ಹವಾಮಾನ ವೈಪರಿತ್ಯ: ಕರ್ನಾಟಕದಲ್ಲಿ ಭಾರಿ ಮಳೆ, 20ಕ್ಕೂ ಹೆಚ್ಚು ಜಿಲ್ಲೆಗೆ 3 ದಿನ 'ಯೆಲ್ಲೋ ಅಲರ್ಟ್'
ಬೆಂಗಳೂರು, ಅಕ್ಟೋಬರ್ 11: ''ಹವಾಮಾನದಲ್ಲಿನ ತೀವ್ರ ವೈಪರಿತ್ಯಗಳ ಪರಿಣಾಮ ಮುಂದಿನ 4-5 ದಿನ ಕರ್ನಾಟಕದಾದ್ಯಂತ ಮಳೆ ಅಬ್ಬರ ಮುಂದುವರಿಯಲಿದೆ. ಗುರುವಾರದವರೆಗೆ ಎಲ್ಲ ಜಿಲ್ಲೆಗಳ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆ ಬೀಳಲಿದೆ'' ಎಂದು ಭಾರತೀಯ ಹವಾಮಾನ ಇಲಾಖೆ ಕರ್ನಾಟಕ ಕೇಂದ್ರ ಮುನ್ಸೂಚನೆ ನೀಡಿದೆ.
''ತಮಿಳುನಾಡು ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ, ರಾಜಸ್ಥಾನ ಈಶಾನ್ಯ ಭಾಗದಲ್ಲಿ ಸಮುದ್ರ ಮಟ್ಟದಿಂದ ಸುಮಾರು 2 ಕಿ.ಮೀ.ನಷ್ಟು ಎತ್ತರದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿದೆ. ಇದರೊಂದಿಗೆ ನೈಋತ್ಯ ಬಂಗಾಳಕೊಲ್ಲಿಯಲ್ಲಿ ಸಹ ಮೇಲ್ಮೈ ಸುಳಿಗಾಳಿ ತೀವ್ರಗೊಂಡಿದೆ. ಈ ಎಲ್ಲ ಕಾರಣಗಳಿಂದ ರಾಜ್ಯಾದ್ಯಂತ ಮಳೆ ಆಗುತ್ತಿದೆ'' ಎಂದು ಹವಾಮಾನ ಇಲಾಖೆ ವಿಜ್ಞಾನಿಗಳು ತಿಳಿಸಿದ್ದಾರೆ.
ವಾತಾವರಣದಲ್ಲಿನ ಈ ಎಲ್ಲ ಬದಲಾವಣೆಗಳು ಹಿಂಗಾರು (ಈಶಾನ್ಯ) ಮಳೆ ಆರಂಭದ ಮುನ್ಸೂಚನೆಗಳು ಎಂದರೂ ಸಹ ಅದು ದೇಶ ಪ್ರವೇಶಿಸಲು ಇನ್ನೂ ಮೂರು ಇಲ್ಲವೇ ನಾಲ್ಕು ದಿನ ಹಿಡಿಯಬಹುದು. ಅಲ್ಲಿಯವರೆಗೆ ಮಳೆ ಯಥಾಸ್ಥಿತಿಯಲ್ಲಿರುವ ಸಾಧ್ಯತೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ವಿಜ್ಞಾನಿ ಡಾ.ಪ್ರಸಾದ್ ತಿಳಿಸಿದರು.

ಎಲ್ಲ ಜಿಲ್ಲೆಗಳಿಗೆ ಮಳೆ: ಯೆಲ್ಲೋ ಅಲರ್ಟ್
ಕರ್ನಾಟಕ ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಮಂಗಳವಾರ ಮಾತ್ರ ಗುಡುಗು, ಮಿಂಚು ಸಹಿತ ಜೋರು ಮಳೆ ಬೀಳಲಿದ್ದು, ಒಂದು ದಿನ ಮಾತ್ರ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಇನ್ನು ಮಲೆನಾಡು ಸೇರಿದಂತೆ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಗುರುವಾರದವರೆಗೆ ಭಾರಿ ಮಳೆ ಮುಂದುವರಿಯಲಿದೆ.
ಉತ್ತರ ಒಳನಾಡು ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ದಿನ ಬಿಟ್ಟು ದಿನ ಮಳೆ ಜೋರಾಗಿ ಬೀಳಲಿದೆ. ಈ ಕಾರಣದಿಂದ ಇಷ್ಟು ಜಿಲ್ಲೆಗಳಿಗೆ ಗುರುವಾರದವರೆಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.

ಕೆಲ ದಿನ ಇದೇ ವಾತಾವರಣ ಮುಂದುವರಿಕೆ
ಇದೇ ಅವಧಿಯಲ್ಲಿ ಭಾರಿ ಮಳೆ ನಿರೀಕ್ಷಿತ ಪ್ರದೇಶಗಳ ಹೊರತಾಗಿ ಉಳಿದ ಜಿಲ್ಲೆಗಳು ಹಾಗೂ ಪ್ರದೇಶಗಳಲ್ಲಿ ಹಗುರ ಮಳೆ, ಇಲ್ಲವೇ ಆಗಾಗ ಕೆಲ ಕಾಲ ಜಿಟಿ ಜಿಟಿ ಮಳೆ ಸುರಿಯಲಿದೆ. ರಾಜ್ಯಾದ್ಯಂತ ಮೋಡ ಮುಸುಕಿದ ಹಾಗೂ ಚಳಿಯ ವಾತಾವರಣವೇ ಕಂಡು ಬರಲಿದೆ. ಇದರ ಹೊರತು ಯಾವುದೇ ಗಂಭೀರ ರೂಪದ ಬದಲಾವಣೆಗಳು ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು, ಕೊಪ್ಪಳದಲ್ಲಿ ಭಾರಿ ಮಳೆ ದಾಖಲು
ಕಳೆದ 24 ಗಂಟೆಗಳಲ್ಲಿ ಕೊಪ್ಪಳ, ಮೈಸೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಧಿಕ ಮಳೆ ದಾಖಲಾಗಿದೆ. ಬೇವೂರು, ಟಿ ನರಸೀಪುರದಲ್ಲಿ ತಲಾ 8 ಸೆಂ.ಮೀ, ಹುಣಸೂರು, ಶ್ರೀರಂಗಪಟ್ಟಣದಲ್ಲಿ ತಲಾ 7 ಸೆಂ.ಮೀ.ಮಳೆ ದಾಖಲಾಗಿದೆ. ಇದರೊಂದಿಗೆ ಹಾವೇರಿ ಎಪಿಎಂಸಿಯ ಮತ್ತು ಚಾಮರಾಜನಗರ ತಲಾ 6 ಸೆಂ.ಮೀ, ರಾಣಿಬೆನ್ನೂರು, ಕೋಲಾರ, ಅರಕಲಗೂಡು, ಹರಪನಹಳ್ಳಿ ಮೈಸೂರಲ್ಲಿ ತಲಾ 5 ಸೆಂ. ಮೀ. ಮಳೆ ದಾಖಲಾಗಿದೆ.

ಗೋಕರ್ಣದಲ್ಲಿ ಗರಿಷ್ಠ ತಾಪಮಾನ ದಾಖಲು
ಉಳಿದಂತೆ ಗದಗ, ಕೆ.ಆರ್.ಪೇಟೆ, ಸರಗೂರು, ಭಾಲ್ಕಿ, ಇಳಕಲ್, ಲೊಂಡಾ, ಹಿರಿಯೂರು, ಭದ್ರಾವತಿ, ಮಾಲೂರು, ಭಾಗಮಂಡಲ ಸೇರಿದಂತೆ ಅನೇಕ ಕಡೆಗಳಲ್ಲಿ ಸಾಧಾರಣವಾಗಿ ಮಳೆ ದಾಖಲಾಗಿದೆ. ಈ ವೇಳೆ ರಾಜ್ಯದ ಗರಿಷ್ಠ ತಾಪಮಾನ ಗೋಕರ್ಣದಲ್ಲಿ 33.8 ಡಿಗ್ರಿ ಸಲ್ಸಿಯಸ್, ಕಲಬುರಗಿ 32 ಡಿ.ಸೆ, ಹಂಪಿ, ವಿಜಯಪುರ ಮತ್ತು ಬಾದಾಮಿಯಲ್ಲಿ ತಲಾ 30 ಡಿ.ಸೆ. ದಾಖಲಾಗಿದೆ. ಇನ್ನೂ ರಾಜ್ಯದ ಕನಿಷ್ಠ ತಾಪಮಾನ ಬೆಂಗಳೂರು ಜಿಕೆವಿಕೆಯಲ್ಲಿ 17.6ಸೆಂ.ಮೀ.ಕಂಡು ಬಂದಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.












Click it and Unblock the Notifications