ಜೆಡಿಎಸ್ ವಕ್ತಾರ ವೈಎಸ್‌ವಿ ದತ್ತಾ ವಿರುದ್ಧ ವಾರೆಂಟ್
ಬೆಂಗಳೂರು, ಸೆಪ್ಟೆಂಬರ್. 21: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಜೆಡಿಎಸ್ ಮುಖಂಡ, ಶಾಸಕ ವೈ.ಎಸ್.ವಿ.ದತ್ತಾ ವಿರುದ್ಧ ವಾರೆಂಟ್ ಜಾರಿಯಾಗಿದೆ. ನ್ಯಾಯಾಲಯದ ವಿಚಾರಣೆಗೆ ದತ್ತಾ ನಿರಂತರವಾಗಿ ಗೈರಾದ ಕಾರಣ ಬೆಂಗಳೂರಿನ 18ನೇ ಜೆಸಿಎಂಎಂ ನ್ಯಾಯಾಲಯ ಸೋಮವಾರ ವಾರಂಟ್ ಜಾರಿ ಮಾಡಿದೆ.
ಉದ್ಯಮಿಯೊಬ್ಬರಿಗೆ ದತ್ತಾ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಉದ್ಯಮಿಯಿಂದ ಸಾಲ ಪಡೆದಿದ್ದ ದತ್ತಾ ಅದಕ್ಕೆ ಬದಲಾಗಿ ಚೆಕ್ ನೀಡಿದ್ದರು. ಆದರೆ ಅದು ಅನೂರ್ಜಿತವಾಗಿದ್ದು ದತ್ತಾ ವಿರುದ್ಧ ದೂರು ದಾಖಲಾಗಿತ್ತು.

ಕಳೆದ ಎರಡು ವರ್ಷಗಳ ಹಿಂದೆಯೇ ದತ್ತಾ ಉದ್ಯಮಿಗೆ ಲೆಕ್ಕಾಚಾರದಂತೆ 10 ಲಕ್ಷ ರು. ನೀಡಬೇಕಿತ್ತು. ಇದೀಗ ನ್ಯಾಯಾಲಯ ವಾರೆಂಟ್ ಜಾರಿ ಮಾಡಿರುವುದರಿಂದ ದತ್ತಾ ಕೋರ್ಟ್ ಗೆ ಹಾಜರಾಗುವುದು ಅನಿವಾರ್ಯವಾಗುತ್ತದೆ.
ಜೆಡಿಎಸ್ ವಕ್ತಾರರಾಗಿ ಕಾರ್ಯ ನಿರ್ವಹಿಸುತ್ತಿರುವ ದತ್ತಾ, ಜೆಡಿಎಸ್ ವರಿಷ್ಠ ದೇವೇಗೌಡರ ಆಪ್ತ ವಲಯದಲ್ಲಿ ಕಾಣಿಸಿಕೊಳ್ಳುವವರು. ಕಡೂರು ಶಾಸಕರಾಗಿರುವ ದತ್ತಾ ಸರಳ, ಸಜ್ಜನ ರಾಜಕಾರಣಿ ಎಂದೇ ಹೆಸರು ಪಡೆದುಕೊಂಡಿದ್ದಾರೆ.











Click it and Unblock the Notifications