ಹಿಂದೂ ಯುವತಿಯರ ಮೇಲೆ ದೌರ್ಜನ್ಯ: ಉಗ್ರ ಕ್ರಮಕ್ಕೆ ವಿ.ಸುನೀಲ್ ಕುಮಾರ್ ಒತ್ತಾಯ
ಬೆಂಗಳೂರು, ಆಗಸ್ಟ್ 24: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ಗೆಳಯನಂತಿದ್ದ ಅಲ್ತಾಫ್ ಎನ್ನುವಾತ ಯುವತಿಯೋರ್ವಳನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ರಂಗನಪಲ್ಕೆ ಬಳಿ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿ ಅಲ್ತಾಫ್ ಎನ್ನುವಾತನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಬಗ್ಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಯುವತಿಯರ ಮೇಲಿನ ದೌರ್ಜನ್ಯ ಸಂಬಂಧ ರಾಜ್ಯ ಸರಕಾರ ಮತ್ತು ಸಂಬಂಧಿತ ಜಿಲ್ಲಾಡಳಿತ ಉಗ್ರ ಕ್ರಮ ತೆಗೆದುಕೊಳ್ಳಬೇಕು. ಇಂತಹ ಗ್ಯಾಂಗ್‌ಗಳನ್ನು ಪತ್ತೆ ಹಚ್ಚಿ ಎಲ್ಲ ಆರೋಪಿಗಳ ವಿರುದ್ಧ ತೀವ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಯುವತಿಗೆ ಧೈರ್ಯ ತುಂಬುವ ಕಾರ್ಯವನ್ನು ಜಿಲ್ಲಾಡಳಿತ ಮಾಡಬೇಕು. ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರಕಾರ ಭರಿಸಬೇಕು. ಇಂಥ ಘಟನೆಗಳು ಆಗದಂತೆ ಸಾಧ್ಯವಿರುವ ಎಲ್ಲ ಎಚ್ಚರಿಕೆ ಕ್ರಮಗಳನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳಬೇಕು. ಹಿಂದೂ ಯುವತಿಯರ ಮೇಲೆ ದೌರ್ಜನ್ಯ, ಅತ್ಯಾಚಾರ ಘಟನೆಗಳು ನಡೆಯುತ್ತಿದ್ದು ಇದೊಂದು ಪೂರ್ವಯೋಜಿತ ಕೃತ್ಯ ಎಂದು ಕಳವಳ ವ್ಯಕ್ತಪಡಿಸಿದರು. ಇಂಥ ಘಟನೆಗಳು ಪುನರಾವರ್ತನೆ ಆಗುತ್ತಿರುವುದು ಆತಂಕಕಾರಿ ಎಂದರು.
ಅಮಲು ಪದಾರ್ಥ ಖರೀದಿಸಿ ಯುವತಿಗೆ ನೀಡಿ ಅಪಹರಿಸಿ ದುಷ್ಕೃತ್ಯ ನಡೆಸಿದ್ದಾರೆ. ಇದು ಒಬ್ಬಿಬ್ಬರ ಕೃತ್ಯದಂತಿಲ್ಲ. ಇದೆಲ್ಲ ಪೂರ್ವಯೋಜಿತ. ಹಿಂದೆ ಲವ್ ಜಿಹಾದ್ ಶಬ್ದ ಬಳಸಿ ಜಾಗೃತಿ ಮಾಡುತ್ತಿದ್ದು, ಈ ಘಟನೆ ಅದಕ್ಕೆ ಥಳಕು ಹಾಕುವಂತಿದೆ ಹಿಂದೂ ಯುವತಿಯರನ್ನೇ ಗುರಿಯಾಗಿ ಮಾಡಿಕೊಂಡ ಇಂಥಹ ದುಷ್ಕೃತ್ಯಗಳ ಬಗ್ಗೆ ಒಂದು ದೊಡ್ಡ ಜನಜಾಗೃತಿ ಆಂದೋಲನವನ್ನು ಮಾಡಲು ಯೋಜಿಸಿದ್ದೇವೆ ಎಂದು ಹೇಳಿದರು.

ಯುವತಿಯರು ಆಸೆ, ಆಮಿಷಕ್ಕೆ ಬಲಿಯಾಗಿ ಪದೇಪದೇ ದುರಂತ ನಡೆಯುತ್ತಿದೆ. ಇದು ನಮ್ಮ ಸಮಾಜಕ್ಕೆ ಆತಂಕಕಾರಿ ಎಂದು ನುಡಿದರು. ಲವ್ ಜಿಹಾದ್ ವಿಚಾರದಲ್ಲಿ ದೊಡ್ಡ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ತನ್ನ ತಪ್ಪನ್ನು ಮುಚ್ಚಿ ಹಾಕಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಬಳಿಕ ನಡೆದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರವು ತನ್ನ ತಪ್ಪನ್ನು ಮುಚ್ಚಿ ಹಾಕಲು ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುತ್ತಿದೆ. ಆರೋಪಗಳಿಂದ ನುಣುಚಿಕೊಳ್ಳಲು ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದೆ. ರಾಜ್ಯದ ಯಾವುದಾದರೂ ಮಸೂದೆ ಮಾನ್ಯ ರಾಜ್ಯಪಾಲರಿಂದ ವಾಪಸಾದುದು ಇದೇ ಮೊದಲ ಬಾರಿಯೇ? ಹಿಂದೆ ಯಾವುದೂ ವಾಪಸ್ ಬಂದಿರಲಿಲ್ಲವೇ ಎಂದು ಪ್ರಶ್ನಿಸಿದರು.
ವಿನಾಕಾರಣ ರಾಜ್ಯಪಾಲರನ್ನು ಟೀಕಿಸುವುದು ಸರಿಯಲ್ಲ ಎಂದು ತಿಳಿಸಿದರು. ನಾವು ಸಂವಿಧಾನದ ರಕ್ಷಕರು ಎಂದು ಬಹಳಷ್ಟು ಭಾಷಣ ಮಾಡುತ್ತಾರೆ. ಆದರೆ, ಕಾಂಗ್ರೆಸ್ ನಿರಂತರ ಸಂವಿಧಾನ ವಿರೋಧಿ ಚಟುವಟಿಕೆಗಳನ್ನೇ ಮಾಡುತ್ತ ಬಂದಿದೆ. ದಲಿತರ ಭೂಮಿ ತೆಗೆದುಕೊಂಡು ದಲಿತರಿಗೆ ಅನ್ಯಾಯ ಮಾಡಿದ್ದಾರೆ. ರಾಜ್ಯಪಾಲರನ್ನು ಅವಹೇಳನ ಮಾಡುತ್ತಿದ್ದಾರೆ. ಇವೆಲ್ಲವೂ ಸಂವಿಧಾನ ವಿರೋಧಿ ಲಕ್ಷಣಗಳಲ್ಲವೇ ಎಂದರು.












Click it and Unblock the Notifications