ಮಠ-ಮಾನ್ಯಗಳ ಉಳಿವಿಗೆ ಮಠಾಧಿಪತಿಗಳ ಕೈಗೆ ಆಯುಧ ಕೊಡಬೇಕು: ಚರ್ಚೆಗೆ ಗ್ರಾಸವಾದ ದಿಂಗಾಲೇಶ್ವರ ಶ್ರೀ ಹೇಳಿಕೆ
ಹುಬ್ಬಳ್ಳಿ, ಡಿಸೆಂಬರ್ 18: ನಮ್ಮ ಸಮಾಜದ ನಾಯಕರು, ಮಠಾಧಿಪತಿಗಳ ಕೈಯಲ್ಲಿ ಆಯುಧ ಕೊಡಬೇಕು. ಆಯುಧ ಕೊಟ್ಟು ಮಠ ಮಾನ್ಯಗಳು, ಗಣ್ಯರ ರಕ್ಷಣೆ ಮಾಡಬೇಕು ಎಂದು ಪುರಾಣದ ಮಾತು ಉಲ್ಲೇಖಿಸಿ ಆಯುಧ ಕೊಡಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿಗಳು ಹೇಳಿದ್ದಾರೆ. ಇದೀಗ ಅವರ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹುಬ್ಬಳ್ಳಿಯಲ್ಲಿ ನಡೆದ ಜಗದೀಶ್ ಶೆಟ್ಟರ್ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಪ್ರಚೋದಾನಾಕಾರಿ ಭಾಷಣವನ್ನು ಮಾಡಿದ್ದಾರೆ. ಅವರು ಹೇಳಿಕೆಯು ಹೆಚ್ಚು ಮುನ್ನೆಲೆಗೆ ಬಂದಿದೆ.

ದೇವಿ ಕಡೆ ಸ್ವತಂತ್ರ ಆಯುಧ ಇರಲಿಲ್ಲ. ಎಲ್ಲರೂ ಒಂದು ಆಯುಧ ಕೊಟ್ಟಿರುವ ಕಾರಣಕ್ಕೆ ದುಷ್ಟರ ಸಂಹಾರ ಮಾಡಿದಳು. ಇದನ್ನು ಹೇಳೋಕೆ ಕಾರಣ, ನಮ್ಮ ನಾಯಕರುಗಳಿಗೆ ಒಬ್ಬೊಬ್ಬರು ಆಯುಧ ಕೊಡಬೇಕು. ಸಮಾಜದಲ್ಲಿ ಬಲಿಷ್ಠ ಆಗುವ ವ್ಯಕ್ತಿಗಳಿಗೆ ತೊಂದರೆ ಕೊಡುವ ಕೆಲಸ ಈ ನಾಡಿನಲ್ಲಿದೆ. ಮಠಾಧಿಪತಿಗಳಿಗೂ ಇದು ತಪ್ಪಿಲ್ಲ. ಮಠಾಧಿಪತಿಗಳನ್ನು ತೇಜೋವಧೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ.
ನಮ್ಮ ಮಠಗಳನ್ನ ನಾಶ ಮಾಡುವುದರ ಜೊತೆಗೆ ಎರಡನೇ ಹಂತದ ನಾಯಕರನ್ನು ರಾಜಕೀಯವಾಗಿ ನಾಶ ಮಾಡುವ ವ್ಯವಸ್ಥೆ ಇದೆ. ಹುಟ್ಟು ಹಬ್ಬದಲ್ಲಿ ಇದನ್ನು ಹೇಳಬೇಕೋ ಬೇಡವೋ, ಆದರೆ ನಮ್ಮ ಭಾವನೆ ಹೇಳುತ್ತೇನೆ. ಯಾರ ಅಧಃಪತನವನ್ನೂ ನಾವು ಸಹಿಸಬಾರದು. ಮಠಾಧೀಪತಿಗಳು, ರಾಜಕೀಯ ನಾಯಕರು ಸಮಾಜಕ್ಕೆ ಆಧಾರಸ್ತಂಭವಿದ್ದಂತೆ. ಲಿಂಗಾಯತ ನಾಯಕರು ಕಂಬ ಗಟ್ಟಿಯಾಗಿರಬೇಕು ಎಲ್ಲರೂ ಎಚ್ಚೆತ್ತುಕೊಳ್ಳುವ ಕಾಲ ಬಂದಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಬಿಜೆಪಿ ವಿರುದ್ಧ ಹರಿಹಾಯ್ದಿದ್ದ ಸ್ವಾಮೀಜಿ
ಈ ಹಿಂದೆ ಬಿಜೆಪಿ ವಿರುದ್ಧ ಹರಿಹಾಯ್ದು ಭವಿಷ್ಯ ನುಡಿದಿದ್ದ ಶ್ರೀ ದಿಂಗಾಲೇಶ್ವರ ಸ್ವಾಮೀಜಿಗಳು, ಬಿಜೆಪಿ ರಾಜಕಾರಣದಲ್ಲಿ ಭಾರೀ ಸೋಲುಂಡು ಮುಖಭಂಗ ಅನುಭವಿಸಲಿದೆ ಎಂದು 2021ರಲ್ಲಿ ಭವಿಷ್ಯ ನುಡಿದಿದ್ದರು.

ಮಾಜಿ ಸಿಎಂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಸ್ಥಾನದಿಂದ ಕೆಳಗಿಳಿಸಿದ ಬಳಿಕ ದಿಂಗಾಲೇಶ್ವರ ಸ್ವಾಮೀಜಿ ಆಕ್ರೋಶಗೊಂಡಿದ್ದರು. ಭವಿಷ್ಯ ನುಡಿಯುವ ಮೂಲಕ ಬಿಜೆಪಿಗೆ ಎಚ್ಚರಿಕೆ ಸಂದೇಶ ನೀಡಿದ್ದರು. ಕರ್ನಾಟಕದಲ್ಲಿ ಬಿಜೆಪಿಗೆ ನೆಲೆ ಸಿಗಲು ಕಾರಣವಾದ ಯಡಿಯೂರಪ್ಪ ಅವರನ್ನೇ ನೀವು ಕಡೆಗಣಿಸಿದ್ದೀರಾ. ಮುಂದಿನ ದಿನಗಳಲ್ಲಿ ಬಿಎಸ್‌ವೈ ಅವರ ಕಣ್ಣೀರಿನಲ್ಲಿ ಬಿಜೆಪಿ ಕೊಚ್ಚಿ ಹೋಗಲಿದೆ ಎಂದು ಹೇಳಿದ್ದರು.
ಅದರಂತೆ ಪ್ರಸಕ್ತ ಸಾಲಿನಲ್ಲಿ ಕಾಂಗ್ರೆಸ್ ಮುಂದೆ ಬಿಜೆಪಿ ಸೋಲು ಕಾಣಬೇಕಾಯಿತು. ತದನಂತರದ ಬೆಳವಣಿಗೆ ರಾಜ್ಯದ ಜನರಿಗೆ ಗೊತ್ತಿದೆ. ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಹರನ್ನು ನೇಮಿಸುವಲ್ಲಿ ಸಹ ಬಿಜೆಪಿ ಮುಖಭಂಗ ಎದುರಿಸಿತು.
ಇದೀಗ ನಾಯಕರ ಕೈಗೆ, ಮಠಾಧೀಶರ ಕೈಗೆ ಆಯುಧ ಕೊಡಬೇಕು. ತೇಜೋವಧೆ ನಡೆಯುತ್ತಿದೆ ಎಂದೆಲ್ಲ ಹೇಳಿದ್ದ ಸ್ವಾಮೀಜಿ ಹೇಳಿಕೆ ಚರ್ಚೆ ಹುಟ್ಟು ಹಾಕಿದೆ.












Click it and Unblock the Notifications