ಕುಮಾರಸ್ವಾಮಿ ಇಂದ ಏನು ನಿರೀಕ್ಷಿಸಲು ಸಾಧ್ಯ; ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 27 : "ಎಚ್. ಡಿ. ಕುಮಾರಸ್ವಾಮಿ 2006ರಲ್ಲಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದವರು. ಹೀಗಾಗಿ ಅವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ?" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ ಸಿದ್ದರಾಮಯ್ಯ, "ಕುಮಾರಸ್ವಾಮಿ ಹೇಳಿಕೆ ನೋಡಿದರೆ ಅವರು ಬಿಜೆಪಿಯನ್ನು ಬೆಂಬಿಸುತ್ತಿದ್ದಾರೆ ಅನ್ನಿಸುತ್ತಿದೆ. ನಾನು ಬಿಜೆಪಿ ಸರ್ಕಾರವನ್ನು ಉಳಿಸುವೆ ಎಂದರೆ ಏನು ಅರ್ಥ?" ಎಂದು ಪ್ರಶ್ನೆ ಮಾಡಿದರು.
"ನಾನು ಬಿಜೆಪಿ ಸರ್ಕಾರ ಬೀಳಿಸುತ್ತೇನೆ ಎಂದು ಹೇಳಿಲ್ಲ. 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಬಿಜೆಪಿ ಸರ್ಕಾರ ಬಹುಮತ ಕಳೆದುಕೊಳ್ಳುತ್ತದೆ. ಆಗ ಬಿಜೆಪಿಯವರು ರಾಜೀನಾಮೆ ಕೊಡಬೇಕಾಗುತ್ತದೆ" ಎಂದು ಹೇಳಿದ್ದೆ ಎಂದರು.

ಚಿಕ್ಕೋಡಿಯಲ್ಲಿ ಮಾತನಾಡಿದ್ದ ಎಚ್. ಡಿ. ಕುಮಾರಸ್ವಾಮಿ, "ನನ್ನನ್ನು ಅಧಿಕಾರದಿಂದ ಕೆಳಗಿಳಿಸಿದ ಬಿಜೆಪಿ ವಿರುದ್ಧ ನಾನು ರಿವೇಂಜ್ ತೆಗೆದುಕೊಳ್ಳಲ್ಲ. ಮೈತ್ರಿ ಸರ್ಕಾರ ಕೆಡವಿದರು ಎಂದು ಬಿಜೆಪಿ ಸರ್ಕಾರವನ್ನು ನಾನು ಬೀಳಿಸುವುದಿಲ್ಲ" ಎಂದು ಹೇಳಿದ್ದರು.
"ಈ ಬಾರಿಯ ಚುನಾವಣೆಯಲ್ಲಿ ಪಕ್ಷಾಂತರಿಗಳನ್ನು ಜನ ತಿರಸ್ಕರಿಸಿದ್ದಾರೆ. ಗುಜರಾತ್ ಉಪಚುನಾವಣೆಯಲ್ಲಿ ಸಹ ಪಕ್ಷಾಂತರಿಗಳು ಸೋತಿದ್ದಾರೆ. ಕರ್ನಾಟಕದಲ್ಲಿ ಕೂಡಾ ಹದಿನೈದು ಸ್ಥಾನಗಳ ಪೈಕಿ ಬಹುಪಾಲು ಸ್ಥಾನಗಳು ಕಾಂಗ್ರೆಸ್ ಪಾಲಾಗಿ, ಯಡಿಯೂರಪ್ಪನವರು ರಾಜೀನಾಮೆ ನೀಡುವ ಪರಿಸ್ಥಿತಿ ನಿರ್ಮಾಣವಾಗಲಿದೆ" ಎಂದು ಸಿದ್ದರಾಮಯ್ಯ ತಿಳಿಸಿದರು.












Click it and Unblock the Notifications