Power Cut: ರಾಜ್ಯದಲ್ಲಿ ಪವರ್ ಕಟ್ ಬಗ್ಗೆ ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದ್ದೇನು?
ಕರ್ನಾಟಕದ ವಿವಿಧ ಭಾಗದಲ್ಲಿ ಪವರ್ ಕಟ್ (ವಿದ್ಯುತ್ ವ್ಯತ್ಯಯ) ಬಗ್ಗೆ ಚರ್ಚೆಯಾಗುತ್ತಿದ್ದು. ಪವರ್ ಕಟ್ ಆಗುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ಷೇಪ ಸಹ ವ್ಯಕ್ತವಾಗುತ್ತಿದೆ. ಇದೀಗ ರಾಜ್ಯದಲ್ಲಿ ಪವರ್ ಕಟ್‌ಗೆ ಸಂಬಂಧಿಸಿದಂತೆ ರಾಜ್ಯ ಇಂಧನ ಸಚಿವ ಕೆ.ಜೆ ಜಾರ್ಜ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಪವರ್ ಕಟ್‌ನ ಬಗ್ಗೆ ಅವರು ಹೇಳಿದ್ದೇನು, ಪವರ್ ಕಟ್ ಆಗಲಿದೆಯೇ ಸರ್ಕಾರ ಈ ನಿಟ್ಟಿನಲ್ಲಿ ಏನೆಲ್ಲ ಸಿದ್ದತೆಗಳನ್ನು ಮಾಡಿಕೊಂಡಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕದಲ್ಲಿ ಪವರ್ ಕಟ್‌ನ ಬಗ್ಗೆ ಕೆ.ಜೆ ಜಾರ್ಜ್ ಅವರು ನಿಖರ ಮಾಹಿತಿಯನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ಇದೀಗ ವಿದ್ಯುತ್ ಕೊರತೆ ಇಲ್ಲ. ಹೀಗಾಗಿ, ಮುಂದಿನ ದಿನಗಳಲ್ಲೂ ಪವರ್ ಕಟ್ ಮಾಡುವ ಬಗ್ಗೆ ಯಾವುದೇ ಚಿಂತನೆ ನಮ್ಮ ಸರ್ಕಾರದ ಮುಂದಿನಲ್ಲ ಎಂದು ಕೆ.ಜೆ ಜಾರ್ಜ್ ಮಾಹಿತಿ ನೀಡಿದ್ದಾರೆ. ಕೆಲವು ಭಾಗದಲ್ಲಿ ನಿರ್ವಹಣೆಗೆ ಸಂಬಂಧಿಸಿದಂತೆ ಕಾಮಗಾರಿಗಳು ನಡೆಯುತ್ತಿದ್ದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತಿತ್ತು.

ರಾಜ್ಯದಲ್ಲಿ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಅಗತ್ಯ ವಿದ್ಯುತ್ ಸರಬರಾಜು ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಕಲ್ಲಿದ್ದಲು ಸಂಗ್ರಹ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕದಲ್ಲಿ ಪವನ ಹಾಗೂ ಸೌರ ಮೂಲಗಳಿಂದಲೂ ನಮಗೆ ವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಯಲಹಂಕದಲ್ಲಿ 370 ಮೆಗಾವಾಟ್ ಸಾಮರ್ಥ್ಯ
ಬೆಂಗಳೂರಿನ ಯಲಹಂಕದಲ್ಲಿ ಸ್ಥಾಪಿಸುತ್ತಿರುವ 370 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರವನ್ನು ಸೆಪ್ಟೆಂಬರ್ 24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ. ಕೆಪಿಸಿಎಲ್‌ನ ಅಂಗಸಂಸ್ಥೆಯಾಗಿರುವ ಕೆಪಿಸಿ ಗ್ಯಾಸ್ ಪವರ್ ಕಾರ್ಪೊರೇಷನ್ ಲಿ. ನಿಂದ ಯಲಹಂಕದ ಕೆಪಿಸಿಎಲ್ ಯೋಜನಾ ಪ್ರದೇಶದಲ್ಲಿ ವಿದ್ಯುತ್ ಸ್ಥಾವರವನ್ನು ನಿರ್ಮಿಸಲಾಗಿದೆ. ಇದರ ಮೂಲಕ ಒಟ್ಟು 370 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಸಿಗಲಿದೆ. ಅಲ್ಲದೇ ಘಟಕವನ್ನು ಅಂದಾಜು 2,500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.
ಪವರ್ ಕಟ್‌ನಿಂದ ಮುಜುಗರ ಅನುಭವಿಸಿದ್ದ ಕೆ.ಜೆ ಜಾರ್ಜ್
ಈಚೆಗೆ ಕೋಲಾರದಲ್ಲಿ ಪವರ್ ಕಟ್‌ನಿಂದಲೇ ಇಂಧನ ಸಚಿವ ಕೆ.ಜೆ ಜಾರ್ಜ್ ಅವರು ಮುಜುಗರಕ್ಕೆ ಒಳಗಾಗಿದ್ದರು. ಇಂಧನ ಸಚಿವ ಕೆ.ಜೆ ಜಾರ್ಜ್ ಅವರು ನಡೆಸುತ್ತಿದ್ದ ಸಭೆಯಲ್ಲೇ ಪವರ್ ಕಟ್ ಆಗಿತ್ತು. ಕೋಲಾರದ ಸಭಾಂಗಣದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಪದೇ ಪದೇ ಪವರ್ ಕಟ್ ಆಗಿತ್ತು.
ಇನ್ನು ಅಂದು ಇಂಧನ ಸಚಿವ ಕೆ.ಜೆ ಜಾರ್ಜ್ ಅವರು, ಕೋಲಾರದಲ್ಲಿ ವಿದ್ಯುತ್ ಸಮಸ್ಯೆಯ ಬಗ್ಗೆಯೇ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದರು. ಪದೇ ಪದೇ ವಿದ್ಯುತ್ ಕಡಿತವಾಗಿದ್ದರಿಂದ ಅಂದು ಸಚಿವರು ಅಧಿಕಾರಿಗಳ ಮೇಲೆ ಗರಂ ಆಗಿದ್ದು ಸಹ ನಡೆದಿತ್ತು. ಪತ್ರಕರ್ತರು ನಾಳೆ ಇಂಧನ ಸಚಿವರ ಸಭೆಯಲ್ಲೇ ಪವರ್ ಕಟ್ ಎಂದು ಬರೆಯುತ್ತಾರೆ ಎಂದು ಗುಡುಗಿದ್ದರು. ಸಚಿವರು ಗುಡುಗಿದ್ದಕ್ಕೆ ಅಧಿಕಾರಿಯೊಬ್ಬರು ಕಣ್ಣೀರು ಹಾಕಿದ್ದು ಸಹ ನಡೆದಿತ್ತು.












Click it and Unblock the Notifications