ಮೇ 7ರಂದು ಮತದಾನ: ಸರ್ಕಾರಿ ಬಸ್ ಸಂಚಾರದಲ್ಲಿ ವ್ಯತ್ಯಯ
ಬೆಂಗಳೂರು, ಮೇ 05: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೇ 7ರ ಮಂಗಳವಾರ ಮತದಾನ ನಡೆಯಲಿದೆ. ಚುನಾವಣಾ ಕಾರ್ಯಕ್ಕಾಗಿ ಸರ್ಕಾರಿ ಬಸ್, ಖಾಸಗಿ ವಾಹನಗಳ ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಹಿನ್ನಲೆಯಲ್ಲಿ ಸರ್ಕಾರಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಮಂಗಳವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದೆ. ದಾವಣಗೆರೆ, ಶಿವಮೊಗ್ಗ ಮತ್ತು ಉತ್ತರ ಕರ್ನಾಟಕ ಭಾಗದ 14 ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಸೋಮವಾರ ಬೆಳಗ್ಗೆಯೇ ಮಾಸ್ಟರಿಂಗ್ ಸ್ಥಳದಲ್ಲಿ ಬಸ್‌ಗಳು ಇರಲಿವೆ.

ಆದ್ದರಿಂದ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮೇ 6 ಮತ್ತು 7ರಂದು ಸರ್ಕಾರಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ. ಮತದಾನ ಮುಗಿದು, ಮಯಯಂತ್ರಗಳನ್ನು ಮತ ಎಣಿಕೆ ಕೇಂದ್ರಕ್ಕೆ ಸಾಗಣೆ ಮಾಡಿದ ಬಳಿಕ ಸರ್ಕಾರಿ ಬಸ್‌ಗಳ ಸಾಮಾನ್ಯ ಟ್ರಿಪ್‌ಗಳು ಆರಂಭವಾಗಲಿವೆ.
ಬಸ್ ಸಂಚಾರ ವ್ಯತ್ಯಯ ಮಾಹಿತಿ: ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಈಗಾಗಲೇ ಸರ್ಕಾರಿ ಬಸ್ ಸಂಚಾರ ವ್ಯತ್ಯಯದ ಕುರಿತು ಮಾಹಿತಿಯನ್ನು ನೀಡಿದೆ. ಜನರು ಸಹಕಾರ ನೀಡಬೇಕು ಎಂದು ಮನವಿಯನ್ನು ಮಾಡಿದೆ. ಮೇ 7 ರಂದು ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಚುನಾವಣಾ ಕಾರ್ಯಕ್ಕೆ ಬಳ್ಳಾರಿ ವಿಭಾಗದಿಂದ ಒಟ್ಟು 190 ಬಸ್‍ಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ಒದಗಿಸಲಾಗಿದೆ.
ಆದ್ದರಿಂದ ಮೇ 6 (ಸೋಮವಾರ) ಮತ್ತು ಮೇ 7 (ಮಂಗಳವಾರ) ಬಳ್ಳಾರಿ, ಸಿರುಗುಪ್ಪ, ತೆಕ್ಕಲಕೋಟೆ, ಕುರುಗೋಡು, ಕುಡುತಿನಿ, ಕಂಪ್ಲಿ ಮತ್ತು ಸಂಡೂರು ಭಾಗದಿಂದ ವಿವಿಧೆಡೆ ತೆರಳುವ ದೈನಂದಿನ ಬಸ್‍ಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ವಿಭಾಗದ ಕಕರಸಾ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಮೇ 7ರಂದು ಮತದಾನ ನಡೆಯುವ ಜಿಲ್ಲೆಗಳ ವ್ಯಾಪ್ತಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಸ್ ಸೇವೆಯನ್ನು ನೀಡುತ್ತದೆ. ಚುನಾವಣಾ ಕಾರ್ಯದ ಹಿನ್ನಲೆಯಲ್ಲಿ ಈ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳಲ್ಲಿ ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮೇ 7ರಂದು ನಡೆಯಲಿರುವ ಮತದಾನದ ಪ್ರಯುಕ್ತ ಮೇ 3 ರಿಂದ 6 ರ ತನಕ ವಿಶೇಷ ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ. ಬೆಂಗಳೂರು ನಗರ ಮತ್ತು ಉತ್ತರ ಕರ್ನಾಟಕ ನಡುವೆ ಈ ಬಸ್‌ಗಳು ಸಂಚಾರ ನಡೆಸಲಿವೆ.
ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಚಿಕ್ಕೋಡಿ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ ಮತ್ತು ಇನ್ನಿತರ ಸ್ಥಳಗಳಿಗೆ ವಿಶೇಷ ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಗುತ್ತಿದೆ ಎಂದು ಮುಂಗಡ ಟಿಕೆಟ್‌ಗಳನ್ನು ಕಾಯ್ದಿರಿಸಿ ರಿಯಾಯಿತಿಗಳನ್ನು ಸಹ ಪಡೆಯಬಹುದಾಗಿದೆ.
ಭಾರತೀಯ ರೈಲ್ವೆಯು ಸಹ ಮತದಾನದ ದಿನ ಜನರು ಬೆಂಗಳೂರು ನಗರದಿಂದ ಉತ್ತರ ಕರ್ನಾಟಕ ಭಾಗಕ್ಕೆ ಸಂಚಾರ ನಡೆಸಲು ಮತ್ತು ಬೆಂಗಳೂರಿಗೆ ವಾಪಸ್ ಹೋಗಲು ಅನುಕೂಲವಾಗುವಂತೆ ಒಂದು ಟ್ರಿಪ್ ವಿಶೇಷ ರೈಲುಗಳ ವ್ಯವಸ್ಥೆಯನ್ನು ಮಾಡಿದೆ.
ಮಂಗಳವಾರ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಇನ್ನು ಮತದಾನದ ದಿನದಂದು ಅಭ್ಯರ್ಥಿಗಳು ಬಳಸುವ ವಾಹನಗಳ ಕುರಿತು ಮಾರ್ಗಸೂಚಿಗಳನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಚುನಾವಣಾ ಉದ್ದೇಶಕ್ಕಾಗಿ ಮತದಾನ ದಿನದಂದು ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸಂಚರಿಸಲು ಅಭ್ಯರ್ಥಿ ಮತ್ತು ಅವರ ಏಜಂಟ್‍ಗೆ ತಲಾ ಒಂದು ವಾಹನ ಮತ್ತು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ವಾಹನ ಅಂದರೆ ಒಬ್ಬ ಅಭ್ಯರ್ಥಿಯ ಪರವಾಗಿ ಒಟ್ಟು 10 ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ.












Click it and Unblock the Notifications