ಏಕವಚನದಲ್ಲಿ ಬೈದಾಡಿಕೊಂಡು, ಆಮೇಲೆ 'ವಿ ಆರ್ ಬ್ರದರ್ಸ್' ಅಂದ ಕಾಂಗ್ರೆಸ್, ಬಿಜೆಪಿ ಶಾಸಕರು
ಬೆಂಗಳೂರು, ಮಾರ್ಚ್ 9: ಏಕವಚನದಲ್ಲಿ ಬೈದಾಡಿಕೊಂಡರು. ತಾಕತ್ ಇದೆಯಾ ಎಂದು ಒಬ್ಬರನ್ನೊಬ್ಬರು ಪ್ರಶ್ನಿಸಿಕೊಂಡರು. ಸದನದಲ್ಲಿ ಈ ರೀತಿ ವರ್ತಿಸುವುದು ತಪ್ಪು ಎಂದು ಹಿರಿಯ ಶಾಸಕರೊಬ್ಬರು ಬುದ್ದಿ ಹೇಳಿದಾಗ, ನಮ್ಮಿಬ್ಬರ ನಡುವೆ ಬರಬೇಡಿ, ನಾವು ಸಹೋದರರು ಎಂದರು.
ಇದು ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಯು.ಟಿ.ಖಾದರ್ ಮತ್ತು ಬೆಳ್ತಂಗಡಿಯ ಯುವ ಬಿಜೆಪಿ ಶಾಸಕ ಹರೀಶ್ ಪೂಂಜಾ ನಡುವೆ ನಡೆದ ಸಂಭಾಷಣೆ.
"ಇವನು ಬಹಳಷ್ಟು ಬಾರಿ ನನಗೆ ದೇಶದ್ರೋಹಿ ಎಂದ, ನನಗೆ ಇದರಿಂದ ಏನೂ ಬೇಸರವಿಲ್ಲ. ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಒಬ್ಬ ದೇಶದ್ರೋಹಿ ಎಂದು ನಿನಗೆ ತಾಕತ್ ಇದ್ದರೆ ಹೇಳು" ಎಂದು ಶಾಸಕ ಖಾದರ್, ಹರೀಶ್ ಪೂಂಜಾಗೆ ಸವಾಲು ಎಸೆದರು. ಇದಕ್ಕೆ ಪೂಂಜಾ ತಿರುಗೇಟು ನೀಡಿದರು.

"ಇದು ಇವರಿಬ್ಬರ ನಡುವಿನ ಚರ್ಚೆಯಲ್ಲ" ಎಂದು ಸಿ.ಟಿ.ರವಿ ಮಧ್ಯಪ್ರವೇಶಿಸಿದಾಗ, ಬಿಜೆಪಿಯ ಹಿರಿಯ (ವಿರಾಜಪೇಟೆ) ಶಾಸಕ ಕೆ.ಜಿ.ಬೋಪಯ್ಯ ಎದ್ದುನಿಂತು, "ಶಾಸಕರನ್ನು ಏಕವಚನದಲ್ಲಿ ಸಂಭೋದಿಸುತ್ತಿರುವುದು ತಪ್ಪು, ಖಾದರ್ ಅವರ ಮಾತನ್ನು ಕಡತದಿಂದ ತೆಗೆದು ಹಾಕಬೇಕೆಂದು" ಒತ್ತಾಯಿಸಿದರು.
ಆಗ ಖಾದರ್, "ನನ್ನ ತಮ್ಮನನ್ನು ನಾನು ಏಕವಚನದಲ್ಲೇ ಮಾತನಾಡಿಸುವುದು. ನನ್ನ ಸಹೋದರನನ್ನು ಏಕವಚನದಲ್ಲಿ ಮಾತನಾಡಿಸಿದರೆ, ನಿಮಗೇನು ತೊಂದರೆ" ಎಂದಾಗ, "ಅದೆಲ್ಲಾ ಸದನದಲ್ಲಿ ನಡೆಯುವುದಿಲ್ಲ" ಎಂದು ಬೋಪಯ್ಯ ಹೇಳಿದರು.
"ನಾವು ಮಾಡುವ ಪ್ರತೀ ಕೆಲಸ, ಮಾತು ದೇಶದ ಅಭಿವೃದ್ದಿಗೆ ಪೂರಕವಾಗಿರಬೇಕೆಂದು" ಖಾದರ್ ತಮ್ಮ ಭಾಷಣವನ್ನು ಮುಂದುವರಿಸಿದರು.












Click it and Unblock the Notifications