ಕೆಆರ್‌ಎಸ್ ಡ್ಯಾಂ ಖಾಲಿ, ಬೆಂಗಳೂರು ಬೇಸಿಗೆ ಬಲು ಭೀಕರ!

By: ಲವಕುಮಾರ್
Subscribe to Oneindia Kannada

ಮಂಡ್ಯ, ಫೆಬ್ರವರಿ, 03: ಕೆಆರ್ ಎಸ್ ಜಲಾಶಯ ಹೇಗೆ ಸೌಂದರ್ಯದ ಗಣಿಯೋ ಹಾಗೆಯೇ ಸಾವಿರಾರು ಕುಟುಂಬಗಳಿಗೆ ವರದಾನ. ಆದರೆ ಇದೀಗ ಕೆಆರ್ ಎಸ್ ಬರಡಾಗುವ ಸ್ಥಿತಿಗೆ ತಲುಪಿದ್ದು, ಮುಂಬರುವ ಬೇಸಿಗೆಯಲ್ಲಿ ನೀರಿಗೆ ಪರದಾಡಬೇಕಾಗುತ್ತದೆ ಎಂದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಕಾವೇರಿ ಕಣಿವೆಯ ಜಲಾಶಯಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ತಗ್ಗುತ್ತಿರುವುದೇ ರೈತರ ಆತಂಕಕ್ಕೆ ಮೂಲ ಕಾರಣ. ನವೆಂಬರ್ ವರೆಗೆ ಮಳೆ ಬಂದರೂ ನದಿಯಲ್ಲಿ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಆಕಾಶ ನೋಡುತ್ತಾ ಕೂರಬೇಕಾಗುತ್ತದೆ ಎಂಬ ಅಳಲು ರೈತರದ್ದಾಗಿದೆ.

ಕೊಡಗಿನಲ್ಲಿ ಮಳೆಗಾಲದಲ್ಲಿ ಮಳೆಸುರಿದು ಭೂಮಿ ತೇವಗೊಳ್ಳುತ್ತಿತ್ತು. ಎಲ್ಲೆಂದರಲ್ಲಿ ನೀರಿನ ಸೆಲೆಗಳಿರುತ್ತಿತ್ತು. ಹೀಗೆ ಹುಟ್ಟಿ ಹರಿಯುವ ನೀರು ಬಹಳ ದಿನ ಬತ್ತದೆ ಉಳಿಯುತ್ತಿದ್ದುದ್ದರಿಂದ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರಲಿಲ್ಲ. ಆದರೆ ಈ ಬಾರಿ ಕೊಡಗಿನಲ್ಲಿ ಸುರಿದ ಮಳೆಯ ಪ್ರಮಾಣ ಭಾರೀ ಕಡಿಮೆಯಾದ ಹಿನ್ನಲೆಯಲ್ಲಿ ಕೆಆರ್ ಎಸ್ ಜಲಾಶಯ ಭರ್ತಿಯಾಗಲಿಲ್ಲ.

ಕೊಡಗಿನ ಜಲಾಶಯ ಹಾರಂಗಿ ಭರ್ತಿಯಾದರೂ ನೀರಿನ ಒಳ ಹರಿವು ಕಡಿಮೆಯಿತ್ತು. ಇದರ ಪರಿಣಾಮ ಹಿಂದಿನ ವರ್ಷದಂತೆ ಈ ವರ್ಷ ಹಾರಂಗಿ ಜಲಾಶಯದಿಂದ ನೀರು ಸುಲಲಿತವಾಗಿ ಕೆಆರ್ ಎಸ್ ನ್ನು ತಲುಪಲಿಲ್ಲ. ಹಾಸನದ ಹೇಮಾವತಿ ಜಲಾಶಯವೂ ಇದೇ ಪರಿಸ್ಥಿತಿಗೆ ಒಳಗಾಗಿದೆ. ಈ ಎರಡು ಜಲಾಶಯದ ನೀರು ಹರಿದು ಬಂದರೆ ಮಾತ್ರ ಕೆಆರ್ ಎಸ್ ತುಂಬಿ ಹರಿಯುತ್ತದೆ.[ಸದ್ಯದಲ್ಲೇ ಮೈಸೂರಿನಲ್ಲಿ ಕಾವೇರಿ ನದಿ ಗ್ಯಾಲರಿ]

ಕೊಡಗಿನ ಹಾರಂಗಿ ಹಾಗೂ ಹಾಸನದ ಹೇಮಾವತಿ ಜಲಾಶಯಗಳು ಭರ್ತಿಯಾಗದ ಹಿನ್ನೆಲೆಯಲ್ಲಿ ಕೆಆರ್ ಎಸ್ ಜಲಾಶಯದಲ್ಲಿ ನೀರು ಏಕಾಏಕಿ ಕಡಿಮೆಯಾಗಿದೆ. ಇಲ್ಲಿವೆ ಕಳೆಗುಂದಿದ ಕೆಆರ್ ಎಸ್ ಜಲಾಶಯ ಚಿತ್ರಗಳು.

ಕೆಆರ್ ಎಸ್ ವಿವರ

ಕೆಆರ್ ಎಸ್ ವಿವರ

ಮಂಡ್ಯ ಜಿಲ್ಲೆಯ ಕೆಆರ್ ಎಸ್ ಜಲಾಶಯದ ಪೂರ್ಣ ಹೆಸರು ಕೃಷ್ಣರಾಜಸಾಗರ ಅಣೆಕಟ್ಟು. ಇದಕ್ಕೆ ಹೊಂದಿಕೊಂಡಂತೆ ಬೃಂದಾವನ ಉದ್ಯಾನವನವಿದೆ. ಮಂಡ್ಯ ಹಾಗೂ ಮೈಸೂರು ಜನತೆಗೆ ನೀರುಣಿಸುವ ಜಲಾಶಯವನ್ನು ಕಾವೇರಿ ನದಿಗೆ 1924ರಲ್ಲಿ ನಿರ್ಮಿಸಲಾಯಿತು.

ಕಳೆದ ಬಾರಿ ಕೆಆರ್ ಎಸ್ ಜಲಾಶಯದಲ್ಲಿ ಎಷ್ಟು ನೀರಿತ್ತು?

ಕಳೆದ ಬಾರಿ ಕೆಆರ್ ಎಸ್ ಜಲಾಶಯದಲ್ಲಿ ಎಷ್ಟು ನೀರಿತ್ತು?

ಜಲಾಶಯದಲ್ಲಿ 26 ಟಿಎಂಸಿ ನೀರು ಸಂಗ್ರಹವಾಗಿದ್ದು, ಇದರಲ್ಲಿ 4.80 ಟಿಎಂಸಿ ಡೆಡ್ ಸ್ಟೋರೇಜ್ ಆಗಿರುತ್ತದೆ. ಕಳೆದವರ್ಷ ಇದೇ ಅವಧಿಯಲ್ಲಿ 113 ಅಡಿ ನೀರು ಸಂಗ್ರಹ, 30 ಟಿಎಂಸಿ ನೀರು ಸಂಗ್ರಹವಾಗಿತ್ತು. 493 ಕ್ಯೂಸೆಕ್ ಒಳ ಹರಿವಿದ್ದರೆ, 468 ಕ್ಯೂಸೆಕ್ ಹೊರ ಹರಿವು ಇತ್ತು. ಇದೀಗ ಬೇಸಿಗೆ ಬರುವ ಮುನ್ನವೇ 100 ಅಡಿಗೆ ಕುಸಿದಿದ್ದು, ಆತಂಕ ಸೃಷ್ಟಿಯಾಗಿದೆ. ಸದ್ಯಕ್ಕೆ 265 ಕ್ಯೂಸೆಕ್ ಜಲಾಶಯಕ್ಕೆ ಒಳ ಹರಿವಿದ್ದರೆ, 3414 ಕ್ಯೂಸೆಕ್ ಹೊರ ಹರಿವು ದಾಖಲಾಗಿದೆ.

ಆತಂಕ ಸೃಷ್ಟಿಸಿದ ಕೆಆರ್ ಎಸ್

ಆತಂಕ ಸೃಷ್ಟಿಸಿದ ಕೆಆರ್ ಎಸ್

ಬೇಸಿಗೆ ದಿನಗಳಲ್ಲಿ ಈ ನೀರಿನ ಮಟ್ಟ ಕಡಿಮೆಯಾಗುವ ಸಾಧ್ಯತೆಯಿದೆ. ಇದನ್ನೇ ನಂಬಿ ಬೇಸಿಗೆ ಬೆಳೆಯುತ್ತಿದ್ದ ರೈತನಿಗೆ ಈ ಬಾರಿ ಕಷ್ಟವಾಗಲಿದೆ. ಒಟ್ಟಾರೆ ಕಾವೇರಿ ಕಣಿವೆಯಲ್ಲಿ ನೀರಿಗೆ ತೊಂದರೆ ಕಾಣಿಸಿಕೊಳ್ಳುತ್ತಿದ್ದು ಇದರ ನೇರ ಪರಿಣಾಮ ಮೈಸೂರು, ಮಂಡ್ಯ, ಬೆಂಗಳೂರಿನ ಜನತೆಯನ್ನು ಕಾಡುವುದಂತು ಸತ್ಯ

ಹೇಮಾವತಿ ಜಲಾಶಯದಲ್ಲಿ ಎಷ್ಟು ನೀರು ಸಂಗ್ರಹವಾಗಿದೆ?

ಹೇಮಾವತಿ ಜಲಾಶಯದಲ್ಲಿ ಎಷ್ಟು ನೀರು ಸಂಗ್ರಹವಾಗಿದೆ?

ಹೇಮಾವತಿ ಜಲಾಶಯದಲ್ಲಿ ಪ್ರಸ್ತುತ 2869.50 ಅಡಿ ನೀರಿನ ಮಟ್ಟ ಇದೆ. 170 ಕ್ಯೂಸೆಕ್ ಒಳ ಹರಿವಿದ್ದರೆ, 170 ಹೊರ ಹರಿವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2877.91 ಅಡಿ ಇತ್ತು. 105 ಕ್ಯೂಸೆಕ್ ಒಳ ಹರಿವು ಹಾಗೂ 400 ಕ್ಯೂಸೆಕ್ ಹೊರ ಹರಿವು ದಾಖಲಾಗಿತ್ತು. ಹಾಲಿ ಜಲಾಶಯದಲ್ಲಿ 6.2 ಟಿಎಂಸಿ ನೀರು ಸಂಗ್ರಹವಾಗಿದೆ. ಇದರಲ್ಲಿ 4.3 ಟಿಎಂಸಿ ಡೆಡ್ ಸ್ಟೋರೇಜ್ ಇದೆ. ಇದರಲ್ಲಿ 1.9 ಟಿಎಂಸಿ ನೀರನ್ನು ಮಾತ್ರ ಬಳಕೆ ಮಾಡಿಕೊಳ್ಳಲು ಸಾಧ್ಯವಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ

ಹಾರಂಗಿ ಜಲಾಶಯದ ನೀರಿನ ಮಟ್ಟ

ಕೊಡಗಿನ ಪ್ರಮುಖ ಜಲಾಶಯ ಹಾರಂಗಿಯಲ್ಲೂ ನೀರು ತಳ ಸೇರಿದೆ ಸದ್ಯದ ಮಟ್ಟಿಗೆ 2792.63 ಅಡಿ ನೀರಿನಮಟ್ಟವಿದ್ದು, 52 ಕ್ಯೂಸೆಕ್ ನೀರು ಒಳ ಹರಿವಿದೆ. ಜಲಾಶಯದಲ್ಲಿ 8.5 ಟಿಎಂಸಿ ನೀರು ನೀರು ಸಂಗ್ರಹವಾಗಿದೆ. ಇದರಲ್ಲಿ 4.2 ಟಿಎಂಸಿ ಡೆಡ್ ಸ್ಟೋರೇಜ್ ಇದ್ದು, ಉಳಿದ ನೀರನ್ನು ಮಾತ್ರ ಉಪಯೋಗಿಸಿಕೊಳ್ಳಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Summer 2016 - Water level dipping in KRS Reservoir, Mysuru. Dry days are ahead, warns our staff reporter, Lava Kumar.
Please Wait while comments are loading...