'ಗೃಹಜ್ಯೋತಿ' ಫಲಾನುಭವಿಯಾಗಲು ಮೊದಲು ಬಾಕಿ ಇರುವ ಬಿಲ್ ಕಟ್ಟಿ
ಬೆಂಗಳೂರು, ಜೂನ್ 06: ಕರ್ನಾಟಕ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದ 'ಗೃಹಜ್ಯೋತಿ' ಯೋಜನೆ ಬಗ್ಗೆ ಅಧಿಕೃತ ಆದೇಶ ಪ್ರಕಟವಾಗಿದೆ. ಯೋಜನೆಯ ಫಲಾನುಭವಿಗಳಾಗಲು ಹಲವು ಷರತ್ತುಗಳಿವೆ. ಈ ಯೋಜನೆಯ ಲಾಭ ಪಡೆಯುಬೇಕಾದರೆ ಜನರು ಮೊದಲು ಬಾಕಿ ಇರುವ ಮನೆಯ ವಿದ್ಯುತ್ ಬಾಕಿ ಪಾವತಿ ಮಾಡಬೇಕಿದೆ.
ಸರ್ಕಾರದ ಆದೇಶದಂತೆ 'ಗೃಹಜ್ಯೋತಿ' ಯೋಜನೆ ಜುಲೈ 2023ರ ತಿಂಗಳ ವಿದ್ಯುತ್ ಬಿಲ್ ಬಳಕೆಗೆ ಆಗಸ್ಟ್ 2023ರ ತಿಂಗಳು ನೀಡುವ ಬಿಲ್‌ಗೆ ಅನ್ವಯವಾಗಲಿದೆ. ಕೆಲವು ಷರತ್ತುಗಳೊಂದಿಗೆ ಈ ಯೋಜನೆ ಜಾರಿಗೆ ಬರಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಗೃಹ ಬಳಕೆ ವಿದ್ಯುತ್‌ಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ.

ಕಾಂಗ್ರೆಸ್ ಪಕ್ಷ ಚುನಾವಣೆ ಪ್ರಣಾಳಿಕೆ ಬಿಡುಗಡೆಗೂ ಮೊದಲು ರಾಜ್ಯದ ಜನರಿಗೆ ನೀಡಿದ್ದ 5 ಗ್ಯಾರಂಟಿಗಳ ಪೈಕಿ 'ಗೃಹಜ್ಯೋತಿ' ಯೋಜನೆ ಸಹ ಒಂದು. ಈ ಯೋಜನೆ ಅನ್ವಯ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಷರತ್ತುಗಳ ಜೊತೆ ಯೋಜನೆಯ ವಿವರಗಳನ್ನು ಪ್ರಕಟಿಸಲಾಗಿದೆ.
ಮೊದಲು ಬಿಲ್ ಕಟ್ಟಿ; 'ಗೃಹಜ್ಯೋತಿ' ಯೋಜನೆಯ ಫಲಾನುಭವಿಗಳಾಗಲು ಗ್ರಾಹಕರು ಜುಲೈ 2023ರ ವರೆಗಿನ ಪೂರ್ಣ ವಿದ್ಯುತ್ ಬಾಕಿಯನ್ನು ತಾವೇ ಪಾವತಿಸಬೇಕಾಗಿರುತ್ತದೆ ಎಂದು ತಿಳಿಸಲಾಗಿದೆ. ಈ ಯೋಜನೆ ಹಿಂದಿನ ತಿಂಗಳಿನಿಂದ ಅನ್ವಯ ಆಗುವುದಿಲ್ಲ. ಅಲ್ಲದೇ ಬಿಲ್ ಕಟ್ಟಿದ್ದರೆ ಅದನ್ನು ನಿಮ್ಮ ಬ್ಯಾಂಕ್ ಖಾತೆಗೆ ಸಹ ವಾಪಸ್ ನೀಡುವುದಿಲ್ಲ.
ಬಾಕಿ ಉಳಿಸಿಕೊಂಡಿರುವವರು ಅತೀ ಶೀಘ್ರವಾಗಿ ಬಾಕಿ ಪಾವತಿಸಿ 'ಗೃಹಜ್ಯೋತಿ' ಯೋಜನೆಗೆ ಅರ್ಹ ಫಲಾನುಭವಿಗಳಾಗಿ ಎಂದು ವಿದ್ಯುತ್ ಸರಬರಾಜು ಕಂಪನಿಗಳು ಮನವಿ ಮಾಡಿವೆ. ನಿಯಮದಂತೆ ಬಿಲ್ ಪಾವತಿ ಮಾಡದಿದ್ದರೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ಸಹ ನೀಡಲಾಗಿದೆ.

ಷರತ್ತುಗಳು; ಸರ್ಕಾರದ ಆದೇಶದ ಪ್ರಕಾರ ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ/ ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯಡಿಯ ಫಲಾನುಭವಿಗಳನ್ನು ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.
'ಗೃಹಜ್ಯೋತಿ' ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23ರ ಬಳಕೆಯ ಆಧಾರದನ್ವಯ) ಯೂನಿಟ್‌ಗಳ ಮೇಲೆ ಶೇ.10ರಷ್ಟು ಹೆಚ್ಚಿನ ಬಳಕೆಯ ಮಿತಿಯನ್ನು ಅನುಮತಿಸಿದೆ. 200 ಯೂನಿಟ್‌ಗಳ ಬಳಕೆಯನ್ನು ಮೀರಿದ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್ ಪಾವತಿಸಲು ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ.
* ಈ ಯೋಜನೆಯು ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯವಾಗುತ್ತದೆ. ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಅನ್ವಯವಾಗುವುದಿಲ್ಲ.
* ಪ್ರತಿ ತಿಂಗಳ ಮಿಟರ್ ರೀಡಿಂಗ್ ಮಾಡಿದಾಗ, ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ ಅನ್ನು ನಮೂದಿಸುವುದು.
* ಗೃಹ ವಿದ್ಯುತ್ ಬಳಕೆದಾರನ ಅರ್ಹ ಮೊತ್ತವನ್ನು ಬಿಲ್‌ನಲ್ಲಿ ಕಡಿತಗೊಳಿಸಿ, ಉಳಿದ ಮೊತ್ತವನ್ನು ಗ್ರಾಹಕರಿಗೆ net bill ನೀಡುವುದು ಹಾಗೂ ಗ್ರಾಹಕರು net bill ಅನ್ನು ಪಾವತಿಸುವುದು.
* ಅರ್ಹ ಯೂನಿಟ್/ ಮೊತ್ತಕ್ಕಿಂತ ಒಳಗೆ ಬಿಲ್ ಆಗಿದ್ದಲ್ಲಿ ಅಂತಹ ಗ್ರಾಹಕರಿಗೆ ಶೂನ್ಯ ಬಿಲ್ ಅನ್ನು ನೀಡಲಾಗುವುದು.
* ಈ ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು.
* ಪ್ರತಿ ಫಲಾನುಭವಿಯು ತನ್ನ Customer ID/ Account ID ಅನ್ನು ಆಧಾರ್‌ಗೆ ಕಡ್ಡಾಯವಾಗಿ ಜೋಡಣೆ ಮಾಡುವುದು.
* ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ/ ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ
ಯೋಜನೆಯ ಫಲಾನುಭವಿ ಗ್ರಾಹಕರುಗಳನ್ನು ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಸೇರ್ಪಡೆ ಮಾಡುವುದು.
* ದಿನಾಂಕ 30/06/2023ರ ಅಂತ್ಯಕ್ಕೆ (ಜೂನ್ 2023ರ ಮಾಹೆಯಲ್ಲಿ ಬಳಸಿದ ವಿದ್ಯುತ್ ಪ್ರಮಾಣಕ್ಕೆ ಜುಲೈ 2023ರಲ್ಲಿ ವಿತರಿಸಿದ ಬಿಲ್ಲಿನ ಮೊತ್ತ ಒಳಗೊಂಡಂತೆ) ಬಾಕಿ ಇರುವ ವಿದ್ಯುತ್ ಶುಲ್ಕದ ಬಾಕಿ ಮೊತ್ತವನ್ನು 3 ತಿಂಗಳೊಳಗೆ ಪಾವತಿಸತಕ್ಕದ್ದು, ಬಾಕಿ ಮೊತ್ತವನ್ನು ನಿಗದಿತ ಅವಧಿಯೊಳಗೆ ಪಾವತಿಸದಿದ್ದಲ್ಲಿ ಅಂತಹ ಗ್ರಾಹಕರ ವಿದ್ಯುತ್ ಸ್ಥಾವರಗಳ ಸಂಪರ್ಕವನ್ನು ಕಡಿತಗೊಳಿಸಲಾಗುವುದು.
* ಗೃಹ ವಿದ್ಯುತ್ ಗ್ರಾಹಕರ ಸ್ಥಾವರಗಳಿಗೆ ಮಾಪಕವನ್ನು ಅಳವಡಿಸುವುದು ಹಾಗೂ ಮಾಪಕ ಓದುವುದು ಕಡ್ಡಾಯವಾಗಿರುತ್ತದೆ.
* ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದಲ್ಲಿ, ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆಯಡಿಯ ಸೌಲಭ್ಯಕ್ಕೆ ಅರ್ಹರಾಗುವರು.
* ಗ್ರಾಹಕನಿಗೆ ನೀಡಿದ ಉಚಿತ ಮೊತ್ತವನ್ನು ಸರ್ಕಾರದಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸಹಾಯಧನದ ಮೂಲಕ ಪಾವತಿಸಲಾಗುವುದು.












Click it and Unblock the Notifications