Siddaramaiah: ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ 50 ರಷ್ಟು ಮೀಸಲಾತಿ: ಮಹತ್ವದ ಮಾಹಿತಿ ನೀಡಿದ ಸಿದ್ದರಾಮಯ್ಯ
ಬೆಂಗಳೂರು, ನವೆಂಬರ್ 19: ಮಹಿಳೆಯರಿಗೆ ಮೀಸಲಾತಿಯನ್ನು 2028 ರಲ್ಲಿ ಕೊಡುವುದಾಗಿ ಹೇಳುವ ನರೇಂದ್ರ ಮೋದಿಯವರು ಅದನ್ನು ಈಗಲೇ ಮಾಡಬಹುದಿತ್ತು. ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಹಾಗೂ ಬದ್ಧತೆ ಅಗತ್ಯವಿದೆ. ಸಂಸತ್ತಿನಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಲು ನಮ್ಮ ತಕರಾರೇನಿಲ್ಲ, ನಾವೇ ಇದನ್ನು ಜಾರಿಗೆ ತರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂದಿಯವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲಾ ಪಂಚಾಯತಿ, ಪಟ್ಟಣ ಪಂಚಾಯತಿಗಳಲ್ಲಿ 50% ಮೀಸಲಾತಿ ಇದೆ. ಮಹಿಳೆಯರಿಗೆ ಸಮಾನ ಅವಕಾಶಗಳು ದೊರಕಬೇಕು. ಸಂಸತ್ತು, ವಿಧಾನ ಸಭೆಯಲ್ಲಿಯೂ ಮೀಸಲಾತಿ ನೀಡಲು ನಮ್ಮ ತಕರಾರು ಇಲ್ಲ ಎಂದರು.

ಬಿಜೆಪಿ ದೇಶ ಭಕ್ತಿ ಬಗ್ಗೆ ಉದ್ದನೆಯ ಭಾಷಣ ಮಾಡುತ್ತಾರೆ ಅಷ್ಟೇ. ದೇಶಬಕ್ತಿ ಉಳಿದಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಂದರು. ಇದರ ಆಧಾರದ ಮೇಲೆ ಈ ದೇಶವನ್ನು , ನಾಡನ್ನು ಕಟ್ಟಬೇಕಾಗುತ್ತದೆ. ಇಂದಿರಾ ಗಾಂಧಿಯವರನ್ನು ನೆನೆಸಿಕೊಂಡು ಅವರಿಂದ ಸ್ಪೂರ್ತಿಯನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡುತ್ತೇವೆ ಎಂದು ಮಾದ್ಯಮಗಳು ಬರೆದಿವೆ, ಆದರೆ ಅರ್ಹರಿಗೆ ಬಿಪಿಎಲ್ ಕಾರ್ಡ್ ತಪ್ಪಬಾರದು ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಅವರಿಗೆ ಸೂಚಿಸಲಾಗಿದೆ. ಎಲ್ಲಾ ಬಡವರಿಗೂ ಸೌಲಭ್ಯ ದೊರಕಬೇಕು. ಅನರ್ಹರಿಗೆ ಮಾತ್ರ ಎಪಿಎಲ್ ಕಾರ್ಡು ನೀಡಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
ಕಾಂಗ್ರೆಸ್ ಪಕ್ಷ ಈ ಬಿಜೆಪಿಯವರಿಂದ ಪಾಠ ಕಲಿಯಬೇಕಾದ ಅಗತ್ಯವಿಲ್ಲ. ಅವರು ಯಾವತ್ತೂ ಶ್ರೀಮಂತರ, ಮೇಲ್ಜಾತಿಯವರ ಪರ. 1925 ರಲ್ಲಿ ಆರ್.ಎಸ್.ಎಸ್ ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೆ ಪ್ರಜಾಪ್ರಭುತ್ವ, ಮೀಸಲಾತಿ, ಸಂವಿಧಾನದ ಪರವಾಗಿ ಮಾತನಾಡಿಲ್ಲ. ಕಾಂಗ್ರೆಸ್ ಸಿದ್ದಾಂತದಲ್ಲಿ ನಂಬಿಕೆ ಇಟ್ಟು ಕೆಲಸ ಮಾಡೋಣ, ಪಕ್ಷವನ್ನು ಬಲಪಡಿಸುವ ಕೆಲಸ ಮಾಡೋಣ ಎಂದು ಶಪಥ ಮಾಡೋಣ ಎಂದು ಕರೆ ನೀಡಿದರು.
ಮನ್ ಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಆಹಾರ ಭದ್ರತಾ ಕಾಯ್ದೆಯನ್ನು ಜಾರಿ ಮಾಡಿದರು. ಕರ್ನಾಟಕದಲ್ಲಿ 2013 ರಲ್ಲಿ ಒಂದು ರೂಪಾಯಿಗೆ , ನಂತರ ಉಚಿತವಾಗಿ ಅಕ್ಕಿಯನ್ನು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ವಾಜಪೇಯಿಯವರಾಗಲಿ, ಯಡಿಯೂರಪ್ಪ ಅವರಾಗಲಿ ಇಂಥದ್ದನ್ನು ಮಾಡಿದ್ದಾರೆಯೇ? ನಾವು ಬಡವರ ಪರವಾಗಿದ್ದೇವೆ. ಬಿಜೆಪಿ ಬಡವರ ಪರವಾಗಿ ಇರಲು ಸಾಧ್ಯವೇ ಇಲ್ಲ.
ಗ್ಯಾರಂಟಿ ಯೋಜನೆಗಳು, ಹಲವಾರು ಭಾಗ್ಯ ಯೋಜನೆಗಳು, ಇಂದಿರಾ ಕ್ಯಾಂಟೀನು, ಎಸ್.ಸಿ.ಎಸ್ ಪಿ/ ಟಿಎಸ್ ಪಿ ಕಾಯ್ದೆಯನ್ನು ಜಾರಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಈ ದೇಶದ ಬಜೆಟ್ 48 ಲಕ್ಷ ಕೋಟಿ. 60,000 ಕೋಟಿ ರೂ.ಗಳನ್ನು ಮಾತ್ರ ಎಸ್ ಸಿ.ಎಸ್ ಪಿ /ಟಿ.ಎಸ್.ಪಿ ಯೋಜನೆಯಡಿ ವೆಚ್ಚ ಮಾಡುತ್ತಿದ್ದಾರೆ. ನಮ್ಮ ಸರ್ಕಾರ 3, 71,000 ಕೋಟಿ ಬಜೆಟ್ ನಲ್ಲಿ 39121 ಕೋಟಿ ರೂ.ಗಳನ್ನು ಪರಿಶಿಷ್ಟರಿಗೆ ಮೀಸಲಿಟ್ಟಿದ್ದೇವೆ. ಗೃಹ ಲಕ್ಷ್ಮಿ ಯೋಜನೆಯಡಿ 1. ಕೋಟಿ 22 ಲಕ್ಷ ಕುಟುಂಬಗಳಿಗೆ ತಿಂಗಳಿಗೆ 2000 ರೂ.ಗಳನ್ನು ಕೊಡಲಾಗುತ್ತಿದೆ. ನರೇಂದ್ರ ಮೋದಿಯವರು ಇದನ್ನು ವಿರೋಧಿಸಿದ್ದರು.
32,000 ಕೋಟಿ ರೂ.ಗಳನ್ನು ಗೃಹಲಕ್ಷ್ಮಿ ಯೋಜನೆಗೆ ವೆಚ್ಚ ಮಾಡಲಾಗುತ್ತಿದೆ. ಒಟ್ಟು ಗ್ಯಾರಂಟಿ ಯೋಜನೆಗಳಿ 56000 ಕೋಟಿ ಗಳನ್ನು ವೆಚ್ಚ ಮಾಡಲಾಗುತ್ತಿದೆ. ಸಾಮಾಜಿಕ ನ್ಯಾಯ, ಜಾತ್ಯಾತೀತ ತತ್ವದ ಪರವಾಗಿರುವುದು ಕಾಂಗ್ರೆಸ್ ಪಕ್ಷ ಮಾತ್ರ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವುದು, ಸಂವಿಧಾನದ ಬಗ್ಗೆ ಗೌರವ ಇಟ್ಟು ಅದರಂತೆ ನಡೆದುಕೊಳ್ಳುತ್ತಿರುವುದು ಕಾಂಗ್ರೆಸ್ ಪಕ್ಷ ಮಾತ್ರ ಎಂದರು. ಈ ದೇಶದ ಐಕ್ಯತೆಗೆ, ಸಾರ್ವಭೌಮತೆಗೆ ಪ್ರಾಣ ಕೊಟ್ಟವರು ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ. ಈ ದೇಶದ ಸ್ವಾತಂತ್ರ್ಯಕ್ಕೆ ಬಿಜೆಪಿಯವರು ಯಾರಾದರೂ ಪ್ರಾಣ ತ್ಯಾಗ ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದರು.












Click it and Unblock the Notifications