ಮಮತಾ ಬ್ಯಾನರ್ಜಿಗೆ ನೈತಿಕ ಬೆಂಬಲ ನೀಡಿ ಎಚ್‌ಡಿಕೆ ಟ್ವೀಟ್
ಬೆಂಗಳೂರು, ಮಾರ್ಚ್ 11; ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಕಾವು ಹೆಚ್ಚಾಗತೊಡಗಿದೆ. ಮಾರ್ಚ್ 27ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಒಟ್ಟು 8 ಹಂತಗಳಲ್ಲಿ ಮತದಾನ ನಡೆಯಲಿದೆ. ಮೇ 2ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.
ಬುಧವಾರ ನಂದಿಗ್ರಾಮ ವಿಧಾನಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಮಮತಾ ಬ್ಯಾನರ್ಜಿ ನಾಮಪತ್ರ ಸಲ್ಲಿಕೆ ಮಾಡಿದರು. ಬಳಿಕ ಅವರ ಮೇಲೆ ದಾಳಿ ನಡೆದಿದೆ. ಈ ಘಟನೆಯನ್ನು ವಿವಿಧ ಪಕ್ಷದ ರಾಜಕೀಯ ನಾಯಕರು ಖಂಡಿಸಿದ್ದಾರೆ.
ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ಮಮತಾ ಬ್ಯಾನರ್ಜಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಅವರ ಎಡಗಾಳಿನ ಪಾದದ ಮೂಳೆಗೆ ಪೆಟ್ಟು ಬಿದಿದ್ದು, ಭುಜ, ತೋಳಿಗೆ ಸಹ ಗಾಯವಾಗಿದೆ. ಅವರು ಚಿಕಿತ್ಸೆ ಪಡೆಯುತ್ತಿರುವುದರಿಂದ ಎಲ್ಲಾ ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ.

ಎಚ್. ಡಿ. ಕುಮಾರಸ್ವಾಮಿ ಟ್ವೀಟ್; ಮಮತಾ ಬ್ಯಾನರ್ಜಿ ಅವರ ಮೇಲಿನ ಹಲ್ಲೆಯನ್ನು ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಖಂಡಿಸಿದ್ದಾರೆ. ಈ ಕುರಿತು ಅವರು ಗುರುವಾರ ಟ್ವೀಟ್ ಮಾಡಿದ್ದಾರೆ.
"ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲಿನ ಹಲ್ಲೆ ಘಟನೆ ತಿಳಿದು ಆಘಾತವಾಯ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಶೀಘ್ರ ಗುಣಮುಖರಾಗಲಿ. ಚುನಾವಣೆಗಳನ್ನು ಪ್ರಜಾಸತ್ತಾತ್ಮಕವಾಗಿ ಗೆಲ್ಲಬೇಕು. ಹಿಂಸೆಯಿಂದ ಅಲ್ಲ. ಘಟನೆಯನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಚುನಾವಣಾ ವ್ಯವಸ್ಥೆಯನ್ನು ರಕ್ಷಿಸಬೇಕು" ಎಂದು ಹೇಳದ್ದಾರೆ.
"ಬಂಗಾಳದಲ್ಲಿ ಅತ್ಯಂತ ಜನಪರ ಮತ್ತು ಸ್ವಚ್ಛ ಆಡಳಿತವನ್ನು ಮಮತಾ ಬ್ಯಾನರ್ಜಿ ನೀಡಿದ್ದಾರೆ. ಹೀಗಾಗಿ ಅವರಿಗೆ ಜನಬೆಂಬಲ ಅಪಾರವಾಗಿದೆ. ಎಂಥ ಶಕ್ತಿಯ ವಿರುದ್ಧ ಹೋರಾಡಿಯಾದರೂ ಬಂಗಾಳವನ್ನು ಗೆಲ್ಲುವ ಶಕ್ತಿ ಮಮತಾ ಅವರಿಗಿದೆ. ಈ ಚುನಾವಣೆಯನ್ನು ಅವರು ಗೆಲ್ಲುತ್ತಾರೆ ಕೂಡ. ಅವರಿಗೆ ಈಗ ನೈತಿಕ ಬೆಂಬಲ ನೀಡಬೇಕಿದೆ. ನಾನು ಅವರ ಬೆಂಬಲಕ್ಕಿರುವೆ" ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.












Click it and Unblock the Notifications