ವಕ್ಫ್ ಆಸ್ತಿ, ನೋಟಿಸ್ ವಿವಾದ: ರಾಜ್ಯ ಪ್ರಭಾವಿ ಸಚಿವರಿಂದಲೇ ಭಿನ್ನ ಹೇಳಿಕೆ!
waqf board controversy: ವಕ್ಫ್ ಬೋರ್ಡ್‌ನಿಂದ ನೋಟಿಸ್ ನೀಡಿರುವ ವಿಚಾರದಲ್ಲಿ ಕಾಂಗ್ರೆಸ್‌ನ ಪ್ರಭಾವಿ ಸಚಿವರೇ ಭಿನ್ನ ಹೇಳಿಕೆಗಳು ಕೊಡುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ವಕ್ಫ್ ಬೋರ್ಡ್‌ನಿಂದ ರೈತರಿಗೆ ನೋಟಿಸ್ ನೀಡಲಾಗಿದೆ ಎನ್ನುವ ವಿಷಯ ಇದೀಗ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಇದೀಗ ರಾಜ್ಯ ಕಾಂಗ್ರೆಸ್ ಸಚಿವರೇ ಈ ವಿಷಯದಲ್ಲಿ ಗೊಂದಲದ ಹೇಳಿಕೆಗಳನ್ನು ಕೊಡುತ್ತಿದ್ದಾರೆ.
ವಕ್ಫ್ ಬೋರ್ಡ್‌ನಿಂದ ನೋಟಿಸ್ ನೀಡುರುವ ವಿಚಾರವಾಗಿ ಸಚಿವರಾದ ಸಂತೋಷ ಲಾಡ್ ಹಾಗೂ ಜಮೀರ್ ಅಹ್ಮದ್ ಖಾನ್ ಅವರು ವ್ಯತ್ಯರಿಕ್ತ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಈ ಇಬ್ಬರು ಸಚಿವರ ಹೇಳಿಕೆಗಳೇ ಇದೀಗ ಸಾಕಷ್ಟು ಗೊಂದಲವನ್ನು ಸೃಷ್ಟಿ ಮಾಡಿದೆ. ಈ ಬಗ್ಗೆ ಮಾತನಾಡಿರುವ ಸಂತೋಷ್ ಲಾಡ್ ಅವರು, ವಕ್ಫ್ ಗೊಂದಲ ವಿಚಾರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸುಮ್ಮನೆ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ವಕ್ಫ್ ಸಂಬಂಧ ಯಾವ ರೈತರಿಗೂ ನೋಟೀಸ್ ಕೊಟ್ಟಿಲ್ಲ ಎಂದಿದ್ದಾರೆ.

ನಮ್ಮ ಸರ್ಕಾರ ಬಂದಾಗಿನಿಂದ ನೋಟಿಸ್ ಕೊಟ್ಟಿಲ್ಲ ಹಿಂದಿನ ಸರ್ಕಾರದ ಅವಧಿಯಲ್ಲಿ ನೋಟಿಸ್ ಕೊಟ್ಟಿದ್ದು ಇದು ನಾವು ಬಂದಾಗಿನಿಂದ ನೋಟಿಸ್ ಹೋಗಿಲ್ಲ. ಈಗಾಗಲೇ ನೋಟಿಸ್ ಕೊಟ್ಟಿರುವುದು 2018ರಲ್ಲಿ. ಇದು ನಮ್ಮ ಗಮನಕ್ಕೆ ಇಲ್ಲಿವರೆಗೂ ಬಂದಿರಲಿಲ್ಲ
ಈಗ ಗಮನಕ್ಕೆ ಬಂದಿದೆ. ಸೋಮವಾರ ಈ ಸಂಬಂಧ ಸಭೆ ಮಾಡಲು ಜಿಲ್ಲಾಧಿಕಾರಿಗಳಿಗೆ ಹೇಳಿದ್ದೇನೆ. ಇದರ ಜೊತೆಗೆ ಸಂಬಂಧಿಸಿದವರ ಜೊತೆ ಸಭೆ ಮಾಡಿ ವರದಿ ಕೊಡಲು ಹೇಳಿದ್ದೇನೆ ಎಂದರು.
ಇನ್ನು ಮುಸ್ಲಿಂ ರೈತರ ಪಹಣಿಯಲ್ಲಿಯೂ ವಕ್ಫ್ ಪ್ರಸ್ತಾಪ ವಿಚಾರವಾಗಿ ಸಹ ಮಾತನಾಡಿದ ಅವರು ವಕ್ಫ್ ಮಾತ್ರವಲ್ಲ, ಮುಜರಾಯಿ ಇಲಾಖೆಯ ಜಾಗವೂ ಕಬಳಿಕೆ ಆಗಿದೆ. ಕಂದಾಯ ಇಲಾಖೆ, ಬಿಡಿಎ ಸೈಟ್‌ಗಳೂ ಕಬಳಿಕೆ ಆಗಿವೆ. ಹೀಗಾಗಿ, ನೋಟಿಸ್‌ಗಳನ್ನು ಕೊಡ್ತಾ ಇದ್ದಾರೆ. ಇದಕ್ಕಾಗಿಯೇ ಟ್ರಿಬ್ಯುನಲ್ ಇದೆ. ಆ ಮೂಲಕ ಎಲ್ಲವೂ ನಡೆಯುತ್ತದೆ ಎಂದರು. ಉಪಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರನಲ್ಲಿ ಚೆನ್ನಾಗಿ ಪ್ರಚಾರ ನಡೆದಿದ್ದು ಸಂಪೂರ್ಣ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ.
ನೋಟಿಸ್ ಕೊಟ್ಟಿದ್ದರೆ ವಾಪಸ್ ತಗೋತೀವಿ
ಇನ್ನು ಈ ನಡುವೆ ವಕ್ಫ್ ಬೋರ್ಡ್‌ನಿಂದ ಯಾವುದೇ ರೈತರಿಗೂ ನೋಟಿಸ್ ಜಾರಿ ಮಾಡಿಲ್ಲ. ಒಂದೊಮ್ಮೆ ನೋಟಿಸ್ ನೀಡಿದ್ದರೆ ಅದನ್ನು ವಾಪಸ್ ತಗೋತೀವಿ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ವಕ್ಫ್ ಆಸ್ತಿ ಯಾರಿಗೂ ಸೇರಿದ್ದಲ್ಲ. ಸರ್ಕಾರದ್ದೂ ಅಲ್ಲ. ಸರ್ಕಾರದಿಂದ ಒಂದೇ ಒಂದು ಇಂಚು ಆಸ್ತಿಯನ್ನೂ ಸಹ ಪಡೆದಿಲ್ಲ. ಆದರೆ, ಯಾವುದೇ ರೈತರಿಗೆ ನೋಟಿಸ್ ಜಾರಿ ಮಾಡಿದ್ದರೆ ನಾವು ಹಿಂಪಡೆಯಲಿದ್ದೇವೆ ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಯಾವುದೇ ರೈತರ ಆಸ್ತಿಗೆ ನೋಟಿಸ್ ಕೊಡ್ಬೇಡಿ ಅಂತ ಹೇಳಿದ್ದಾರೆ. ಬಿಜೆಪಿ ಅವರು ರಾಜಕೀಯ ಮಾಡಲಿ. ಆದರೆ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದಿದ್ದಾರೆ.
ಈ ರೀತಿ ರಾಜ್ಯ ಸರ್ಕಾರದ ಪ್ರಮುಖ ಸಚಿವರೇ ಒಂದೊಂದು ಹೇಳಿಕೆ ಕೊಡುತ್ತಿರುವುದು ಸದ್ಯ ಜನರಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿದೆ. ಇನ್ನು ಉಪ ಚುನಾವಣೆ ದಿನಾಂಕವೂ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ವಕ್ಫ್ ಬೋರ್ಡ್ ವಿವಾದ ಸೃಷ್ಟಿಯಾಗಿರುವುದು ಸರ್ಕಾರಕ್ಕೆ ಭಾರೀ ಮುಜುಗರವನ್ನು ತಂದೊಡ್ಡಿದೆ.












Click it and Unblock the Notifications