Industry: ಕರ್ನಾಟಕದ ಈ ಜಿಲ್ಲೆಗೆ 2 ಪ್ರಮುಖ ಯೋಜನೆಗಳು, ಭಾರೀ ಬಂಡವಾಳ ಹರಿವು
ಬೆಂಗಳೂರು, ಫೆಬ್ರುವರಿ 13: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ (Invest Karnataka 2025) ದೊಡ್ಡ ಪ್ರಮಾಣದಲ್ಲಿ ಬಂಡವಾಳ ಆಕರ್ಷಿಸುವಲ್ಲಿ ಕೈಗಾರಿಕೆ ಸಚಿವರ ತವರು ಜಿಲ್ಲೆ ಯಶಸ್ವಿಯಾಗಿದೆ. ನವೀಕರಿಸಬಹುದಾದ ಇಂಧನ ಹಾಗೂ ಕೃಷಿ ಉತ್ಪನ್ನಗಳ ಸಂಸ್ಕರಣೆ ವಲಯದಲ್ಲಿನ ಎರಡು ಪ್ರಮುಖ ಯೋಜನೆಗಳು ಎಂಬಿ ಪಾಟೀಲ್ ಅವರು ತವರು ಜಿಲ್ಲೆ ಯಲ್ಲಿ ಅನುಷ್ಠಾನಕ್ಕೆ ಬರಲಿವೆ.
ಗೌದು, ಇನ್ವೆಸ್ಟ್ ಕರ್ನಾಟಕ 2025 ನಲ್ಲಿ ಅತ್ಯಧಿಕ ಬಂಡವಾಳ ಸೆಳೆಯುವಲ್ಲಿ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರ ವಿಜಯಪುರ ಜಿಲ್ಲೆಯು ಯಶಸ್ವಿಯಾಗಿದೆ. ʼನವೀಕರಿಸಬಹುದಾದ ಇಂಧನ ಹಾಗೂ ಕೃಷಿ ಉತ್ಪನ್ನಗಳ ಸಂಸ್ಕರಣೆ ವಲಯದಲ್ಲಿನ ಎರಡು ಪ್ರಮುಖ ಯೋಜನೆಗಳು ವಿಜಯಪುರ ಜಿಲ್ಲೆಯಲ್ಲಿ ಕಾರ್ಯಗತಗೊಳ್ಳಲಿವೆ. ಇದರಿಂದ ಈ ಪ್ರದೇಶದಲ್ಲಿ ಆರ್ಥಿಕ ಪ್ರಗತಿಗೆ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ., ಗಮನಾರ್ಹ ಪ್ರಮಾಣದಲ್ಲಿ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಸಚಿವರು ವಿವರಿಸಿದರು.

ವಿಜಯಪುರದಲ್ಲಿ 3000 ಮೆಗಾವಾಟ್ ಸಾಮರ್ಥ್ಯದ ಗಾಳಿ ವಿದ್ಯುತ್ ಉತ್ಪಾದನೆ ಅಭಿವೃದ್ಧಿಪಡಿಸಲು ಮತ್ತು ಅತ್ಯಾಧುನಿಕ ವಿಂಡ್ ಟರ್ಬೈನ್ ಬ್ಲೇಡ್ ತಯಾರಿಕಾ ಘಟಕ ಸ್ಥಾಪಿಸಲು ಸುಜ್ಲಾನ್ ಕಂಪನಿಯು ರಾಜ್ಯ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದೆ.
ಈ ಉಪಕ್ರಮವು, ಗಾಳಿ ವಿದ್ಯುತ್ ಉತ್ಪಾದನೆಯ ಜಾಗತಿಕ ಕೇಂದ್ರವಾಗಿ ಭಾರತವನ್ನು ಅಭಿವೃದ್ಧಿಪಡಿಸಲು, ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಮತ್ತು ಸುಸ್ಥಿರತೆ ಸಾಧಿಸಲು ನೆರವಾಗಲಿದೆ ಎಂದರು.
ಅತೀ ದೊಡ್ಡ ಬೇಳೆಕಾಳು ಸಂಸ್ಕರಣಾ ಘಟಕ
ವಿಜಯಪುರ ಅಥವಾ ಕಲಬುರಗಿಯಲ್ಲಿ ಪ್ರತಿ ದಿನ 800 ಟನ್ ಸಾಮರ್ಥ್ಯದ ಬಹುಬಗೆಯ ಬೇಳೆಕಾಳು ಸಂಸ್ಕರಣಾ ಘಟಕ ಸ್ಥಾಪಿಸಲು ವಿಂಗ್ಸ್- ವಿಟೆರಾ ಕಂಪನಿಯು ₹250 ಕೋಟಿ ಬಂಡವಾಳ ತೊಡಗಿಸಲಿದೆ. ಈ ಘಟಕವು ಕಾರ್ಯಾರಂಭ ಮಾಡಿದ 2ನೇ ವರ್ಷದಿಂದ ₹ 800 ಕೋಟಿ ವಾರ್ಷಿಕ ವಹಿವಾಟು ನಡೆಸಲಿದೆ. ದಕ್ಷಿಣ ಭಾರತದಲ್ಲಿನ ಬೇಳೆ ಕಾಳುಗಳ ಅತಿದೊಡ್ಡ ಸಂಸ್ಕರಣಾ ಘಟಕ ಇದಾಗಿರಲಿದೆ.
ಈ ಉದ್ದೇಶಿತ ಘಟಕವು ಸ್ಥಳೀಯ ಉದ್ಯೋಗ ಅವಕಾಶ ಹೆಚ್ಚಳ, ಮಹಿಳೆಯರ ಸಬಲೀಕರಣ ಮತ್ತು ಗ್ರಾಮೀಣ ಆರ್ಥಿಕ ಪ್ರಗತಿಗೆ ಗಣನೀಯ ಕೊಡುಗೆ ನೀಡಲಿದೆ. ಕಂಪನಿಯು ಪ್ರತ್ಯೇಕ ಸಂಗ್ರಹಣಾ ಕೇಂದ್ರ ತೆರೆಯಲಿರುವುದರಿಂದ ಬೆಳೆಗಾರರಿಗೆ ಉತ್ಪನ್ನಗಳ ಮಾರಾಟ ಸುಗಮಗೊಳಿಸಿ ಹೆಚ್ಚಿನ ಆದಾಯ ಪಡೆಯಲು ನೆರವಾಗಲಿದೆ.
ಇದರಿಂದ ಆಯ್ದ ಬೆಳೆಗಳ ಸಾಗುವಳಿ ಹೆಚ್ಚಿಸಲು ರೈತರಿಗೆ ಉತ್ತೇಜನ ದೊರೆಯಲಿದೆ. ಬೇಳೆ ಕಾಳುಗಳ ಆಮದು ಮೇಲಿನ ದೇಶದ ಅವಲಂಬನೆ ತಪ್ಪಿಸಲಿದೆ. ಕೃಷಿ ಸ್ವಾವಲಂಬನೆಗೆ ಉತ್ತೇಜನ ಸಿಗಲಿದೆ ಎಂದು ಅವರು ಹೇಳಿದರು.
ಕಾರ್ಮಿಕರ ಕುಶಲತೆ ಹೆಚ್ಚಿಸಲು ಮತ್ತು ಉದ್ಯೋಗ ಅವಕಾಶ ಹೆಚ್ಚಿಸುವ ತನ್ನ ಬದ್ಧತೆಯ ಭಾಗವಾಗಿ ಸುಜ್ಲಾನ್, ಶೇಕಡಾ 90ರಷ್ಟು ಉದ್ಯೋಗಿಗಳಲ್ಲಿ ಐಟಿಐ ಪದವೀಧರರನ್ನು ನೇಮಿಸಿಕೊಳ್ಳಲಿದೆ. ವೃತ್ತಿ ಪರಿಣತಿ ಹೆಚ್ಚಿಸಲು ರಾಜ್ಯದ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಪರಿಣತಿ ಅಭಿವೃದ್ಧಿಪಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.
ಈ ಹೂಡಿಕೆ ಉಪಕ್ರಮಗಳ ಫಲವಾಗಿ ವಿಜಯಪುರ ಜಿಲ್ಲೆಯು ರಾಜ್ಯದ ಕೈಗಾರಿಕಾ ಹಾಗೂ ಕೃಷಿ ಪ್ರಗತಿಯನ್ನು ಮುನ್ನಡೆಸಲಿದೆ. ಪ್ರಾದೇಶಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ರಾಜ್ಯದ ಬದ್ಧತೆಯನ್ನೂ ಈ ಒಪ್ಪಂದಗಳು ಪುನರುಚ್ಚರಿಸಿವೆ.
ಸಣ್ಣ ನಗರಗಳಲ್ಲಿ ಸ್ಟಾರ್ಟಪ್ ವಿಸ್ತರಣೆಗೆ ಕ್ರಮ: ಎಲ್‌ಕೆಎ
ಸಣ್ಣ ಪಟ್ಟಣಗಳು ಹಾಗೂ 2 ಮತ್ತು 3ನೇ ಸ್ತರದ ನಗರಗಳಲ್ಲಿ ಉದ್ಯಮ ಕಾರ್ಯಪರಿಸರ ಅಭಿವೃದ್ಧಿಪಡಿಸಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದು ಮುಖ್ಯಮಂತ್ರಿಯವರ ಹೆಚ್ಚುವರಿ ಕಾರ್ಯದರ್ಶಿ ಎಲ್.ಕೆ. ಅತೀಕ್ ಬುಧವಾರ ಹೇಳಿದರು.
ಜಾಗತಿಕ ಹೂಡಿಕೆದಾರರ ಸಮಾವೇಶ (ಜಿಮ್-25)ದಲ್ಲಿ 'ನಗರದ ಆಚೆಗೆ' (ಬಿಯಾಂಡ್ ಅರ್ಬನ್) ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಣ್ಣ ನಗರಗಳಲ್ಲಿ ಕೈಗಾರಿಕೆ ಆಧಾರಿತ ಕೌಶಲ್ಯಾಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.
ಮೈಸೂರು, ಮಂಗಳೂರು, ಕಲ್ಬುರ್ಗಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಹಲವು ನಗರಗಳಲ್ಲಿ ನವೋದ್ಯಮಗಳಿಗೆ ಪೂರಕ ವಾತಾವರಣ ಸೃಷ್ಟಿಸಲಾಗುತ್ತಿದೆ. ಕೃತಕ ಬುದ್ಧಿಮತ್ತೆ, ಡಾಟಾ ಸೈನ್ಸ್ ತಂತ್ರಜ್ಞಾನಕ್ಕೆ ಉತ್ತೇಜನ ನೀಡಲಾಗುತ್ತಿದ್ದು, ಪರಿಪೋಷಕ (ಇನ್ ಕ್ಯುಬೇಷನ್) ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.












Click it and Unblock the Notifications