ಕಾಂಗ್ರೆಸ್‌ನಲ್ಲಿ ಪವರ್ ಶೇರಿಂಗ್; ಸರ್ಕಾರಕ್ಕೆ ಅಭದ್ರತೆ ಕಾಡುವುದು ನಿಶ್ಚಿತ: ವೀರಪ್ಪ ಮೊಯ್ಲಿ
ಹುಬ್ಬಳ್ಳಿ, ಮಾರ್ಚ್ 22: ಕಾಂಗ್ರೆಸ್ ಪಕ್ಷದಲ್ಲಿ ಪವರ್ ಶೇರಿಂಗ್ ವಿಚಾರ ಚರ್ಚೆಗಳಾಗಬಾರದು. ಇಂತಹ ಚರ್ಚೆಗಳಿಂದ ಸರ್ಕಾರಕ್ಕೆ ಅಭದ್ರತೆ ಕಾಡುವುದು ನಿಶ್ಚಿತ. ವಿರೋಧ ಪಕ್ಷದವರು ಅದನ್ನೇ ಅಸ್ತ್ರವನ್ನಾಗಿ ಬಳಕೆ ಮಾಡುತ್ತಾರೆ. ವಿರೋಧ ಪಕ್ಷದವರಿಗೆ ಅಸ್ತ್ರವನ್ನಾಗಿ ಮಾಡಿಕೊಳ್ಳುವ ಪರಿಸ್ಥಿತಿ ತಂದುಕೊಳ್ಳುವುದು ಸರಿಯಲ್ಲ. ಅಧಿಕಾರ ಹಂಚಿಕೆ ಈ ಮೊದಲೇ ನಿರ್ಣಯವಾಗಿದೆಯೋ ಗೊತ್ತಿಲ್ಲ. ಆ ಬಗ್ಗೆ ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತೆ. ಆದರೆ, ಪಕ್ಷದಲ್ಲಿ ಈ ಆಂತರಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸುವುದು ಸೂಕ್ತವಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಹೇಳಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಕ್ಷೇತ್ರಗಳ ಮರು ವಿಂಗಡಣೆಯಲ್ಲಿ ಜನಸಂಖ್ಯೆಯನ್ನು ಪ್ರಮುಖ ಮಾನದಂಡವನ್ನಾಗಿ ಪರಿಗಣಿಸಬಾರದು. ಭೌಗೋಳಿಕ ಅಂಶಗಳನ್ನು ಪರಿಗಣಿಸದಿದ್ದರೆ ದೇಶದ ಸಮಗ್ರತೆಗೆ ಭಂಗ ಬರುವ ಸಾಧ್ಯತೆ ಗಳಿವೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅಭಿಪ್ರಾಯಿಸಿದರು.

ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಜನಸಂಖ್ಯೆ ಯನ್ನು ನಿಯಂತ್ರಣ ಕ್ಕೆ ತರುವಲ್ಲಿ ಯಶಸ್ವಿಯಾಗಿವೆ. ಲೋಕಸಭೆ ಕ್ಷೇತ್ರ ಮರು ವಿಗಂಡಣೆಯಲ್ಲಿ ಜನಸಂಖ್ಯೆಯನ್ನು ಮಾನದಂಡವಾಗಿ ಪರಿಗಣಿಸಿದರೆ ಈ ರಾಜ್ಯಗಳಿಗೆ ಅನ್ಯಾಯವಾಗಲಿದೆ. ಮೇಲಾಗಿ ರಾಷ್ಟ್ರದ ಹಿತದೃಷ್ಟಿಯಿಂದ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತಂದಿದ್ದಕ್ಕೆ ಶಿಕ್ಷೆ ಕೊಟ್ಟಂತೆ ಆಗಲಿದೆ ಎಂದರು.
ಲೋಕಸಭೆ ಕ್ಷೇತ್ರ ಮರು ವಿಂಗಡಣೆಯಲ್ಲಿ ಜನಸಂಖ್ಯೆ ಮಾನದಂಡ ಆಗಬಾರದು. ಜನಸಂಖ್ಯೆಯನ್ನು ಮಾನದಂಡವನ್ನಾಗಿ ಪರಿಗಣಿಸಿದರೆ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ರಾಜ್ಯಗಳಿಗೆ ಲಾಭವಾಗಲಿದೆ ಎಂದರು.
ರಾಜ್ಯದಲ್ಲಿ ಹನಿಟ್ರ್ಯಾಪ್ ನಂತಹ ವಿಚಾರ ಹೊಸದೇನಲ್ಲ. ವಿರೋಧ ಪಕ್ಷದವರು ಇಂತಹ ವಿಷಯಗಳನ್ನ ಹುಡುಕುತ್ತಲೇ ಇರುತ್ತಾರೆ. ಅವರ ಪ್ರಚೋದನೆಗೆ ಯಾರೂ ಒಳಗಾಗಾಗಬಾರದು. ಈ ವಿಚಾರದಲ್ಲಿ ಸದನದಲ್ಲಿ ವಿರೋಧ ಪಕ್ಷದವರು ಸಭ್ಯತೆಯನ್ನು ಮೀರಿದ್ದರಿಂದ ಅವರನ್ನು ಅಮಾನತ್ತು ಮಾಡಲಾಗಿದೆ ಎಂದರು.
ಸಂಸತ್ ಕ್ಷೇತ್ರಗಳು ಕಡಿಮೆಯಾಗಲು ಬಿಡುವುದಿಲ್ಲ: ಡಿಕೆಶಿ
ನಾವು ನಮ್ಮ ಹಕ್ಕು, ಅಸ್ತಿತ್ವಕ್ಕೆ ಹೋರಾಡಲು, ಸಂವಿಧಾನ ಉಳಿವಿಗಾಗಿ ನಾವು ಒಟ್ಟಾಗಿದ್ದೇವೆ. ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ನಮ್ಮ ಸಂಸತ್ ಸ್ಥಾನಗಳು ಕಡಿಮೆಯಾಗಲು ನಾವು ಬಿಡುವುದಿಲ್ಲ. ದಕ್ಷಿಣದ ರಾಜ್ಯಗಳು ದೇಶದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡುತ್ತಿವೆ. ಶೈಕ್ಷಣಿಕ ಗುಣಮಟ್ಟದಲ್ಲಿ, ಆರ್ಥಿಕ ಬೆಳವಣಿಗೆ ಸೇರಿದಂತೆ ಅನೇಕ ವಿಷಯಗಳಲ್ಲಿ ಸಾಕಷ್ಟು ಮುಂದಿದ್ದೇವೆ, ತೆರಿಗೆ ಪಾವತಿಯಲ್ಲಿ ಮುಂಚೂಣಿಯಲ್ಲಿದ್ದೇವೆ ಎಂದು ಹೇಳಿದರು.
ಜೊತೆಗೂಡುವುದು ಆರಂಭ, ಜೊತೆಗೂಡಿ ಆಲೋಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಪ್ರಗತಿ ಎನ್ನುವ ಮಾತಿನ ಮೇಲೆ ನಂಬಿಕೆಯನ್ನು ಇಟ್ಟಿರುವವರು ನಾವು. ಸ್ಟಾಲಿನ್ ಅವರ ನಾಯಕತ್ವದಲ್ಲಿ ದಕ್ಷಿಣ ಭಾರತ ರಾಜ್ಯಗಳು ಹಾಗೂ ಪಂಜಾಬ್ ರಾಜ್ಯ ಭಾಗವಹಿಸುತ್ತಿದ್ದು ಯಾವುದೇ ಕಾರಣಕ್ಕೂ ನಮ್ಮ ಹಕ್ಕುಗಳನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಮಾಜಿ ಪ್ರಧಾನಿ ವಾಜಪೇಯ ಅವರು ಇದೇ ರೀತಿ 2002 ರಲ್ಲಿ 84 ನೇ ತಿದ್ದುಪಡಿ ಮೂಲಕ ಸಂವಿಧಾನ ಬದಲಾವಣೆಗೆ ಮುಂದಾಗಿದ್ದರು ಎಂದರು.
ನಾವು ಕ್ಷೇತ್ರ ವಿಂಗಡಣೆ ವಿಚಾರವಾಗಿ ಸೋಲುವುದಿಲ್ಲ, ನಮ್ಮ ಹೋರಾಟ ನಿರಂತರ. ನಮ್ಮ ಸ್ಥಾನಗಳು ಕಡಿಮೆ ಆಗಲು ಬಿಡುವುದಿಲ್ಲ. ನಾವು ನಮ್ಮ ವೈಯಕ್ತಿಕ ಹಕ್ಕುಗಳಿಗೆ ಹೋರಾಡುತ್ತಿಲ್ಲ, ದೇಶಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಇದನ್ನು ಮಾಧ್ಯಮಗಳು ಸಹ ಅರ್ಥ ಮಾಡಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಅಣ್ಣಾಮಲೈ ಗೆ ನಮ್ಮ ಶಕ್ತಿ ಗೊತ್ತಿದೆ
ಸಭೆ ವಿರೋಧಿಸಿ ಬಿಜೆಪಿ ಕಪ್ಪು ಬಾವುಟ ಪ್ರದರ್ಶನದ ಕುರಿತು ಮಾತನಾಡಿ, ಬಿಜೆಪಿಯ ಕಪ್ಪು ಬಾವುಟ ಪ್ರದರ್ಶನಕ್ಕೆ ನಾವು ಹೆದರುವುದಿಲ್ಲ. ಅವರ ನಡೆಯನ್ನು ನಾವು ಸ್ವಾಗತಿಸುತ್ತೇವೆ. ನನ್ನನ್ನು ತಿಹಾರ್ ಜೈಲಿಗೆ ಕಳುಹಿಸಿದಾಗಲೇ ಹೆದರಲಿಲ್ಲ. ಇಲ್ಲಿನ ಬಿಜೆಪಿ ಅಧ್ಯಕ್ಷ (ಅಣ್ಣಾಮಲೈ) ನಮ್ಮ ರಾಜ್ಯದಲ್ಲಿ ಕೆಲಸ ಮಾಡಿದ್ದಾರೆ. ನಮ್ಮ ಶಕ್ತಿ ಅವರಿಗೆ ಗೊತ್ತಿದೆ ಎಂದು ಕಾಲೆಳೆದರು.












Click it and Unblock the Notifications