ವಕ್ಫ್ ಬೋರ್ಡ್ ವಿವಾದ ನಡುವೆ ವಕ್ಫ್ ಚುನಾವಣೆ, ಜಮೀರ್ ಹೇಳಿದ್ದೇನು ?
waqf board latest controversy: ಕರ್ನಾಟಕದಲ್ಲಿ ವಕ್ಫ್ ಬೋರ್ಡ್ ನೋಟಿಸ್ ವಿವಾದ ಇನ್ನೂ ತಣ್ಣಗಾಗಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಬಗ್ಗೆ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಲ್ಲೇ ಇವೆ. ಇದೀಗ ವಕ್ಫ್ ಬೋರ್ಡ್ ವಿವಾದ ಜೋರಾಗಿ ಇರುವ ನಡುವೆಯೇ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ.
ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ವಕ್ಫ್ ಬೋರ್ಡ್‌ನಿಂದ ರೈತರಿಗೆ ನೋಟಿಸ್ ಹೋಗಿರುವುದು ಸಾಕಷ್ಟು ವಿವಾದ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು. ಈ ನಡುವೆ ವಕ್ಫ್ ಬೋರ್ಡ್ ಚುನಾವಣೆ ಶುರುವಾಗುತ್ತಿದೆ.

ರಾಜ್ಯದಲ್ಲಿ ಈ ಹಿಂದೆ ಎಂದೂ ಇಲ್ಲದಂತೆ ಈ ಬಾರಿ ವಕ್ಫ್ ಬೋರ್ಡ್ ಸಾಕಷ್ಟು ವಿವಾದವನ್ನು ಸೃಷ್ಟಿ ಮಾಡಿತ್ತು. ಉಪ ಚುನಾವಣೆಯ ಹೊಸ್ತಿಲಿನಲ್ಲಿ ಇರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಇನ್ನು ಇದೀಗ ವಕ್ಫ್ ಬೋರ್ಡ್ ಚುನಾವಣೆ ಸಹ ಸಮೀಪಿಸುತ್ತಿದ್ದು, ಇದಕ್ಕೆ ಸಂಬಂಧಿಸಿದ ಸಭೆಗಳು ಸದ್ದಿಲ್ಲದೆ ನಡೆಯುತ್ತಿವೆ.
ಹುಬ್ಬಳ್ಳಿಯ ಖಾಸಗಿ ಹೋಟೆಲ್‌ವೊಂದರಲ್ಲಿ ಬುಧವಾರ ಜಮೀರ್ ಅಹ್ಮದ್ ಖಾನ್ ಅವರು ಸಭೆ ನಡೆಸಿದ್ದಾರೆ. ವಕ್ಫ್ ಬೋರ್ಡ್ ಚುನಾವಣೆ ಹಿನ್ನೆಲೆ ಮುಸ್ಲಿಂ ಮುಖಂಡರ ಸಭೆ ನಡೆಸಲಾಯಿತು. ಈ ಸಭೆಯ ನೇತೃತ್ವವನ್ನು ಜಮೀರ್ ಅವರು ವಹಿಸಿಕೊಂಡಿದ್ದರು. ಇನ್ನು ಇದೇ ತಿಂಗಳ 19ಕ್ಕೆ ವಕ್ಫ್ ಬೋರ್ಡ್ ಚುನಾವಣೆ ನಡೆಯಲಿದೆ ಎಂದು ಹೇಳಲಾಗಿದೆ. ಹೀಗಾಗಿ, ಭಾರೀ ಕುತೂಹಲ ಸೃಷ್ಟಿಯಾಗಿದೆ.
ಈ ಸಂಬಂಧ ಮಾತನಾಡಿರುವ ಜಮೀರ್ ಅಹ್ಮದ್‌ಖಾನ್ ಅವರು, ವಕ್ಫ್ ಬೋರ್ಡ್ ಚುನಾವಣೆ ಇರುವ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿತ್ತು. ವಕ್ಫ್ ಸಮಸ್ಯೆಗೂ ಇದಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ. ಇನ್ನು ಯಾವ ಮುಸ್ಲಿಂ ರೈತರನ್ನೂ ಸಭೆಗೆ ಕರೆದಿಲ್ಲ.
ಯಾರೂ ಬಂದೂ ಇಲ್ಲ. ರೈತರು ಯಾವುದೇ ಸಮುದಾಯಕ್ಕೆ ಸೇರಿರಲಿ. ರೈತರಿಗೆ ನೋಟಿಸ್ ಹೋಗಿದ್ದರೆ ಕೂಡಲೇ ಹಿಂಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಾನು ಇಬ್ಬರೂ ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ಯಾವ ಕಾರಣಕ್ಕೂ ರೈತರಿಗೆ ತೊಂದರೆ ಕೊಡಲು ನಾನು ಸಿದ್ಧನಿಲ್ಲ. ರೈತರು ನಮ್ಮ ಅನ್ನದಾತರು ಅವರಿಗೆ ತೊಂದರೆ ಕೊಡೋದಿಲ್ಲ.
ಧಾರವಾಡ ಜಿಲ್ಲೆಯ ಸಭೆ ಅಷ್ಟೇ ಇದು. ಈ ಬಿಜೆಪಿ ಅವರು ಸುಮ್ನನೆ ರಾಜಕೀಯ ಮಾಡ್ತಿದ್ದಾರೆ. ಅವರದ್ದು ಪ್ರತಿಭಟನೆ ಅಲ್ಲ, ಬರೀ ರಾಜಕೀಯ. ನಾವು ಒಳ್ಳೆಯ ಕೆಲಸ ಮಾಡಿದರೆ ಅವರಿಗೆ ಸಹಿಸುವುದಕ್ಕೆ ಆಗಲ್ಲ. ಅವರು ರಾಜಕೀಯ ಮಾಡ್ತಿದ್ದಾರೆ, ನಮ್ಮ ರಾಜಕೀಯ ನಾವು ಮಾಡ್ತಾ ಇದ್ದೇವೆ ಎಂದ ಜಮೀರ್ ಹೇಳಿದ್ದಾರೆ.
ವಕ್ಫ್ ಬೋರ್ಡ್ ವಿವಾದದಿಂದ ಪೆಟ್ಟು: ರಾಜ್ಯದಲ್ಲಿ ಉಪ ಚುನಾವಣೆ ಇರುವ ಸಮಯದಲ್ಲಿ ವಕ್ಫ್ ಬೋರ್ಡ್ ವಿವಾದ ಸೃಷ್ಟಿಯಾಗಿರುವುದು ರಾಜ್ಯ ಕಾಂಗ್ರೆಸ್ ನಾಯಕರನ್ನು ಸಂಕಷ್ಟದಲ್ಲಿ ಸಿಲುಕಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಜಂಟಿಯಾಗಿ ಹೋರಾಟ ಮಾಡುತ್ತಿವೆ.












Click it and Unblock the Notifications