Vijayapura Airport: ಏರ್‌ಪೋರ್ಟ್ ಕಾರ್ಯಾಚರಣೆ ಅಪ್ಡೇಟ್: ಜಿಲ್ಲೆಗೆ ಸಿಕ್ಕ ವಿವಿಧ ಕೊಡುಗೆಗಳ ಪಟ್ಟಿ ಇಲ್ಲಿದೆ
ಬೆಂಗಳೂರು, ಫೆಬ್ರವರಿ 16: ಕಾಂಗ್ರೆಸ್ ಸರ್ಕಾರದ ಸಂಪುಟ ಸದಸ್ಯರು, ಸಿದ್ದರಾಮಯ್ಯನವರ ಆಪ್ತರಲ್ಲಿ ಗುರುತಿಸಿಕೊಂಡ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಪ್ರತಿನಿಧಿಸುವ ವಿಜಯಪುರ ಕ್ಷೇತ್ರದಲ್ಲಿ ಬಜೆಟ್‌ನಲ್ಲಿ ಹಲವು ಕೊಡುಗೆಗಳು ಸಿಕ್ಕಿವೆ. ಇದಕ್ಕೆ ಸಚಿವರು ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಇನ್ನು ನೂತನವಾಗಿ ನಿರ್ಮಾಣವಾಗುತ್ತಿರುವ ವಿಜಯಪುರ ವಿಮಾನ ನಿಲ್ದಾಣದ (Vijayapura Airport) ಕಾರ್ಯಾಚರಣೆ ಬಗ್ಗೆಯು ಅಪ್ಡೇಟ್ ಸಿಕ್ಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ವರ್ಷ 2024-25ರ ಬಜೆಟ್‌ನಲ್ಲಿ ತಮ್ಮ ತವರು ಜಿಲ್ಲೆ ವಿಜಯಪುರದಲ್ಲಿ ಹಲವಾರು ಹೊಸ ಯೋಜನೆಗಳನ್ನು ಜಾರಿಗೊಳಿಸಲು ಕ್ರಮಕೈಗೊಂಡಿದ್ದಾರೆ.

ವಿಜಯಪುರದಲ್ಲಿ ಹೊಸ ಜಿಲ್ಲಾ ಕಚೇರಿ ಸಂಕೀರ್ಣ ನಿರ್ಮಾಣವಾಗಲಿದೆ. ₹350 ಕೋಟಿ ವೆಚ್ಚದ ವಿಜಯಪುರ ವಿಮಾನ ನಿಲ್ದಾಣ (Vijayapura Airport) ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಶೀಘ್ರದಲ್ಲೇ ಉದ್ಘಾಟನೆಗೊಂಡು, ವಿಮಾನಗಳು ಕಾರ್ಯಾರಂಭ ಆರಂಭಿಸಲಿವೆ ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಎಂಬಿ ಪಾಟೀಲ್ ತಿಳಿಸಿದರು.
ತೋಟಗಾರಿಕೆ ವಿಜ್ಞಾನ ಕಾಲೇಜು ಸ್ಥಾಪನೆ
ಇನ್ನೂ ಜಿಲ್ಲೆಗೆ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತು ಉತ್ತೇಜಿಸಲು ಜಿಲ್ಲೆಯ ಇಟ್ಟಂಗಿಹಾಳದಲ್ಲಿ ಫುಡ್ ಪಾರ್ಕ್, ಆಲಮೇಲದಲ್ಲಿ ತೋಟಗಾರಿಕೆ ವಿಜ್ಞಾನ ಕಾಲೇಜು ಸ್ಥಾಪಿಸಲಾಗುವುದು.
ಇದು ಈ ಪ್ರದೇಶದಲ್ಲಿ ತೋಟಗಾರಿಕೆ ಬೆಳವಣಿಗೆಯನ್ನು ಮತ್ತಷ್ಟು ಉತ್ತೇಜಿಸಲಿದೆ. ಆಲಮಟ್ಟಿಯಲ್ಲಿ ಒಳನಾಡು ಮೀನುಗಾರಿಕೆ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸಲು ಬಜೆಟ್‌ನಲ್ಲಿ ಉದ್ದೇಶಿಸಲಾಗಿದೆ. ಇದಕ್ಕಾಗಿ ಸಚಿವ ಪಾಟೀಲ ಅವರು ಸಿದ್ದರಾಮಯ್ಯ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಈ ವರ್ಷವೇ ವಿಜ್ಞಾನ ಕೇಂದ್ರ ಕಾರ್ಯಾರಂಭ
ಕೃಷಿ ಭಾಗ್ಯ ಜಲ ನಿಗಮದಡಿ ಜಿಲ್ಲೆಯ ಮುಳವಾಡ ಯೋಜನೆಯಡಿ ನೀರಾವರಿ ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ.
ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಈ ವರ್ಷ ಜಿಲ್ಲೆಯಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್‌ಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಚಟುವಟಿಕೆ ಆಧಾರಿತ ಕಲಿಕೆಯ ವಾತಾವರಣ ಒದಗಿಸಲು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಪ್ರಗತಿಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿಜಯಪುರದಲ್ಲಿ ಈ ವರ್ಷ ವಿಜ್ಞಾನ ಕೇಂದ್ರ ಕಾರ್ಯಾರಂಭ ಮಾಡಲಿದೆ. ಸೈಕ್ಲಿಂಗ್ ಅಕಾಡೆಮಿ ವಿಜಯಪುರಕ್ಕೆ ಕ್ರೀಡಾ ಅನುದಾನದಲ್ಲಿ ಹೆಚ್ಚಿನ ಮೊತ್ತ ನಿಗದಿಪಡಿಸಲಾಗಿದೆ.
ಜಿಲ್ಲೆಯಲ್ಲಿ 'ಕರೇಜ್' ಎಂದು ಜನಪ್ರಿಯವಾಗಿರುವ ಪ್ರಾಚೀನ ನೀರು ಸರಬರಾಜು ವ್ಯವಸ್ಥೆಯನ್ನು ಪುನಶ್ಚೇತನಗೊಳಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿರುವ ಬಗ್ಗೆ ಸಚಿವರು ಮಾಹಿತಿ ನೀಡಿದ್ದಾರೆ.












Click it and Unblock the Notifications