ಮಲ್ಲಿಕಾರ್ಜುನ ಖರ್ಗೆ ಮತ್ತು ಕುಟುಂಬಸ್ಥರ ಹತ್ಯೆ ಕುರಿತ ಆಡಿಯೋ ವೈರಲ್: ಸತ್ಯಾಸತ್ಯತೆಯ ಬಗ್ಗೆ ತನಿಖೆ: ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ, ಮೇ 06: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕುಟುಂಬಸ್ಥರ ಹತ್ಯೆ ಆಡಿಯೋ ಸಂಬಂಧಿಸಿದಂತೆ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕುಟುಂಬಸ್ಥರ ಹತ್ಯೆಯ ಕುರಿತ ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಆಡಿಯೋ ತಿರುಚಲಾಗಿದೆಯೇ ಎಂದು ನೋಡಬೇಕು.ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಮಾಡಲಾಗುವುದು ಎಂದರು.

ಶಿವರಾಜ್ ಕುಮಾರ್ ಮೇಲೆ ಬಿಜೆಪಿ ಟ್ರೋಲ್ ಮಾಡಿರುವ ಬಗ್ಗೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಯಾವ ನಟರು ಕೂಡ ಯಾವ ಪಕ್ಷ ಪರವಾಗಿ ಪ್ರಚಾರ ಮಾಡಬಹುದು. ಪ್ರತಾಪ್ ಸಿಂಹ ಮತ್ತು ಶಿವರಾಜ್ ಕುಮಾರ್ ಟೀಕೆ ಅವರಿಗೆ ಬಿಟ್ಟ ವಿಚಾರ. ಶಿವರಾಜ್ ಕುಮಾರ್ ಪ್ರಚಾರದ ಬಗ್ಗೆ ನನಗೇನು ಅಭ್ಯಂತರ ಇಲ್ಲ ಎಂದರು.
ಸೋನಿಯಾ ಗಾಂಧಿ ಪ್ರಚಾರಕ್ಕೆ ಬರುತ್ತಿರುವ ಬಗ್ಗೆ ಮಾತನಾಡಿ ಅದು ಅವರ ಪಕ್ಷದ ಪ್ರಚಾರ. ಇಂದು ಪ್ರಧಾನಿ ಮೋದಿ ಹಾವೇರಿಗೆ ಬರುತ್ತಿದ್ದು, ಮೊದಲಿಗಿಂತಲೂ ಈಗ ಮೋದಿ ಅಲೆ ಜಾಸ್ತಿಯಾಗಲಿದೆ. ಇನ್ನೂ ಬಿ.ಎಲ್ ಸಂತೋಷ ಲಿಂಗಾಯತ ಮತಗಳ ಅಗತ್ಯವಿಲ್ಲ ಎಂದಿರುವುದು ಸುಳ್ಳು ಸುದ್ದಿ ಎಂದ ಮುಖ್ಯ ಮಂತ್ರಿಗಳು ಈಗಾಗಲೇ ಈ ಬಗ್ಗೆ ದೂರು ಸಹ ದಾಖಲು ಮಾಡಲಾಗಿದೆ ಎಂದರು.

ಬಿಜೆಪಿ ರಕ್ತದಾಹ ನೀಗುವುದಾದರೆ ಅವರನ್ನು ಹತ್ಯೆ ಮಾಡಿ: ಸುರ್ಜೆವಾಲ
ಬಿಜೆಪಿ ನಾಯಕರು ನಿರಂತರವಾಗಿ ಕಾನೂನು ಉಲ್ಲಂಘನೆ ಮಾಡುತ್ತಿದ್ದರೂ ಚುನಾವಣಾ ಆಯೋಗ ಯಾವ ಕ್ರಮ ಕೈಗೊಂಡಿದೆ? ಬಿಜೆಪಿ ಖರ್ಗೆ ಅವರ ಹತ್ಯೆಗೆ ಸಂಚು ರೂಪಿಸುವಷ್ಟ ನೀಚ ಮಟ್ಟಕ್ಕೆ ಇಳಿಯುವುದಾದರೆ, ಅವರ ಹತ್ಯೆ ಮಾಡಿ. ಆಮೂಲಕವಾದರೂ ಬಿಜೆಪಿ ರಕ್ತದಾಹ ನೀಗುವುದಾದರೆ ಅವರನ್ನು ಹತ್ಯೆ ಮಾಡಿ ಎಂದು ರಣದೀಪ್ ಸಿಂಗ್ ಸುರ್ಜೆವಾಲ ಹರಿಹಾಯ್ದರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಅವರ ಪತ್ನಿ ಹಾಗೂ ಮಕ್ಕಳ ಹತ್ಯೆಗೆ ಸಂಚು ರೂಪಿಸಿರುವುದನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ. ಈ ಬೆದರಿಕೆ ಹಾಕಿರುವುದು ಬೇರಾರೂ ಅಲ್ಲ, ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಈತ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿಯ ಆತ್ಮೀಯ ನೀಲಿ ಕಂಗಳ ಹುಡುಗ. ಇದೇ ಕಾರಣಕ್ಕೆ ಪ್ರಧಾನಿ ಮೋದಿ ಹಾಗೂ ಬೊಮ್ಮಾಯಿ ಅವರು ಮೌನಕ್ಕೆ ಶರಣಾಗಿದ್ದಾರೆ. ಆದರೆ ರಾಜ್ಯದ ಜನ ಇದನ್ನು ಸಹಿಸಿಕೊಂಡು ಕೂರುವುದಿಲ್ಲ, ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.
ಚುನಾವಣೆ ಸಮಯದಲ್ಲಿ ಯಾರ ನಿರ್ದೇಶನದ ಮೇರೆಗೆ ಈ ಪಿತೂರಿ ನಡೆದಿದೆ ಎಂದು ಕೇಳಿದಾಗ, 'ಈ ಪ್ರಕರಣದಿಂದ ಬಿಜೆಪಿಯ ಇಡೀ ನಾಯಕ್ವತದ ಮೇಲೆ ಪ್ರಶ್ನೆ ಎದ್ದಿದೆ. ಮೋದಿ ಹಾಗೂ ಬೊಮ್ಮಾಯಿ ಆತ್ಮೀಯ ನೀಲಿ ಕಂಗಳ ಹುಡುಗ ಮಣಿಕಂಠ ರಾಥೋಡ್ ಚಿತ್ತಾಪುರದ ಅಭ್ಯರ್ಥಿಯಾಗಿದ್ದಾನೆ. ಆತನ ಆಡಿಯೋದಲ್ಲಿ ಆತ ಖರ್ಗೆ ಹಾಗೂ ಅವರ ಕುಟುಂಬದ ಹತ್ಯೆ ಮಾಡುವ ಬೆದರಿಕೆ ಹಾಕಿದ್ದಾನೆ.
ಕೆಲ ದಿನಗಳ ಹಿಂದೆ ಬಿಜೆಪಿ ಸಚಿವ ಅಶ್ವತ್ಥ್ ನಾರಾಯಣ ಸಿದ್ದರಾಮಯ್ಯ ಅವರ ವಿಚಾರದಲ್ಲೂ ಇದೇ ರೀತಿಯ ಮಾತುಗಳನ್ನಾಡಿದ್ದರು. ಬಿಜೆಪಿಯ ಹತಾಶೆ ಹತ್ಯೆ ಮಾಡುವ ಹಂತಕ್ಕೆ ತಲುಪಿದೆ. ಮೋದಿ ಅವರೇ ನೀವು ರಾಜ್ಯದಲ್ಲಿ ಪ್ರಚಾರ ಮಾಡುತ್ತಿದ್ದೀರಿ, ಇತ್ತ ನಿಮ್ಮ ನಾಯಕರು ಹತ್ಯೆ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿ ಪ್ರಜಾತಂತ್ರದ ಹತ್ಯೆ ಮಾತ್ರವಲ್ಲ ವಿರೋಧ ಪಕ್ಷಗಳ ನಾಯಕರ ಹತ್ಯೆಯ ಸಂಚು ಈಗ ಬಯಲಾಗುತ್ತಿದೆ. ಇದೆಲ್ಲದರ ಜವಾಬ್ದಾರಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಾಗಿದ್ದು, ಇವರು ಈ ವಿಚಾರವಾಗಿ ಉತ್ತರ ನೀಡಬೇಕು ಎಂದು ತಿಳಿಸಿದರು.












Click it and Unblock the Notifications