ಲಕ್ಷ್ಮೀ ಹೆಬ್ಬಾಳ್ಕರ್ ವಜಾಗೊಳಿಸಲು 24 ಗಂಟೆ ಗಡುವು ನೀಡಿದ ವಾಟಾಳ್
ಬೆಂಗಳೂರು, ಆಗಸ್ಟ್ 31: ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನದಿಂದ ಲಕ್ಷ್ಮೀ ಹೆಬ್ಬಾಳ್ಕರ್ ರನ್ನು ವಜಾಗೊಳಿಸಲು ಕಾಂಗ್ರೆಸ್ ಪಕ್ಷಕ್ಕೆ ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್ ಮತ್ತು ಸಾರಾ ಗೋವಿಂದ್ 24 ಗಂಟೆಗಳ ಗಡುವು ನೀಡಿದ್ದಾರೆ.
"ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದರೆ ಎಲ್ಲರಿಗಿಂತ ಮೊದಲು ನಾನು 'ಜೈ ಮಹಾರಾಷ್ಟ್ರ' ಎಂದು ಹೇಳುತ್ತೇನೆ," ಎಂಬುದಾಗಿ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ್ದ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಇದಾದ ಬೆನ್ನಿಗೆ ಕನ್ನಡ ಪರ ಹೋರಾಟಗಾರರು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ವಜಾಗೊಳಿಸಲು ಆಗ್ರಹಿಸಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ಬಹಿರಂಗವಾಗುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿರುವ ಸಾರಾ ಗೋವಿಂದ್, ವಾಟಾಳ್ ನಾಗರಾಜ್ ಸೇರಿದಂತೆ ಹಲವು ಕನ್ನಡ ಪರ ಹೋರಾಟಗಾರರು ಇಂದು ಕೆಪಿಸಿಸಿ ಕಚೇರಿಗೆ ತೆರಳಿ ತಮ್ಮ ಪ್ರತಿಭಟನೆ ದಾಖಲಿಸಿದ್ದಾರೆ.
ಕೆಪಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಭೇಟಿ ಮಾಡಿ, ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ವಜಾಗೊಳಿಸಲು 24 ಗಂಟೆಗಳ ಗಡುವು ನೀಡಿದ್ದಾರೆ.
ಒಂದೊಮ್ಮೆ ಲಕ್ಷ್ಮೀ ಹೆಬ್ಬಾಳ್ಕರ್ ರನ್ನು 24 ಗಂಟೆಯೊಳಗೆ ವಜಾಗೊಳಿಸದಿದ್ದರೆ "'ಕನ್ನಡ ಒಕ್ಕೂಟ'ಗಳ ವತಿಯಿಂದ ರಾಜ್ಯದಾದ್ಯಂತ ಶುಕ್ರವಾರದಿಂದಲೇ ಹೋರಾಟ ನಡೆಸುತ್ತೇವೆ. ಬೆಳಗಾವಿಯಿಂದಲೇ ನಮ್ಮ ಪ್ರತಿಭಟನೆ ಆರಂಭಿಸುತ್ತೇವೆ," ಎಂದು ಸಾರಾ ಗೋವಿಂದ್ ಮತ್ತು ವಾಟಾಳ್ ನಾಗರಾಜ್ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಗೆ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications