ರಾಜಕೀಯದಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ: ಗುಡ್ ನ್ಯೂಸ್ ಕೊಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ಜುಲೈ 16: ಭಾರತದ ಪ್ರಜಾಪ್ರಭುತ್ವ ಮತ್ತು ಮಹಿಳೆ ಎಂದು ಹುಡುಕುತ್ತಾ ಹೋದರೆ, ಈವರೆಗೆ ರಾಜಕಾರಣದಲ್ಲಿ ಹೆಸರು ಮಾಡಿದ ಮಹಿಳೆಯರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ರಾಜಕೀಯದಲ್ಲಿ ಮಹಿಳೆಯವರಿಗೆ ಶೇ 33 ರಷ್ಟು ಮೀಸಲಾತಿ ತರುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಹತ್ವದ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಕಾರ್ಯಕರ್ತರು ಯಾವುದಕ್ಕೂ ಚಿಂತನೆ ಮಾಡಬೇಡಿ. ಎಲ್ಲರೂ ಶಾಸಕರು, ಪಾಲಿಕೆ ಸದಸ್ಯರು ಆಗಲು ಆಗುವುದಿಲ್ಲ. ಮನೆಯಲ್ಲಿ ಬೈದರೂ ಕೂಡ ನಮ್ಮ ಮಹಿಳಾ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿಯುತ್ತಾರೆ. ಅವರಿಗಾಗಿ ಏನಾದರೂ ಮಾಡಲೇಬೇಕು. ಇದಕ್ಕಾಗಿ ರಾಜಕೀಯದಲ್ಲಿ 33% ಮೀಸಲಾತಿ ತರಲು ನಾವು ಪ್ರಯತ್ನ ಮಾಡಿದ್ದೆವು. ಮುಂದೆ ಇದು ಜಾರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ರಾಜಕೀಯದಲ್ಲಿ ಮಹಿಳೆಯವರಿಗೆ ಶೇ 33 ರಷ್ಟು ಮೀಸಲಾತಿಯನ್ನು ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಗೆ ಜಾರಿಗೆ ತರಲು ಸಿದ್ಧತೆ ನಡೆಯುತ್ತಿದೆ. ಇದು ಜಾರಿಯಾದರೆ, ನಮ್ಮ ಜೊತೆಗೆ 75 ಜನ ಮಹಿಳಾ ಶಾಸಕಿಯರು ಇರುತ್ತಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ 50% ಮೀಸಲಾತಿ ನೀಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು.
ನಾಯಕತ್ವ ಬೆಳೆಸಲು ರಾಹುಲ್ ಗಾಂಧಿ ಅವರು ನಮಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಈಗ ನಿಂತುಹೋಗಿರುವ ಕಾಲೇಜುಗಳಲ್ಲಿ ವಿದ್ಯಾರ್ಥಿ ಮಟ್ಟದ ಚುನಾವಣೆಯನ್ನು ನಡೆಸಲು ಚರ್ಚಿಸುತ್ತಿದ್ದೇವೆ. ಪಕ್ಷದ ಸಂಘಟನೆಯಲ್ಲಿ ಶ್ರಮಿಸಿದವರಿಗೆ ಸ್ಥಾನಮಾನ ನೀಡಲು ಅಧ್ಯಕ್ಷ ಸ್ಥಾನ ನೀಡಿದ್ದೇವೆ. ನೀವು ನಿಮ್ಮ ಬೂತ್, ವಾರ್ಡ್ ಗಳಲ್ಲಿ ನೀವು ಬಲಿಷ್ಠವಾಗಿ. ನಿಮ್ಮ ಶಾಸಕರು, ಪರಾಜಿತ ಅಭ್ಯರ್ಥಿ ಮೂಲಕ ನಿಮ್ಮನ್ನು ಗುರುತಿಸಲಾಗುವುದು. ನೀವು ಬಲಿಷ್ಠವಾಗಿದ್ದಷ್ಟು ನಮ್ಮ ಅಭ್ಯರ್ಥಿಗಳು ಬಲಿಷ್ಠವಾಗಿರುತ್ತಾರೆ. ನೀವು ದುರ್ಬಲರಾದರೆ ಅವರೂ ದುರ್ಬಲರಾಗುತ್ತಾರೆ. ಕಾರ್ಯಕರ್ತರು ಶಕ್ತಿಶಾಲಿಯಾಗದಿದ್ದರೆ, ಪಕ್ಷ ಬಲಿಷ್ಠವಾಗಲು ಹೇಗೆ ಸಾಧ್ಯ ಎಂದರು.
ಈ ಗ್ಯಾರಂಟಿ ಸಮಿತಿಗಳು ಕೇವಲ ಪಂಚ ಗ್ಯಾರಂಟಿ ಯೋಜನೆಗೆ ಮಾತ್ರ ಸೀಮಿತವಲ್ಲ. ಸರ್ಕಾರದ ಎಲ್ಲಾ ಜನಪರ ಯೋಜನೆಗಳ ಬಗ್ಗೆ ಸರ್ಕಾರದ ಧ್ವನಿಯಾಗಬೇಕು. ಗ್ಯಾರಂಟಿ ಯೋಜನೆ, ಖಾತಾ ದಾಖಲೆ ಹಂಚಿಕೆ ಹೆಸರಿನಲ್ಲಿ ನೀವು ಜನರ ಮನೆ ಬಾಗಿಲಿಗೆ ಹೋಗಬಹುದು. ನೀವು ಮನೆ ಬಾಗಿಲಿಗೆ ಹೋಗಿ, ಜನರ ಮನ ಗೆಲ್ಲಬೇಕು. ಮುಂದೆ ಬರುವ ಪಾಲಿಕೆ ಚುನಾವಣೆಯಲ್ಲಿ ಐದು ಪಾಲಿಕೆಗಳಲ್ಲಿ ಪಕ್ಷವನ್ನು ಗೆಲ್ಲಿಸಬೇಕು. ಮಂಗಳೂರು ಭಾಗದಲ್ಲಿ ನಮಗೆ ಹೆಚ್ಚು ಸೋಲಾಗಿದೆ. ಆದರೆ ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚು ಫಲಾನುಭವಿಗಳು ಇದೇ ಭಾಗದವರಿದ್ದಾರೆ. ಹೀಗಾಗಿ ಗ್ಯಾರಂಟಿ ಟೀಕಿಸುವ ವಿರೋಧ ಪಕ್ಷದವರಿಗೆ ನಾನು ಸವಾಲು ಹಾಕಿದೆ.
ಗ್ಯಾರಂಟಿ ಯೋಜನೆ ಬೇಡವಾದರೆ ಅದನ್ನು ನಿಮ್ಮವರಿಂದ ಬರೆದು ಕಳಿಸಿ ಎಂದು ಹೇಳಿದೆ. ಗ್ಯಾರಂಟಿ ಯೋಜನೆ ಫಲ ಅನುಭವಿಸಿ ಅದನ್ನೇ ಟೀಕೆ ಮಾಡಿದರೆ ಹೇಗೆ? ನನಗೆ ಯುವಕರು ಹಾಗೂ ಮಹಿಳೆಯರ ಮೇಲೆ ಹೆಚ್ಚು ನಂಬಿಕೆ. ಹೀಗಾಗಿ ನಮ್ಮ ಗ್ಯಾರಂಟಿ ಯೋಜನೆಗಳು ಈ ವರ್ಗದವರ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ. ಗ್ಯಾರಂಟಿ ಸಮಿತಿಯಲ್ಲಿ ಮಹಿಳೆಯರಿಗೆ ಜವಾಬ್ದಾರಿ ನೀಡಲಾಗಿದೆ. ನಮ್ಮ ಸರ್ಕಾರದ ಕೆಲಸಗಳನ್ನು ವಿರೋಧ ಪಕ್ಷಗಳು ಟೀಕೆ ಮಾಡುತ್ತಾರೆ. ಅವರು ಏನು ಬೇಕಾದರೂ ಟೀಕೆ ಮಾಡಲಿ. ಅವರ ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ ಎಂದರು.












Click it and Unblock the Notifications