಾಡಿರುವ ಪೋಸ್ಟ್ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ನೆಟ್ಟಿಗನೊಬ್ಬ ಮಾಡಿರುವ ಟ್ವೀಟ್ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆದಿದೆ.
ಅಮಿತ್ (Amit Schandillia) ಎನ್ನುವ ವ್ಯಕ್ತಿ ಅವಾಚ್ಯ ಶಬ್ದಗಳನ್ನು ಬಳಸಿ ಕನ್ನಡ ನಾಡಿನ ಬಗ್ಗೆ ಮಾತನಾಡಿದ್ದಾನೆ. "ಕನ್ನಡ ನಾಡು ಅಂದ್ರೆ ಏನು? ಬೆಂಗಳೂರಿನಲ್ಲಿ 2 ವರ್ಷ ಆಯ್ತು, ಯಾರೂ ಆ ಹೆಸರು ಹೇಳೋದನ್ನ ಕೇಳಿಲ್ಲ" The fuc* is Kannada Nadu ಎಂದು ಈ ವ್ಯಕ್ತಿ ಮಾಡಿರುವ ಟ್ವೀಟ್ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಅರುಣ್ ಜಾವಗಲ್ ಅವರು, ನಿಜ, ಗುಜರಾತಿ ಕಿರಣ್ ಮಜುಂದಾರ್ - ಶಾ ಅವರು ಕರ್ನಾಟಕದಲ್ಲಿ 16,000 ಉದ್ಯೋಗಗಳನ್ನು ಸೃಷ್ಟಿಸಿರಬಹುದು ಮತ್ತು ಅದು ಮೆಚ್ಚುಗೆ ಪಡೆದಿದೆ. ಆದರೆ ಕನ್ನಡ ನಾಡಿನ ಹಕ್ಕುಗಳನ್ನು ರಕ್ಷಿಸುವ ನೀತಿಗಳನ್ನು ರೂಪಿಸಲು ನಮಗೆ ಈಗ ಅವರ ಅನುಮೋದನೆ ಅಗತ್ಯವಿದೆಯೇ ಎಂದು ಪ್ರಶ್ನಿಸಿದ್ದರು.
ಗುಜರಾತಿ ಕಿರಣ್ ಶಾ ಮತ್ತು ಕೊಂಕಣಿ ಮೋಹನದಾಸ್ ಪೈ ಇಬ್ಬರೂ ಕನ್ನಡಿಗರನ್ನು ಅಭಿವೃದ್ಧಿ ಹೊಂದುವುದಕ್ಕೆ ಸಾಧ್ಯವಿರುವ ಪ್ರತಿಯೊಂದು ನೀತಿಯನ್ನು ಯಾವಾಗಲೂ ಏಕೆ ವಿರೋಧಿಸುತ್ತಿದ್ದಾರೆ ಕರ್ನಾಟಕ ಸರ್ಕಾರವು ಕನ್ನಡ ನಾಡಿನಲ್ಲಿ ಸ್ಥಳೀಯ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಗಳನ್ನು ಖಚಿತಪಡಿಸಿಕೊಳ್ಳಲು ಬಯಸಿದರೆ ಅವರ ಸಮಸ್ಯೆ ಏನು? ಕರ್ನಾಟಕ ಸರ್ಕಾರವು ಕೈಗಾರಿಕೆಗಳಿಗೆ ತೆರಿಗೆ ಪ್ರಯೋಜನಗಳು, ಭೂಮಿ ಮತ್ತು ಇತರ ಪ್ರೋತ್ಸಾಹಗಳನ್ನು ನೀಡಿದಾಗ, ಸ್ಥಳೀಯ ಜನರಿಗೆ ನ್ಯಾಯಯುತವಾದ ಉದ್ಯೋಗಗಳನ್ನು ನಿರೀಕ್ಷಿಸುವುದು ತಪ್ಪೇ ಎಂದು ಪ್ರಶ್ನೆ ಮಾಡಿದ್ದರು.
ಕರ್ನಾಟಕದಲ್ಲಿ ಕನ್ನಡಿಗರನ್ನು ಬೆಂಬಲಿಸುವುದು ಉದ್ಯಮ ವಿರೋಧಿಯಲ್ಲ, ಅದು ನ್ಯಾಯ ಪರ, ಒಕ್ಕೂಟ ಪರ ಮತ್ತು ಜನರ ಪರ. ಉದ್ಯೋಗಕ್ಕಾಗಿ ಬೆಂಗಳೂರಿಗೆ ಅನಿಯಮಿತ ವಲಸೆಯೊಂದಿಗೆ ನಾವು ಉತ್ತಮ ಗುಣಮಟ್ಟದ ಮೂಲಸೌಕರ್ಯವನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.
ಕೇಂದ್ರ ಸರ್ಕಾರದಿಂದ ಆಗಿರುವ ಅನ್ಯಾಯದ ಬಗ್ಗೆ ಕಿರಣ್ ಶಾ ಏಕೆ ಮಾತನಾಡುವುದಿಲ್ಲ, ಅದು ಸಬ್ ಅರ್ಬನ್ ರೈಲು ಯೋಜನೆಯ ನಿರ್ಲಕ್ಷ್ಯವಾಗಿರಬಹುದು ಅಥವಾ ಕರ್ನಾಟಕದ ಬೆಳವಣಿಗೆಗೆ ಹಾನಿ ಮಾಡುವ ಅನ್ಯಾಯದ GST ನೀತಿಗಳಾಗಿರಬಹುದು ಯಾವ ವಿಚಾರದ ಬಗ್ಗೆಯೂ ಅವರು ಧ್ವನಿ ಎತ್ತುವುದಿಲ್ಲ ಎಂದಿದ್ದರು. ಇದನ್ನು ಹಂಚಿಕೊಂಡಿರುವ ವ್ಯಕ್ತಿ ಕನ್ನಡ ನಾಡಿನ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾನೆ.
ಅಮರನಾಥ್ ಶಿವಶಂಕರ್ ಅವರು, ಮಯೂರ ಅಮೋಘವರ್ಷ ಪುಲಿಕೇಶಿ ಎರಡನೇ ಗೋವಿಂದ ಕೃಷ್ಣದೇವರಾಯನನ್ನು ಕೊಟ್ಟ ನಾಡು ಕನ್ನಡ ನಾಡು. ಆಚಾರ್ಯತ್ರಯರ ಕರ್ಮಭೂಮಿಯಾಗಿದಿದ್ದು ಕನ್ನಡ ನಾಡು. ರಾಣಿ ಅಬ್ಬಕ್ಕ ಕಿತ್ತೂರು ಚೆನ್ನಮ್ಮ ಸಂಗೊಳ್ಳಿ ರಾಯಣ್ಣ ದುರ್ಗದ ಓಬವ್ವನನ್ನು ಕೊಟ್ಟ ನಾಡು ಕನ್ನಡ ನಾಡು. ಕುಮಾರವ್ಯಾಸ ಪಂಪನಿಂದ ಹಿಡಿದು ಕುವೆಂಪು ಬೇಂದ್ರೆ ಕಾರಂತರ ವರೆಗೆ ಸರಸ್ವತೀ ಪುತ್ರರನ್ನು ಕೊಟ್ಟ ನಾಡು ಕನ್ನಡ ನಾಡು.
ಬಸವಣ್ಣ ಅಲ್ಲಮಪ್ರಭು ಅಕ್ಕಮಹಾದೇವಿಯ ವಚನ ಸಾಹಿತ್ಯದಿಂದ ಹಿಡಿದು ಪುರಂದರದಾಸರು, ಗೋಪಾಲದಾಸರು, ಕನಕದಾಸರನ್ನು ಕೊಟ್ಟ ನಾಡು ಕನ್ನಡ ನಾಡು. ನಾಲ್ವಡಿ ಕೃಷ್ಣರಾಜ ಒಡೆಯರಂತಹ ಧರ್ಮಾತ್ಮ ದೊರೆಯನ್ನು ಕೊಟ್ಟ ನಾಡು ಕನ್ನಡ ನಾಡು. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ಅಂತಹ ಅತ್ಯುನ್ನತ ಗಾಯಕರನ್ನು ಕೊಟ್ಟ ನಾಡು ಕನ್ನಡ ನಾಡು. ವಿಶ್ವೇಶ್ವರಯ್ಯ , ಡಾ ರಾಜಕುಮಾರ್ ,ಮುಂತಾದ ಮಹನೀಯರನ್ನು ಸಮಾಜಕ್ಕೆ ಕೊಟ್ಟ ನಾಡು ಕನ್ನಡ ನಾಡು.
ಅವಾಚ್ಯ ಶಬ್ದಗಳಿಂದ ಕನ್ನಡ ನಾಡಿಗೆ ಅವಮಾನ ಮಾಡುವ ನೀಚರು ಹಿಂದೆಯೂ ಇದ್ದರು, ಈಗಲೂ ಇದ್ದಾರೆ, ಮುಂದೆಯೂ ಬರುತ್ತಾರೆ. ಕನ್ನಡ ನಾಡು ಎಂದೆಂದಿಗೂ ಅಜರಾಮರ. ಜೈ ಕನ್ನಡಾಂಬೆ. ಜೈ ಕನ್ನಡ ನಾಡು, ಚಿನ್ನದ ಬೀಡು 🤩 ಎಂದು ತಿರುಗೇಟು ಕೊಟ್ಟಿದ್ದಾರೆ.












Click it and Unblock the Notifications