ಬೆಂಗಳೂರು ಗ್ರಾಮಾಂತರದಿಂದ ಡಿ ಕೆ ಸುರೇಶ್ ವಿರುದ್ಧ ಡಾ. ಸಿ ಎನ್ ಮಂಜುನಾಥ್ ಕಣಕ್ಕೆ : ಡಿ ಕೆ ಶಿವಕುಮಾರ್ ಹೇಳಿದ್ದೇನು?
ಮಂಗಳೂರು, ಫೆಬ್ರವರಿ 17: ಲೋಕಸಭಾ ಚುನಾವಣೆಗೆ ಮೈತ್ರಿಯಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಡಿ ಕೆ ಬ್ರದರ್ಸ್ ಠಕ್ಕರ್ ಕೊಡುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಡಿ ಕೆ ಸುರೇಶ್ ಅವರ ವಿರುದ್ಧ ಸೂಕ್ತ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಕಮಲ-ದಳ ನಾಯಕರು ಪ್ಲಾನ್ ನಡೆಸಿದ್ದು, ಈ ಕುರಿತು ಡಿ ಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ಹೌದು, ಡಿ.ಕೆ ಸುರೇಶ್ ವಿರುದ್ಧ ಮೈತ್ರಿ ಅಭ್ಯರ್ಥಿಯಾಗಿ ಡಾ. ಮಂಜುನಾಥ್ ಅವರನ್ನು ನಿಲ್ಲಿಸಲು ಚರ್ಚೆ ನಡೆಯುತ್ತಿರುವ ಕುರಿತು ಮಾಧ್ಯಮಗಳ ಜೊತೆಗೆ ಡಿ ಕೆ ಶಿವಕುಮಾರ್ ಮಾತನಾಡಿ, ನಾನು ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಿದ್ದೆ. ಕುಮಾರಸ್ವಾಮಿ ಅವರ ವಿರುದ್ಧ ಸ್ಪರ್ಧಿಸಿದ್ದೆ. ಬಿಜೆಪಿ ಹಾಗೂ ಜೆಡಿಎಸ್ ಸೇರಿ ಕುಮಾರಸ್ವಾಮಿ ಅವರ ಧರ್ಮಪತ್ನಿ ಅವರನ್ನು ನಿಲ್ಲಿಸಿದಾಗ ಅವರ ವಿರುದ್ಧ ನನ್ನ ತಮ್ಮ ಸ್ಪರ್ಧೆ ಮಾಡಿದ್ದರು. ಆಗಲೂ 1.35 ಲಕ್ಷ ಮತಗಳಿಂದ ಗೆದ್ದಿದ್ದೆವು. ಅವರು ಯಾರನ್ನಾದರೂ ನಿಲ್ಲಿಸಲಿ. ನಮಗೆ ನಮ್ಮ ಮತದಾರರಿದ್ದಾರೆ ಎಂದರು.

ಸುರೇಶ್ ಅವರು ದೆಹಲಿಯಲ್ಲಿ ಕೂರುವ ಸಂಸದರಲ್ಲ. ಅವರು ಹಳ್ಳಿಯಲ್ಲಿ ಕೂರುವ ಸಂಸದರು. ಅವರು ಮತದಾರರ ಮನಸ್ಸಿನಲ್ಲಿ ಉತ್ತಮ ಕೆಲಸಗಾರ ಎಂಬ ಭಾವನೆ ಮೂಡಿಸಿದ್ದಾರೆ. ನಮ್ಮ ಕ್ಷೇತ್ರದಿಂದ ದೇವೇಗೌಡರು, ಕುಮಾರಸ್ವಾಮಿ ಅವರೂ ಸೇರಿದಂತೆ ಅನೇಕ ಬೇರೆ ಸಂಸದರೂ ಆಯ್ಕೆಯಾಗಿದ್ದರು. ಅವರಿಗೂ ಸುರೇಶ್ ಗೂ ಏನು ವ್ಯತ್ಯಾಸವಿದೆ ಎಂದು ಜನ ನೋಡಿದ್ದಾರೆ.
ಪ್ರತಿ ಹಳ್ಳಿ, ಪ್ರತಿ ಪಂಚಾಯ್ತಿ, ಪ್ರತಿ ರಸ್ತೆ, ಪ್ರತಿ ಮನೆ ಸುರೇಶ್ ಅವರ ಕೆಲಸ ನೋಡಿದೆ. ಇಂದು ಆ ಭಾಗದಲ್ಲಿ ಕೆರೆಗಳು ತುಂಬಿ ಅಂತರ್ಜಲ ಹೆಚ್ಚಳವಾಗಿದ್ದರೆ, ಬಡವರಿಗೆ ಮನೆ, ನಿವೇಶನ ನೀಡಿದ್ದರೆ, ನರೇಗಾದಲ್ಲಿ ಹಣ ಬಂದಿದ್ದರೆ ಅದು ಸುರೇಶ್ ಅವರ ಕೊಡುಗೆ ಇದೆ. ಮತದಾರರು ಪ್ರಜ್ಞಾವಂತರು. ಅವರು ಯಾರನ್ನೇ ನಿಲ್ಲಿಸಿದರೂ ಮತದಾರರು ಉತ್ತರ ಕೊಡುತ್ತಾರೆ. ನನ್ನ ವಿರುದ್ಧ ಚಕ್ರವರ್ತಿ ಅಶೋಕ್ ಕೂಡ ಸ್ಪರ್ಧಿಸಿದ್ದರು. ರಾಜಕಾರಣ ಎಂದರೆ ಜನ ತೀರ್ಮಾನ ಮಾಡುತ್ತಾರೆ. ನಾವು ಯಾಕೆ ಚಿಂತಿಸಬೇಕು. ಕುಮಾರಸ್ವಾಮಿ ಅವರು ಬಂದು ನಿಂತರೂ ನಾವು ಸ್ವಾಗತಿಸುತ್ತೇವೆ ಎಂದು ತಿಳಿಸಿದರು.

ಲೋಕಸಭೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಈಗಾಗಲೇ ಮೂರ್ನಾಲ್ಕು ಬಾರಿ ಚರ್ಚೆ ಮಾಡಿದ್ದು, ಮತ್ತೊಂದು ಸುತ್ತಿನ ಸಮೀಕ್ಷೆ ನಡೆಯುತ್ತಿದೆ. ಎಲ್ಲ ಮುಗಿದ ನಂತರ ಅಭ್ಯರ್ಥಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಜೊರೋಸಾ ಶಾಲೆ ವಿವಾದದಲ್ಲಿ ಶಾಸಕರ ವಿರುದ್ಧದ ಪ್ರಕರಣ ಹಿಂಪಡೆಯದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂಬ ಬಿಜೆಪಿ ಹೇಳಿಕೆ ಬಗ್ಗೆ ಕೇಳಿದಾಗ, ಅವರು ಮಾಡುತ್ತಿರಲಿ. ಕಾನೂನಿನ ಪ್ರಕಾರ ಕ್ರಮ ವಹಿಸಲಾಗುತ್ತದೆ. ಪೊಲೀಸರು ಅವರ ಕೆಲಸ ಮಾಡುತ್ತಾರೆ. ನಾನು ಅವರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಭಾಗದ ತೆರಿಗೆ ನಮಗೆ ಬೇಕು ಎಂಬ ಬೇಡಿಕೆ ಕುರಿತು ಮಾತನಾಡಿ, ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಕೇಳಿದಾಗ ಅವರು ಧ್ವನಿ ಎತ್ತಲಿಲ್ಲ. ನಾವು ಮುಸಲ್ಮಾನರಿಗೆ ಎ,ಟು ಕೊಟ್ಟಿದ್ದೇವೆ. 3.71 ಲಕ್ಷ ಕೋಟಿಯಲ್ಲಿ 3 ಸಾವಿರ ಕೋಟಿ ಶಾಲೆಗಳು ಹಾಗೂ ಇತರೆ ಅಭಿವೃದ್ಧಿಗೆ ನೀಡಿದ್ದೇವೆ. ಬಜೆಟ್ ನಲ್ಲಿ ಶೇ.1 ರಷ್ಟು ಅನುದಾನ ನೀಡಬಾರದೇ? ಬಿಜೆಪಿಯವರು ರಾಜಕಾರಣ ಮಾಡಲಿಕ್ಕೆ ಈ ರೀತಿ ಹೇಳುತ್ತಾರೆ ಎಂದರು.












Click it and Unblock the Notifications