Karnataka weather: ಕರ್ನಾಟಕದ 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂದಿನ 4 ದಿನ ಮಳೆ, ಚಳಿ ಏರಿಕೆ ಸಾಧ್ಯತೆ
ಬೆಂಗಳೂರು, ನವೆಂಬರ್ 24: ಕರ್ನಾಟಕದಲ್ಲಿ ಮುಂದಿನ ಐದು ದಿನಗಳ ಪೈಕಿ ನಾಲ್ಕು ದಿನ ಸುಮಾರು 25 ಜಿಲ್ಲೆಗಳಲ್ಲಿ ಮಳೆ ಸುರಿಯುವ ಲಕ್ಷಣಗಳು ಇವೆ. ಇದರ ಜೊತೆಗೆ ಮಬ್ಬು ವಾತಾವರಣ ಹಾಗೂ ಚಳಿ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ತಿಳಿಸಿದೆ.
ಬೆಂಗಳೂರು ನಗರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜ ನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಚಿಕ್ಕಮಗಳೂರು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿಮೊಗ್ಗ, ತುಮಕೂರು ಸೇರದಂತೆ ಕರ್ನಾಟಕದ ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಮುಂದಿನ ಮೂರರಿಂದ ನಾಲ್ಕು ದಿನಗಳ (ನ. 28 ರವರೆಗೆ) ಕಾಲ ದಿನವಿಡಿ ಆಗಾಗ ಮಳೆ ಬರಲಿದೆ.
ಅದೇ ರೀತಿ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ರಾಯಚೂರು, ವಿಜಯಪುರ ಹಾಗೂ ಕರಾವಳಿ ಕರ್ನಾಟಕದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಜೋರು ಮಳೆ ಸುರಿಯಲಿದೆ. ಈ ಎಲ್ಲ 25 ಜಿಲ್ಲೆಗಳಲ್ಲಿ ಕೆಲವೆಡೆ ದಿನವಿಡಿ ಸೋನೆ ಮಳೆ ಸುರಿದರೆ, ಇನ್ನು ಕೆಲವೆಡೆ ಆಗಾಗ ಹಗುರದಿಂದ ಸಾಧಾರಣದಿಂದ ಮಳೆ ಬೀಳುವ ನಿರೀಕ್ಷೆ ಇದೆ.
|
ಚಳಿ, ಮಳೆ ಜತೆಗೆ ಮಬ್ಬು ವಾತಾವರಣ ನಿರ್ಮಾಣ
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಮುಂದಿನ ನಾಲ್ಕು ದಿನ ಮಲೆನಾಡು ಒಳಗೊಂಡ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಬೆಳಗ್ಗೆ ಮತ್ತು ಸಂಜೆ ನಂತರ ಅತ್ಯಧಿಕ ಚಳಿ ಕಂಡು ಬರಲಿದೆ. ದಿನಪೂರ್ತಿ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದೆ. ಕಳೆದ ಎರಡು ದಿನದಿಂದ ಬೆಂಗಳೂರು ನಗರ ಸೇರಿದಂತೆ ಕರ್ನಾಟಕದಾದ್ಯಂತ ಜಿಟಿ ಜಿಟಿ ಮಳೆ ಸುರಿಯಲಾರಂಭಿಸಿದೆ. ಚುಮು ಚಮು ಚಳಿ ದಾಖಲಾಗಿದೆ.
ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ವಾಯುಭಾರ ಸೃಷ್ಟಿಯಾಗಿದೆ. ಅದು ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನ ಕರಾವಳಿ ಭಾಗದತ್ತ ಸಂಚರಿಸಿದೆ. ಇದರ ಪರಿಣಾಮವಾಗಿ ಈ ಕರಾವಳಿ ಭಾಗದ ಎರಡು ಕಡೆಗಳಲ್ಲಿ ಮೇಲ್ಮೈ ಸುಳಿಗಾಳಿ ನಿರ್ಮಾಣವಾಗಿದೆ. ಈ ಕಾರಣದಿಂದ ಕೆಲವು ದಿನಗಳಿಂದ ಬಿಸಿಲು ಮರೆಯಾಗಿ ಎಲ್ಲೆಡೆ ಮಳೆಯ ಆಗಮನವಾಗುತ್ತಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ದಕ್ಷಿಣ ಒಳನಾಡಿನಲ್ಲಿ ಅಧಿಕ ಮಳೆ ಬಿದ್ದಿದೆ
ಕಳೆದ 24ಗಂಟೆಯಲ್ಲಿ ರಾಜ್ಯದ ಹಲವು ಕಡೆಗಳಲ್ಲಿ ಮಳೆ ಬಿದ್ದಿದೆ. ಅದರಲ್ಲಿ ದಕ್ಷಿಣ ಒಳನಾಡಿನ ಕೋಲಾರ ಜಿಲ್ಲೆಯ ಬಂಗಾರಪೇಟೆ 62.5 ಮಿ.ಮೀ. ಅಧಿಕ ಮಳೆ ದಾಖಲಾಗಿದೆ. ಉಳಿದಂತೆ ಅದೇ ಜಿಲ್ಲೆಯ ಐನೋರಹೊಸಹಳ್ಳಿ 59.5ಮಿ.ಮೀ., ಮತ್ತು ಚಿನ್ನಕೋಟೆ 57.5ಮಿ.ಮೀ., ಬೆಳಗಾವಿ 29.5ಮಿ.ಮೀ., ಚಿಕ್ಕಬಳ್ಳಾಪುರ 29ಮಿ.ಮೀ., ರಾಮನಗರ 26.5ಮಿ.ಮೀ., ಬೆಂಗಳೂರು ನಗರ ವ್ಯಾಪ್ತಿಯಲ್ಲಿ 25ಮಿ.ಮೀ., ಬೆಂಗಳೂರು ಗ್ರಾಮಾಂತರ 23ಮಿ.ಮೀ., ಹಾಸನ 20 ಮಿ.ಮೀ., ಚಿಕ್ಕಮಗಳೂರು 17ಮಿ.ಮೀ, ತುಮಕೂರು 16ಮಿ.ಮೀ, ಮಂಡ್ಯ 14.5 ಮಿ.ಮೀ. ಹಾಗೂ ಮೈಸೂರು ಜಿಲ್ಲೆಯಲ್ಲಿ 12 ಮಿ.ಮೀ, ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ದೃಢಪಡಿಸಿದೆ.

ಗದಗ, ಬೆಂಗಳೂರು HALನಲ್ಲಿ ಕನಿಷ್ಠ ಉಷ್ಣಾಂಶ
ಕರ್ನಾಟಕ ರಾಜ್ಯ ಗರಿಷ್ಠ ತಾಪಮಾನ ನೋಡುವುದಾದರೆ ಗುರುವಾರ ಬೆಳಗ್ಗೆ 9 ಗಂಟೆವರೆಗಿನ ಮಾಹಿತಿ ಪ್ರಕಾರ, ಕರಾವಳಿ ಭಾಗದ ಕಾರವಾರ, ಗೋಕರ್ಣ ಮತ್ತು ಹೊನ್ನಾವರ ವ್ಯಾಪ್ತಿಯಲ್ಲಿ ತಲಾ 33 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಜೊತೆಗೆ ಮೈಸೂರು, ಮಂಗಳೂರು, ಹಂಪಿ, ಗದಗ ಸುತ್ತಮುತ್ತ ತಲಾ 30 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇನ್ನು ಗದಗ ಹಾಗೂ ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ ಭಾಗದಲ್ಲಿ ತಲಾ 18ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ವರದಿ ತಿಳಿಸಿದೆ.

ಬೆಂಗಳೂರಲ್ಲಿ ಮಳೆ, ಚಳಿ ಉಲ್ಬಣ
ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಚಳಿ, ಜಿಟಿ ಜಿಟಿ ಮಳೆ ಕಂಡು ಬರಲಿದೆ. ಬುಧವಾರದಿಂದ ಸೋನೆ ಮಳೆ ಆರಂಭವಾಗಿದೆ. ಬೆಂಗಳೂರು ನಗರದಲ್ಲಿ ಗರಿಷ್ಠ 25.6 ಡಿ.ಸೆ. ಗರಿಷ್ಠ ಮತ್ತು 20.4ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗರಿಷ್ಠ 24.6ಡಿ.ಸೆ. ಗರಿಷ್ಠ ಮತ್ತು 20.2 ಕನಿಷ್ಠ ಉಷ್ಣಾಂಶ ಹಾಗೂ ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಗರಿಷ್ಠ 25.2ಡಿ.ಸೆ. ಮತ್ತು ಕನಿಷ್ಠ 18.5ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ವರದಿ ತಿಳಿಸಿದೆ.












Click it and Unblock the Notifications