Vijayapura incident: ಮೃತ ದೇಹ ವಿಮಾನದ ಮೂಲಕ ಬಿಹಾರಕ್ಕೆ ರವಾನೆಗೆ ವ್ಯವಸ್ಥೆ, ಪರಿಹಾರ ಘೋಷಣೆ
ವಿಜಯಪುರ, ಡಿಸೆಂಬರ್ 05: ವಿಜಯಪುರ ಜಿಲ್ಲೆಯ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಫುಡ್ಸ್ ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ ಸಂಭವಿಸಿರುವ ದುರಂತದಲ್ಲಿ ಏಳು ಮಂದಿ ಮೃತರಾಗಿದ್ದಾರೆ. ಅನೇಕ ಕಾರ್ಮಿಕರು ಗಾಯಗೊಂಡಿದ್ದಾರೆ. ಇದೀಗ ಅವರ ಕುಟುಂಬಸ್ಥರ ನೆರವಿಗೆ ಸರ್ಕಾರ ಧಾವಿಸಿದೆ.
ಅವಘಡ ಸಂಭವಿಸುತ್ತಿದ್ದಂತೆ ಬೆಳಗಾವಿಯಿಂದ ರಾತ್ರಿ ವಿಜಯಪುರಕ್ಕೆ ಆಗಮಿಸಿದ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು, ರಕ್ಷಣಾ ಕಾರ್ಯಾಚರಣೆ ಮತ್ತು ಚಿಕಿತ್ಸೆ ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆದರು. ಮಧ್ಯರಾತ್ರಿಯವರೆಗೂ ಅವರು ಸ್ಥಳದಲ್ಲೇ ಇದ್ದು ಸೂಕ್ತ ನಿರ್ದೇಶನ ನೀಡಿದರು. ಜೊತೆಗೆ ಪರಿಹಾರದ ಮೊತ್ತವನ್ನು ಘೋಷಿಸಿದರು. ಅಲ್ಲದೇ ಅವರ ಸ್ವಂತ ಊರು ಬಿಹಾರಕ್ಕೆ ಮೃತದೇಹ ಕಳುಹಿಸಿ ಕೊಡಲು ವ್ಯವಸ್ಥೆ ಮಾಡಲಾಗಿದೆ.

ದುರಂತದಲ್ಲಿ ಮೃತಪಟ್ಟ ಕಾರ್ಮಿಕರಿಗೂ ತಲಾ 7 ಲಕ್ಷ ರೂ. ಪರಿಹಾರ ಕೊಡಲಾಗುವುದು. ಜೊತೆಗೆ ಗಾಯಾಳುಗಳಿಗೆ ಚಿಕಿತ್ಸೆಗೆಂದು ತಲಾ 50 ಸಾವಿರ ರೂ. ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಘೋಷಿಸಿದರು.
ಇಂದು ಆಸ್ಪತ್ರೆಗೆ ಭೇಟಿ
ಕಿಶೋರ್ ಜೈನ್ ಅವರ ಒಡೆತನದ ಈ ಉದ್ಯಮ ಘಟಕದಲ್ಲಿ ಮಿತಿ ಮೀರಿ ತುಂಬಿದ್ದ ಟ್ಯಾಂಕರುಗಳ ಪಿಲ್ಲರ್ ಗಳು ಸೋಮವಾರ ಕುಸಿದು, ಅದರಡಿ ಕಾರ್ಮಿಕರು ಸಿಕ್ಕಿ ಹಾಕಿಕೊಂಡು ಮೃತಪಟ್ಟಿದ್ದಾರೆ. ಇಂದು ಮಂಗಳವಾರ ಬೆಳಗ್ಗೆ ಸಹ ಕಾರ್ಯಾಚರಣೆ ನಡೆದಿದೆ.
ಮಂಗಳವಾರ ಮಧ್ಯಾಹ್ನ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ಗಾಯಾಳುಗಳ ಆರೋಗ್ಯ ಸ್ಥಿತಿಗತಿಯನ್ನು ವಿಚಾರಿಸಿದರು. ಜತೆಗೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.

ವಿಮಾನದ ಮೂಲಕ ಬಿಹಾರಕ್ಕೆ ಮೃತರ ಶವ ರವಾನೆ
ಮೃತ ಕಾರ್ಮಿಕರೆಲ್ಲರೂ ಬಿಹಾರದವರು. ಇವರ ಪಾರ್ಥಿವ ಶರೀರಗಳನ್ನು ಬೆಳಗಾವಿ ಅಥವಾ ಕಲಬುರಗಿ ವಿಮಾನ ನಿಲ್ದಾಣದ ಮೂಲಕ ಪಾಟ್ನಾಗೆ ಕಳಿಸಿ ಕೊಡಲಾಗುವುದು. ಬಳಿಕ, ಮೃತ ಕಾರ್ಮಿಕರ ಊರುಗಳಲ್ಲಿರುವ ಕುಟುಂಬಗಳಿಗೆ ಶವಗಳನ್ನು ತಲುಪಿಸಲು ಸಂಬಂಧಿಸಿದ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ವ್ಯವಸ್ಥೆ ಮಾಡಲಾಗಿದೆ ಎಂದರು.
ಮೃತರ ಕುಟುಂಬಗಳಿಗೆ ಕೈಗಾರಿಕೆಯ ಮಾಲೀಕರ ವತಿಯಿಂದ ತಲಾ 5 ಲಕ್ಷ ರೂ. ಮತ್ತು ಸರಕಾರದ ಕಡೆಯಿಂದ ತಲಾ 2 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಈ ದುರಂತ ಸಂಭವಿಸಿರುವುದು ನಿಜಕ್ಕೂ ನೋವಿನ ವಿಷಯವಾಗಿದೆ. ಜೊತೆಗೆ, ರಾಜ್ಯದಲ್ಲಿನ ಕೈಗಾರಿಕೆಗಳಲ್ಲಿ ಯಾವುದೇ ಅನಾಹುತಕ್ಕೆ ಆಸ್ಪದ ಇರದಂತೆ ನೋಡಿಕೊಳ್ಳಲು ಹೆಚ್ಚಿನ ಸುರಕ್ಷಾ ಕ್ರಮಗಳಿಗೆ ಆದ್ಯತೆ ಕೊಡಲಾಗುವುದು.
ಈ ಘಟನೆಗೆ ಕಾರಣರಾದ ತಪ್ಪಿತಸ್ಥರನ್ನು ಪತ್ತೆ ಹಚ್ಚಿ, ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಈ ಸಂಬಂಧ ಈಗಾಗಲೇ ಎಫ್ಐಆರ್ ದಾಖಲಾಗಿದೆ ಎಂದು ಅವರು ವಿವರಿಸಿದರು. ಮೃತರೆಲ್ಲರೂ ಬಡ ಕುಟುಂಬಗಳಿಗೆ ಸೇರಿದವರು. ವಿಪತ್ತು ಪರಿಹಾರ ಕಾರ್ಯಾಚರಣೆ ತಂಡಗಳು ಮೃತ ದೇಹಗಳನ್ನು ಹೊರತೆಗೆದಿದ್ದು, ಹೆಚ್ಚಿನ ಶೋಧ ಮುಂದುವರಿದಿದೆ. ಈ ದುರಂತ ಸಂಭವಿಸಬಾರದಿತ್ತು ಎಂದು ಅವರು ವಿಷಾಧ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಪಾಲನ್, ಜಿಲ್ಲಾ ಪೊಲೀಸ್ ವರಿಷ್ಠ ಹೃಷಿಕೇಶ ಸೋನಾವಣೆ, ಜಿಪಂ ಸಿಇಒ ರಾಹುಲ್ ಶಿಂದೆ, ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಡಿವೈಎಸ್ಸಿ ಬಸವರಾಜ ಯಲಿಗಾರ ಮುಂತಾದವರು ಇದ್ದರು.












Click it and Unblock the Notifications