ರಾಷ್ಟ್ರಪತಿ ಚುನಾವಣೆ: ವಿಧಾನಸೌಧದಲ್ಲಿ ಮತದಾನ ಮಾಡಿದ ನಾಯಕರು
ಬೆಂಗಳೂರು, ಜುಲೈ 18; ನೂತನ ರಾಷ್ಟ್ರಪತಿ ಆಯ್ಕೆಗಾಗಿ ಸೋಮವಾರ ಮತದಾನ ನಡೆದಿದ್ದು, ಮತದಾನ ಬಿರುಸಿನಿಂದ ನಡೆದಿದೆ. ವಿಧಾನಸೌಧದ ಮೊದಲನೇ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ಬೆಳಗ್ಗೆ 10ರಿಂದ ಮತದಾನ ಆರಂಭವಾಗಿತ್ತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಜೊತೆಗೆ ಬಂದು ಮತ ಚಲಾಯಿಸಿದರು. ನಂತರ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕರು ಮತ ಚಲಾವಣೆ ಮಾಡಿದರು.
ಮತದಾನದ ಕೊನೆಯ ಹಂತದಲ್ಲಿ ಎಲ್ಲ 224 ಶಾಸಕರು ಹಾಗೂ ಇಬ್ಬರು ಸಂಸದರು ಮತದಾನ ಮಾಡಿದರು. ನಂತರ 224 ಶಾಸಕರ ಜೊತೆ ರಾಜ್ಯಸಭೆ ಸದಸ್ಯರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಮತದಾನ ಮಾಡಿದ್ದರು. ಸೋಮವಾರ ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಎಲ್ಲರೂ ಮತದಾನ ಮಾಡಿದ್ದರು. ಮೊದಲ ಮತವನ್ನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾವೇರಿ ಚಲಾಯಿಸಿದರೆ, ಕಡೆಯ ಮತವನ್ನು ಕಾಂಗ್ರೆಸ್ ಸದಸ್ಯ ಡಾ. ಮಂಜುನಾಥ್ ಚಲಾಯಿಸಿದ್ದಾರೆ.

ಬಿಜೆಪಿಯಿಂದ 119, ಬಿಎಸ್‌ಪಿ, ಪಕ್ಷೇತರ ಹಾಗೂ ಸಭಾಧ್ಯಕ್ಷರಿಂದ ತಲಾ ಒಂದು ಮತ ಸೇರಿದಂತೆ ಒಟ್ಟು 122, ಕಾಂಗ್ರೆಸ್ 69 ಹಾಗೂ ಪಕ್ಷೇತರ ಸದಸ್ಯ ಸೇರಿ 70, ಜೆಡಿಎಸ್ನ 32 ಸದಸ್ಯರು ಸೇರಿದಂತೆ 224 ಶಾಸಕರು ಹಾಗೂ ಓರ್ವ ರಾಜ್ಯಸಭೆ ಸದಸ್ಯ, ಓರ್ವ ಲೋಕಸಭೆ ಸದಸ್ಯರು ಮತದಾನ ಮಾಡಿದ್ದರು. ಸಂಜೆ 5 ಗಂಟೆ ನಂತರ ಮತ ಪೆಟ್ಟಿಗೆ ಸೀಲ್ ಮಾಡಿ 5:30ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕಳುಹಿಸಿದ್ದಾರೆ. ವಿಧಾನಸಭೆ ಕಾರ್ಯದರ್ಶಿ ಕಚೇರಿಯ ಅಧಿಕಾರಿ ಮಹಾಂತೇಶ್ ಹಾಗೂ ಜಂಟಿ ಮುಖ್ಯ ಚುನಾವಣಾ ಅಧಿಕಾರಿ ರಾಘವೇಂದ್ರ ಮತಪೆಟ್ಟಿಗೆ ಜೊತೆ ದೆಹಲಿಗೆ ತೆರಳಲಿದ್ದಾರೆ. ಸೂಕ್ತ ಭದ್ರತೆಯೊಂದಿಗೆ ಮತ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡ ವಾರು ಕಾಲು ನೋವಿನಿಂದ ಬಳಲುತ್ತಿರುವ ಕಾರಣ ಮತದಾನಕ್ಕೆ ವಿಳಂಬವಾಗಿ ಆಗಮಿಸಿದ್ದರು. ವಿಧಾನಸೌಧ ಆವರಣದಲ್ಲಿ ಅವರಿಗೆ ವೀಲ್ ಚೇರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಅವರು ವೀಲ್ ಚೇರ್ ಮೂಲಕ ಆಗಮಿಸಿ ಮತದಾನ ಮಾಡಿ ತೆರಳಿದ್ದರು. ಅನಾರೋಗ್ಯದಿಂದ ಬಳಲುತ್ತಿರುವ ಶ್ರೀನಿವಾಸ್ ಪ್ರಸಾದ್ ಸಹ ವಿಧಾನಸೌಧದಲ್ಲಿಯೇ ತಮ್ಮ ಮತದಾನ ಪ್ರಕ್ರಿಯೆ ಪೂರ್ಣಗೊಳಿಸಿದ್ದರು.












Click it and Unblock the Notifications