ಲೋಕ ಚುನಾವಣೆ 2024: ಚುನಾವಣೆ ಎದುರಿಸಲು ಕಾಂಗ್ರೆಸ್‌ನ ಮುಂದಿನ ಸವಾಲುಗಳೇನು..?
ಬೆಂಗಳೂರು, ಅಕ್ಟೋಬರ್ 25: ಸದ್ಯದ ರಾಜ್ಯ ರಾಜಕೀಯವನ್ನು ಗಮನಿಸಿದರೆ ವಿಧಾನಸಭಾ ಚುನಾವಣೆ ಕಳೆದು ನೂತನ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳು ಕಳೆದರೂ ಒಂದಲ್ಲ ಒಂದು ರೀತಿಯ ರಾಜಕೀಯ ಬೆಳವಣಿಗೆಗಳು ಆಗುತ್ತಲೇ ಇರುವುದು ಎದ್ದು ಕಾಣಿಸುತ್ತಿವೆ. ಇದರ ನಡುವೆ ಲೋಕಸಭಾ ಚುನಾವಣೆ ಎದುರಾಗುತ್ತಿದ್ದು, ಈಗಿರುವ ಹತ್ತಾರು ಸಂಕಷ್ಟಗಳ ನಡುವೆ ಆಡಳಿತರೂಢ ಕಾಂಗ್ರೆಸ್ ಚುನಾವಣೆಯನ್ನು ಹೇಗೆ ಎದುರಿಸಲಿದೆ ಎಂಬುದೇ ಸದ್ಯದ ಕುತೂಹಲವಾಗಿದೆ.
ವಿಧಾನಸಭಾ ಚುನಾವಣೆಯಲ್ಲಿದ್ದ ಗೆಲುವಿನ ನಾಗಲೋಟ ಲೋಕ ಸಭಾ ಚುನಾವಣೆಯಲ್ಲೂ ಮುಂದುವರೆಯುತ್ತಾ? ರಾಜ್ಯದಲ್ಲಿ ಅತಿಹೆಚ್ಚಿನ ಸ್ಥಾನಗಳನ್ನು ಗೆದ್ದು ಇಂಡಿಯಾ ಮೈತ್ರಿಕೂಟದ ಕೈ ಬಲಪಡಿಸುವಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಯಶಸ್ವಿಯಾಗುತ್ತಾರಾ? ಗ್ಯಾರಂಟಿ ಯೋಜನೆಗಳು ಮತ್ತೊಮ್ಮೆ ಕೈಹಿಡಿಯುತ್ತಾ? ಎಂಬಿತ್ಯಾದಿ ಪ್ರಶ್ನೆಗಳು ರಾಜಕೀಯ ಪಡಸಾಲೆಯಲ್ಲಿ ಹುಟ್ಟಿಕೊಳ್ಳುತ್ತಿವೆ.
2023ರ ವಿಧಾಸಭಾ ಚುನಾವಣೆಯಲ್ಲಿ ಕರ್ನಾಟಕದ ಮಟ್ಟಿಗೆ ಯಾರು ಊಹಿಸಲಾಗದ ಬೆಳವಣಿಗೆಯೇ ಆಗಿದೆ. ಅದು ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಗಟ್ಟಿಗೊಳಿಸಿದರೆ, ಅಧಿಕಾರ ಕಳೆದುಕೊಂಡು ವಿರೋಧಪಕ್ಷ ಸ್ಥಾನಕ್ಕೆ ಬಂದು ಕುಳಿತ ಬಿಜೆಪಿಗೆ ದೊಡ್ಡ ಪಾಠವನ್ನೇ ಕಲಿಸಿದೆ. ಇನ್ನು ಕಿಂಗ್ ಮೇಕರ್ ಕನಸಿನಲ್ಲಿದ್ದ ಜೆಡಿಎಸ್ ಪಕ್ಷಕ್ಕೆ ಭವಿಷ್ಯದ ಪ್ರಶ್ನೆ ಎದುರಾಗುವಂತೆ ಮಾಡಿದೆ. ಇಷ್ಟೆಲ್ಲವೂ ಸುಲಭವಾಗಿ ಆಗಿಲ್ಲ. ಅದರ ಹಿಂದೆ ಕಾಂಗ್ರೆಸ್ ನಾಯಕರ ಮತ್ತು ಕಾರ್ಯಕರ್ತರ ಶ್ರಮವಿದೆ.

ಕಾಂಗ್ರೆಸ್‌ಗೆ ಬಿಜೆಪಿ ಜೆಡಿಎಸ್‌ನ ಕಾಟ
ಈ ಬೆಳವಣಿಗೆ ರಾಜ್ಯದಲ್ಲಿ ಆಗಲು ಕಾರಣಗಳೇನು ಎನ್ನುವುದನ್ನು ನೋಡುತ್ತಾ ಹೋದರೆ ಅದಕ್ಕೆ ಹತ್ತಾರು ಕಾರಣಗಳು ಸಿಗುತ್ತವೆ. ಈಗಾಗಲೇ ಸಂಪೂರ್ಣ ಬಹುಮತ ಬಾರದೆ ಜನ ಪರದಾಡಿದ್ದು, ಅಧಿಕಾರಕ್ಕೆ ಬಂದ ಸರ್ಕಾರಗಳು ನಡೆದುಕೊಂಡ ರೀತಿಗಳು ಮತ್ತು ಕಾಂಗ್ರೆಸ್ ನಾಯಕರು ಘೋಷಿಸಿದ ಗ್ಯಾರಂಟಿ ಯೋಜನೆಗಳು ಮತದಾರರು ಕಾಂಗ್ರೆಸ್ ನತ್ತ ಒಲವು ತೋರಿ ಗೆಲುವಿನ ಕಡೆಗೆ ಓಡುವಂತೆ ಮಾಡಿತು ಎನ್ನುವುದನ್ನು ನಿಸ್ಸಂದೇಹವಾಗಿ ಹೇಳಬಹುದು.
ಇದುವರೆಗಿನ ರಾಜಕೀಯವನ್ನು ಗಮನಿಸಿದರೆ ಚುನಾವಣೆ ನಡೆದು ಯಾವುದಾದರೂ ಪಕ್ಷ ಅಧಿಕಾರಕ್ಕೆ ಬಂತು ಎಂದರೆ ಎಲ್ಲವೂ ಮುಗಿದು ಹೋಯಿತು ಎನ್ನುವಂತಹ ವಾತಾವರಣ ಇರುತ್ತಿತ್ತು. ಆದರೆ ಈ ಬಾರಿ ಹಾಗೆ ಆದಂತೆ ಕಾಣುತ್ತಿಲ್ಲ. ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಹಣಿಯಲು ಸಜ್ಜಾಗಿ ನಿಂತಿವೆ. ಪ್ರತಿ ಹೆಜ್ಜೆಗೂ ಸರ್ಕಾರವನ್ನು ಕಾಡುತ್ತಿರುವುದು ಗೋಚರಿಸುತ್ತಿದೆ.
ರಾಜ್ಯದ ಸಮಸ್ಯೆ ಎದುರಿಸಬೇಕಿದೆ
ಇದೆಲ್ಲದರ ನಡುವೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗಿರುವುದು ಬಹುದೊಡ್ಡ ಬೆಳವಣಿಗೆಯಾಗಿದೆ. ಇದು ಎರಡು ಪಕ್ಷಗಳಿಗೆ ಎಷ್ಟು ಲಾಭ ತಂದುಕೊಡುತ್ತೋ ಗೊತ್ತಿಲ್ಲ. ಆದರೆ ಆಡಳಿತರೂಢ ಕಾಂಗ್ರೆಸ್ ನಾಯಕರನ್ನು ಕಾಡುತ್ತಿರುವುದಂತು ನಿಜ. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಅಧಿಕಾರದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ನೆಮ್ಮದಿಯಂತು ಇಲ್ಲದಾಗಿದೆ.

ರಾಜ್ಯದಲ್ಲಿ ಬರ ಕಾಣಿಸಿಕೊಂಡಿದ್ದರಿಂದ ರೈತರ ಬದುಕು ಚಿಂತಾಜನಕವಾಗಿದೆ. ಇನ್ನೊಂದೆಡೆ ಕಾವೇರಿ ನೀರಿದ ವಿವಾದ ಮುಂದುವರೆದಿದೆ. ರೈತರು ಮತ್ತು ಕನ್ನಡಪರ ಸಂಘಟನೆಗಳು ಚಳವಳಿ ಆರಂಭಿಸಿ ಐವತ್ತು ದಿನಗಳೇ ಕಳೆದು ಹೋಗಿವೆ. ಅತ್ತ ರೈತರು ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ನೀರು ಹರಿದು ತಮಿಳುನಾಡು ಸೇರುತ್ತಿದೆ. ಈ ಕುರಿತಂತೆ ಸರ್ಕಾರದ ಸಿಎಂ ಆಗಲೀ, ಸಚಿವರಾಗಲೀ ಚಕಾರವೆತ್ತುತ್ತಿಲ್ಲ.
ಅನುದಾನ ಸಿಗದ ಅಸಮಾಧಾನ
ಈಗಾಗಲೇ ಇನ್ನೂರಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಇನ್ನೊಂದೆಡೆ ಕಾವೇರಿ ಜಲಾನಯನ ಪ್ರದೇಶದ ಜಲಾಶಯದ ನೀರನ್ನು ನಂಬಿ ಬೆಳೆ ಬೆಳೆಯುತ್ತಿದ್ದ ರೈತರು ನೀರಿಲ್ಲದೆ ಕೈಚೆಲ್ಲಿ ಕುಳಿತಿದ್ದಾರೆ. ಜಲಾಶಯಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವುದರಿಂದ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಎದುರಾದರೂ ಅಚ್ಚರಿಯಿಲ್ಲ.
ಇದೆಲ್ಲದರ ನಡುವೆ ವಿದ್ಯುತ್ ಕ್ಷಾಮ ತಲೆದೋರಿದೆ. ಇದನ್ನು ನಿಭಾಯಿಸಲು ಲೋಡ್ ಶೆಡ್ಡಿಂಗ್ ಮೊರೆ ಹೋಗಿದ್ದು, ಇದು ಉದ್ಯಮಗಳ ಮೇಲೆ ಹೊಡೆತ ಮಾತ್ರವಲ್ಲದೆ, ರೈತರ ಮೇಲೂ ಪರಿಣಾಮ ಬೀರಿದೆ. ಪಂಪ್ ಸೆಟ್ ಮೂಲಕ ಬೆಳೆಗಳಿಗೆ ನೀರು ಹಾಯಿಸಲಾಗದೆ ರೈತರು ಹಿಡಿ ಶಾಪ ಹಾಕುತ್ತಿದ್ದಾರೆ. ಇನ್ನೊಂದೆಡೆ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆ ಎದುರಾಗಿದೆ ಎಂಬ ಆರೋಪಗಳು ಆಡಳಿತ ವಲಯದಿಂದಲೇ ಕೇಳಿಬರುತ್ತಿದೆ.

ನರೇಂದ್ರ ಮೋದಿ ವಿರುದ್ಧದ ಚುನಾವಣೆ
ಇಷ್ಟೇ ಆಗಿದ್ದರೆ ತೊಂದರೆ ಇರಲಿಲ್ಲ. ಆದರೆ ರಾಜ್ಯ ಕಾಂಗ್ರೆಸ್ ನಲ್ಲಿ ಬಣಗಳ ಬಡಿದಾಟವೂ ಶುರುವಾಗಿದೆ. ಅವು ಮೇಲಿಂದ ಮೇಲೆ ಹಲವು ಸಂದರ್ಭಗಳಲ್ಲಿ ಗೋಚರಿಸುತ್ತಲೇ ಇದೆ. ಇದರ ಜತೆಗೆ ಎದುರಿಸಲೇ ಬೇಕಾದ ಹತ್ತು ಹಲವು ಸಮಸ್ಯೆಗಳು ಆಡಳಿತ ರೂಢ ಕಾಂಗ್ರೆಸ್ ನಲ್ಲಿದೆ. ಇದೆಲ್ಲವನ್ನು ನಿಭಾಯಿಸಿಕೊಂಡು ಮುಂದಿನ ಲೋಕಸಭಾ ಚುನಾವಣೆಗೆ 'ಕೈ' ನಾಯಕರು ಸಜ್ಜಾಗಬೇಕಾಗಿದೆ. ವಿರೋಧ ಪಕ್ಷದಲ್ಲಿದ್ದಾಗ ಆಡಳಿತ ಪಕ್ಷದ ಮೇಲೆ ಆರೋಪ ಮಾಡುತ್ತಾ ಚುನಾವಣೆ ಎದುರಿಸುವುದಕ್ಕೂ. ಆಡಳಿತದಲ್ಲಿದ್ದು, ವಿರೋಧ ಪಕ್ಷಗಳ ಟೀಕೆಗಳನ್ನು ಎದುರಿಸುತ್ತಾ ಚುನಾವಣೆಗೆ ಹೋಗುವುದಕ್ಕೂ ವ್ಯತ್ಯಾಸವಿದೆ.
ಸದ್ಯದ ರಾಜ್ಯ ರಾಜಕೀಯದ ಪರಿಸ್ಥಿತಿಯನ್ನು ಗಮನಿಸಿದ್ದೇ ಆದರೆ ಮುಂದಿನ 2024ರ ಲೋಕಸಭಾ ಚುನಾವಣೆಯನ್ನು ಅಷ್ಟೊಂದು ಸುಲಭವಾಗಿ ಪರಿಗಣಿಸಲು ಸಾಧ್ಯವಿಲ್ಲ. ಅದು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೋ ಬೇಡವೋ ಎಂಬ ಎರಡೇ ವಿಷಯದಲ್ಲಿ ನಡೆಯುತ್ತಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಲೋಕಸಭಾ ಚುನಾವಣೆಯನ್ನು ಯಾವ ದೃಷ್ಟಿಯಿಂದ ನೋಡುತ್ತದೆ. ಮತ್ತು ಯಾವ ವಿಚಾರವನ್ನು ಮುಂದಿಟ್ಟುಕೊಂಡು ಮತದಾರರ ಮುಂದೆ ಹೋಗುತ್ತದೆ ಎಂಬುದು ಕುತೂಹಲಕಾರಿಯಾಗಿದೆ.












Click it and Unblock the Notifications