ನಾವು ಯಾವಾಗ ಬೇಕಾದರೂ ಚುನಾವಣೆ ಎದುರಿಸಲು ಸನ್ನದ್ಧವಾಗಿದ್ದೇವೆ: ಜಿ ಪರಮೇಶ್ವರ್
ಬೆಂಗಳೂರು,ಡಿಸೆಂಬರ್ 29: ನಾವು ಯಾವಾಗ ಬೇಕಾದರೂ ಚುನಾವಣೆ ಎದುರಿಸಲು ಸನ್ನದ್ಧವಾಗಿದ್ದೇವೆ. ನಾಳೆ ಚುನಾವಣೆ ಘೋಷಣೆ ಮಾಡಿದರೆ, ನಾಡಿದ್ದು, ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ನಾವು ಚುನಾವಣೆಗೆ ಸಿದ್ಧವಾಗಿದ್ದೇವೆ' ಎಂದು ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಹೇಳಿದರು.
ಗುರುವಾರ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ವಿಚಾರವಾಗಿ ಪಕ್ಷದ ಅಧ್ಯಕ್ಷರು ಹಾಗೂ ಎಐಸಿಸಿ ನಾಯಕರು ಈಗಾಗಲೇ ಹೇಳಿದ್ದು, ಈ ಬಾರಿ ಬೇಗವೇ ಅಭ್ಯರ್ಥಿ ಪಟ್ಟಿ ಬಿಡುಗಡೆ ಆಗಲಿದೆ. ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ. ಸಾವಿರಾರು ಅರ್ಜಿ ಬಂದಿದ್ದು, ಸ್ಥಳೀಯ ಮಟ್ಟದಲ್ಲಿ ಚರ್ಚೆ ಮಾಡಿ, ಅಲ್ಲಿಂದ ಶಿಫಾರಸ್ಸು ಬಂದ ಬಳಿಕ, ರಾಜ್ಯ ಚುನಾವಣಾ ಸಮಿತಿಯು ಸಭೆ ಮಾಡಿ ಅಂತಿಮ ಪಟ್ಟಿ ನಿರ್ಧರಿಸಲಿದೆ ಎಂದು ತಿಳಿಸಿದರು.
ಒಳಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರವಾಗಿ ನಾವು ಚರ್ಚೆ ಮಾಡುತ್ತಿದ್ದೇವೆ. ಎಸ್.ಎಂ ಕೃಷ್ಣ ಅವರ ಅವಧಿಯಲ್ಲಿ ನಾವೇ ಸದಾಶಿವ ಆಯೋಗ ರಚನೆ ಮಾಡಿದ್ದೆವು. ನಂತರ ಸದಾನಂದ ಗೌಡರ ಅವಧಿಯಲ್ಲಿ ಸಮಿತಿ ತನ್ನ ವರದಿ ಸಲ್ಲಿಕೆ ಮಾಡಿತ್ತು. ಅವರು ಈ ವಿಚಾರವಾಗಿ ಚರ್ಚೆ ಮಾಡಲಿಲ್ಲ. ನಮ್ಮ ಸರ್ಕಾರ ಬಂದಾಗ ಸಂಪುಟದಲ್ಲಿ ಚರ್ಚೆ ಮಾಡಲಾಯಿತು. ಈ ಸರ್ಕಾರಕ್ಕೆ ಈ ವರದಿಯನ್ನು ಸದನದಲ್ಲಿ ಪ್ರಸ್ತಾಪಿಸಿ ಎಂದು ಕೇಳುತ್ತಿದ್ದೇವೆ. ಈ ಬಗ್ಗೆ ನಾವು ಈ ಬಾರಿ ಪ್ರಣಾಳಿಕೆಯಲ್ಲಿ ಸ್ಪಷ್ಟಣೆ ನೀಡುತ್ತೇವೆ ಎಂದರು.

ಮೀಸಲಾತಿ ಹಾಗೂ ಧರ್ಮದ ವಿಚಾರ ಚರ್ಚೆಯಲ್ಲಿರುವಾಗ ಪ್ರಣಾಳಿಕೆ ಎಷ್ಟು ಮಹತ್ವದ್ದಾಗಿರುತ್ತದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, 2013ರಿಂದ 2018ರ ಅವಧಿಯಲ್ಲಿ ನಾವು ಕೊಟ್ಟ ಭರವಸೆ ಈಡೇರಿಸಿದ್ದರೂ ನಮಗೆ ಫಲ ಸಿಗಲಿಲ್ಲ ಎಂಬುದು ನಮಗೆ ಗೊತ್ತಿದೆ. ಈ ಬಗ್ಗೆ ಚರ್ಚೆ ಮಾಡುತ್ತೇವೆ. ಅದನ್ನು ಗಮನದಲ್ಲಿಟ್ಟುಕೊಂಡು ನಾವು ಪ್ರಣಾಳಿಕೆಯನ್ನು ತಯಾರು ಮಾಡುತ್ತೇವೆ ಎಂದರು.
ಪ್ರತಿ ವಲಯಕ್ಕೆ ಪ್ರತ್ಯೇಕ ಪ್ರಣಾಳಿಕೆ ಮಾಡುತ್ತೀರಾ ಎಂಬ ವಿಚಾರವಾಗಿ ಮಾತನಾಡಿ, ಒಂದೇ ಪ್ರಣಾಲಿಕೆಯಲ್ಲಿ ವಿವಿಧ ವಿಭಾಗಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಹಳೇ ಮೈಸೂರು ಭಾಗ ಹಾಗೂ ಕರಾವಳಿಯಲ್ಲಿ ಅಭ್ಯರ್ಥಿಗಳಿಲ್ಲ ಎಂಬ ವಿಚಾರವಾಗಿ ಮಾತನಾಡಿ, ಈ ಮಾತನ್ನು ಯಾರು ಹೇಳಿದ್ದಾರೋ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಇತಿಹಾಸದಲ್ಲಿ ಅಭ್ಯರ್ಥಿಗಳ ಕೊರತೆ ಎದುರಾಗಿದೆಯೇ? ಒಂದೊಂದು ಕ್ಷೇತ್ರಕ್ಕೆ 10-15 ಟಿಕೆಟ್ ಅರ್ಜಿಗಳು ಬಂದಿವೆ. ಹಣ ನೀಡಿ ಇಷ್ಟು ಟಿಕೆಟ್ ಅರ್ಜಿಗಳು ಬಂದಿವೆ. ಕೆಲವು ಕ್ಷೇತ್ರಗಳಲ್ಲಿ ಅವರು ಬಲಿಷ್ಠವಾಗಿದ್ದರೆ ಕೆಲವು ಕ್ಷೇತ್ರಗಳಲ್ಲಿ ನಾವು ಬಲಿಷ್ಠವಾಗಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ಅನೇಕ ಕಾಯ್ದೆ ತಂದಿದ್ದು, ಪ್ರಣಾಳಿಕೆಯಲ್ಲಿ ಇವುಗಳನ್ನು ರದ್ದು ಮಾಡುವ ನಿಲುವು ಪ್ರಕಟಿಸುತ್ತೀರಾ ಎಂಬ ಬಗ್ಗೆ ಉತ್ತರಿಸಿ, ಇದು ಪ್ರಣಳಿಕೆ ಬಿಡುಗಡೆಯಾದಾಗ ನಿಮಗೆ ತಿಳಿಯುತ್ತದೆ. ಕೆಲವು ವಿಚಾರಗಳಲ್ಲಿ ನಾವು ನಮ್ಮ ಸ್ಪಷ್ಟ ನಿಲುವು ಪ್ರಕಟಿಸಬೇಕಾಗುತ್ತದೆ. ನಾವು ಜನರ ಭಾವನೆ ಮೇಲೆ ಆಟವಾಡುವುದಿಲ್ಲ. ನಮಗೆ ಅಭಿವೃದ್ಧಿ, ಅವರಿಗೆ ಸಾಮಾಜಿಕ ನ್ಯಾಯ ನೀಡುವುದು ಮುಖ್ಯ. ಜನರನ್ನು ಭಾವನೆ ಮೂಲಕ ಸೆಳೆಯುವ ಕೆಲಸ ಬಿಜೆಪಿಯವರದ್ದು ಎಂದು ಹೇಳಿದರು.
ಬೇರೆ ಪಕ್ಷಗಳಿಗಿಂತ ಮುಂಚಿತವಾಗಿ ಕಾಂಗ್ರೆಸ್ ಪ್ರಣಾಳಿಕೆ ಬರುತ್ತದೆಯೇ ಎಂಬ ಬಗ್ಗೆ ಮಾತನಾಡಿ, ಬೇರೆ ಪಕ್ಷದವರು ಯಾವಾಗ ಪ್ರಣಾಳಿಕೆ ಬಿಡುಗಡೆ ಮಾಡುತ್ತಾರೋ ಗೊತ್ತಿಲ್ಲ. ಆದರೆ ನಾವಂತೂ ಆದಷ್ಟು ಬೇಗ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತೀವಿ ಎಂದರು.
ಅವಧಿಪೂರ್ವ ಚುನಾವಣೆ ಕಾಂಗ್ರೆಸ್ ಗೆ ಮೈನಸ್ ಆಗುವುದಿಲ್ಲವೇ ಎಂದು ಕೇಳಿದಾಗ, 'ಯಾವಾಗ ಚುನಾವಣೆ ನಡೆದರೂ ಈ ಬಾರಿ ಕಾಂಗ್ರೆಸ್ ಗೆ ಪ್ಲಸ್ ಆಗಲಿದೆಯೇ ಹೊರತು ಮೈನಸ್ ಆಗುವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ನಮಗಿದೆ' ಎಂದು ತಿಳಿಸಿದರು.
ನಾಳೆ ಮಂಡ್ಯಕ್ಕೆ ಅಮಿತ್ ಶಾ ಅವರು ಆಗಮಿಸುವ ಬಗ್ಗೆ ಕೇಳಿದಾಗ, 'ಅವರು ರಾಜ್ಯಕ್ಕೆ ಪ್ರಸ್ತುತವೇ ಅಲ್ಲ. ನಮಗೆ ನಮ್ಮ ಪಕ್ಷ, ಸಿದ್ಧಾಂತ, ನಮ್ಮ ಮುಖಂಡರು ಮುಖ್ಯ. ಅವರ ಅಜೆಂಡಾವೇ ಬೇರೆ, ನಮ್ಮ ಅಜೆಂಡಾವೇ ಬೇರೆ' ಎಂದು ತಿಳಿಸಿದರು.
ರಾಮನಗರದಲ್ಲಿ ರಾಮಮಂದಿರ ನಿರ್ಮಾಣದ ವಿಚಾರವಾಗಿ ಕೇಳಿದಾಗ, 'ಬಿಜೆಪಿಯವರು ಭಾವನಾತ್ಮಕ ವಿಚಾರ ತೆಗೆದುಕೊಂಡು ಚುನಾವಣೆಗೆ ಹೋಗುತ್ತಾರೆ. ಸರ್ಕಾರ, ಅಧಿಕಾರ ಮಾಡುವಾಗಲೂ ಭಾವನೆ ಕೆರಳಿಸುವಂತೆ ಮಾಡುತ್ತಾರೆ' ಎಂದು ತಿಳಿಸಿದರು.












Click it and Unblock the Notifications