Bengaluru Rains: ಬೆಂಗಳೂರಲ್ಲಿ ಇಂದು ಮಳೆ ಮುನ್ಸೂಚನೆ
ಬೆಂಗಳೂರು, ನ. 05: ಬೆಂಗಳೂರಿನಲ್ಲಿ ಮತ್ತೆ ವರುಣನ ಸಿಂಚನವಾಗಿದ್ದು, ಹಿಂಗಾರು ಮಳೆಯ ಆರಂಭವಾಗಿದೆ. ಈ ವಾರದಲ್ಲಿ ಕೂಡ ಹಲವು ಭಾಗಗಳಲ್ಲಿ ಸಾಧಾರಣ ಮಳೆ ಕಾಣಿಸಿಕೊಂಡಿದೆ. ಹವಾಮಾನ ಇಲಾಖೆ ನವೆಂಬರ್ 5ರಿಂದ ಐದು ದಿನಗಳ ಕಾಲ ಮಳೆ ವ್ಯಾಪಕವಾಗಿ ಸುರಿಯಲಿದೆ ಎಂದು ತಿಳಿಸಿದೆ. ಬೆಂಗಳೂರಿನಲ್ಲಿ ನವೆಂಬರ್ 5ರ ವರೆಗೆ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಇದಕ್ಕೆ ಪೂರಕವಾಗಿ ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬೆಂಗಳೂರಿಗೆ ಹಳದಿ ಅಲರ್ಟ್ ನೀಡಿದ್ದು, ನಗರದಲ್ಲಿ ನವೆಂಬರ್ 5ರವರೆಗೆ ಮಳೆ ಮುಂದುವರಿಯಲಿದೆ ಎಂದು ಹೇಳಿದೆ. ಬೆಂಗಳೂರಿನಲ್ಲಿ ಕಳೆದ ಅಕ್ಟೋಬರ್ 1ರಿಂದ ಇಲ್ಲಿಯವರೆಗೆ 311.5 ಮಿ.ಮೀ ಮಳೆಯಾಗಿದೆ. ಸಿಲಿಕಾನ್ ಸಿಟಿಯ ನಗರದಲ್ಲಿ ಈ ವರ್ಷ ಇಲ್ಲಿಯವರೆಗೆ 1,795.5 ಮಿಮೀ ಮಳೆ ದಾಖಲಾಗಿದೆ.
ರಾಜ್ಯದ ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಭಾಗಗಳಲ್ಲಿ ಮಳೆಯಾಗಲಿದೆ. ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಿಸಿದೆ. ಮಂಗಳವಾರ ನಗರದಲ್ಲಿ ಮೋಡ ಕವಿದ ವಾತಾವರಣ ಕಂಡು ಬಂದಿತ್ತು. ಆದರೆ, ಸಂಜೆ ಜಿಟಿ ಜಿಟಿ ಮಳೆ ಆರಂಭವಾಯಿತು. ಜಯನಗರ, ಶಾಂತಿನಗರ, ವಿಜಯನಗರ, ಯಲಹಂಕ, ಹೆಬ್ಬಾಳ, ಚಾಮರಾಜಪೇಟೆ, ವಿಧಾನಸೌಧ ಸೇರಿದಂತೆ ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣವಾಗಿ ಹಿಂಗಾರು ಮಳೆಯಾಗಿತ್ತು.

ಕನ್ನಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳ ಮೇಲೂ ವರುಣ ಪರಿಣಾಮ ಬೀರಿದ್ದ, ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸುವ ರಾಜ್ಯ ಸರ್ಕಾರದ ಕಾರ್ಯಕ್ರಮವು ಕೂಡ ಮಳೆಯ ನಡುವೆಯೇ ನಡೆದಿತ್ತು. ಈಶಾನ್ಯ ಮಾನ್ಸೂನ್ ಮಾರುತಗಳಿಂದಾಗಿ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ತಮಿಳುನಾಡು, ಪುದುಚೇರಿಯ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಮಳೆ ಆರಂಭವಾಗಿದೆ. ಆಂಧ್ರ ಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಲ್ಲಿಯೂ ಈ ವರ್ಷ ಭಾರೀ ಮಳೆಯ ನಿರೀಕ್ಷೆಯಿದೆ. ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಚೆನ್ನೈನಲ್ಲಿ ಭಾರೀ ಮಳೆಯ ನಂತರ, ನಗರದ ಕೆಲವು ಪ್ರದೇಶಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರವು (KSNDMC) ಸಹ ರಾಜ್ಯದಾದ್ಯಂತ ರಾಜ್ಯ ನಕ್ಷೆಯು ಸೇರಿದಂತೆ ಬೆಂಗಳೂರು ನಗರದ ಕೆಲವು ಭಾಗಗಳನ್ನು ನೀಲಿ ಬಣ್ಣದಲ್ಲಿ ಚಿತ್ರಿಸಿದೆ. ಆ ಭಾಗಗಳಲ್ಲಿ ಭಾರಿ ಮಳೆ ಆಗುವ ನಿರೀಕ್ಷೆಯಿದೆ ಎಂದು ಸೂಚಿಸುತ್ತದೆ.












Click it and Unblock the Notifications