ಲೋಕಸಭೆ ಚುನಾವಣೆಗೆ ತುಮಕೂರಿನಿಂದ ವಿ. ಸೋಮಣ್ಣ ಸ್ಪರ್ಧೆ?
ತುಮಕೂರು, ಜೂನ್ 07; ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ 2024ರ ಲೋಕಸಭೆ ಚುನಾವಣೆಯತ್ತ ಗಮನಹರಿಸಿದೆ. ಹಾಲಿ ಸಂಸದರಿಗೆ ಟಿಕೆಟ್ ಸಿಗುವುದಿಲ್ಲ, ಟಿಕೆಟ್ ಇವರ ಕೈತಪ್ಪಲಿದೆ ಎಂಬ ಚರ್ಚೆಗಳು ಆರಂಭವಾಗಿದೆ. 2019ರ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 25ರಲ್ಲಿ ಬಿಜೆಪಿ ಗೆದ್ದು ಬೀಗಿತ್ತು.
ತುಮಕೂರು ಕ್ಷೇತ್ರದ ಬಿಜೆಪಿ ಸಂಸದ, 81 ವರ್ಷದ ಜಿ. ಎಸ್. ಬಸವರಾಜ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆದ್ದರಿಂದ ಅವರು 2024ರ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹಾಗಾದರೆ ತುಮಕೂರಿಗೆ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಸದ್ಯದ ಪ್ರಶ್ನೆ.

ಮಾಜಿ ಸಚಿವ, ಮಾಜಿ ಶಾಸಕ ವಿ. ಸೋಮಣ್ಣ ತುಮಕೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಬಹುದು ಎಂಬುದು ಲೆಕ್ಕಾಚಾರವಾಗಿದೆ. ಸ್ವತಃ ಸಂಸದ ಜಿ. ಎಸ್. ಬಸವರಾಜ ಆಡಿರುವ ಮಾತುಗಳು ಇದಕ್ಕೆ ಪುಷ್ಠಿ ನೀಡುತ್ತಿವೆ. ಈ ಕುರಿತು ಆಡಿಯೋ ವೈರಲ್ ಆಗಿದೆ.
ಎರಡು ಕಡೆ ಸೋತ ಸೋಮಣ್ಣ; ಮಾಜಿ ಸಚಿವ ವಿ. ಸೋಮಣ್ಣ ತುಮಕೂರು ಕ್ಷೇತ್ರದಿಂದ 2024ರ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದು ಜಿ. ಎಸ್. ಬಸವರಾಜ ಹೇಳಿದ್ದಾರೆ ಎನ್ನುವ ಆಡಿಯೋ ವೈರಲ್ ಆಗಿದೆ. ವೀರಶೈವ ಸಮುದಾಯದ ಕಾರ್ಯಕ್ರಮದಲ್ಲಿ ಈ ಮಾತುಗಳನ್ನು ರೆಕಾರ್ಡ್ ಮಾಡಲಾಗಿದೆ.

ಈ ಆಡಿಯೋದಲ್ಲಿ ಜಿ. ಎಸ್. ಬಸವರಾಜ, "ಸಮುದಾಯ ಒಗ್ಗಟ್ಟಾಗಿದ್ದರೆ ಏನು ಬೇಕಾದರೂ ಸಾಧಿಸಬಹುದು. ನನ್ನ ಸೀಟ್ ಅನ್ನು ಮಾಜಿ ಸಚಿವ ವಿ. ಸೋಮಣ್ಣಗೆ ಕೊಡುತ್ತಾರೆ. ನಾನು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ದೆಹಲಿಗೆ ಹೋಗಿದ್ದಾಗ ಹೇಳಿದ್ದೇನೆ" ಎಂದು ತಿಳಿಸಿದ್ದಾರೆ.
ವಿ. ಸೋಮಣ್ಣ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ. ಆದರೆ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಎರಡು ಕಡೆ ಕಣಕ್ಕಿಳಿದು ಸೋಲು ಕಂಡಿದ್ದಾರೆ. ಸದ್ಯ ಅವರು ಯಾವುದೇ ಹುದ್ದೆಯಲ್ಲಿ ಇಲ್ಲ. ಅವರಿಗೆ ಲೋಕಸಭೆ ಚುನಾವಣೆ ಟಿಕೆಟ್ ನೀಡುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.
2018ರ ಚುನಾವಣೆಯಲ್ಲಿ ವಿ. ಸೋಮಣ್ಣ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿದ್ದರು. ಬಳಿಕ ಬಿಜೆಪಿ ಸರ್ಕಾರ ಬಂದ ಮೇಲೆ ಬಿ. ಎಸ್. ಯಡಿಯೂರಪ್ಪ, ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಯೂ ವಸತಿ ಸಚಿವರಾಗಿ ಮುಂದುವರೆದಿದ್ದರು.
2023ರ ಚುನಾವಣೆಯಲ್ಲಿ ಹೈಕಮಾಂಡ್ ಸೂಚನೆಯಂತೆ ಗೋವಿಂದರಾಜನಗರ ಬಿಟ್ಟು ಮೈಸೂರಿನ ವರುಣದಲ್ಲಿ ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಅಭ್ಯರ್ಥಿಯಾದರು. 73653 ಮತಗಳನ್ನು ಪಡೆದು, 119816 ಮತಗಳನ್ನು ಪಡೆದ ಸಿದ್ದರಾಮಯ್ಯ ವಿರುದ್ಧ ಸೋಲು ಕಂಡರು.
ಹೈಕಮಾಂಡ್ ವರುಣ ಜೊತೆ ಚಾಮರಾಜನಗರ ಕ್ಷೇತ್ರದಲ್ಲಿಯೂ ವಿ. ಸೋಮಣ್ಣಗೆ ಕಣಕ್ಕಿಳಿಯಲು ಅವಕಾಶ ನೀಡಿತ್ತು. ಅಲ್ಲಿ ಸೋಮಣ್ಣ 76325 ಮತಗಳನ್ನು ಪಡೆದು ಕಾಂಗ್ರೆಸ್‌ನ ಸಿ. ಪುಟ್ಟರಂಗ ಶೆಟ್ಟಿ (83858 ಮತಗಳು) ವಿರುದ್ಧ ಸೋಲು ಕಂಡರು. ಇತ್ತ ಕಡೆ ಅವರು ಪ್ರತಿನಿಧಿಸುತ್ತಿದ್ದ ಗೋವಿಂದರಾಜನಗರ ಕ್ಷೇತ್ರವೂ ಕಾಂಗ್ರೆಸ್‌ನ ಪ್ರಿಯ ಕೃಷ್ಣ ಪಾಲಾಯಿತು. ಎರಡೂ ಕಡೆ ಸೋತ ಸೋಮಣ್ಣ ಬಳಿಕ ಮೌನಕ್ಕೆ ಶರಣಾಗಿದ್ದಾರೆ.
ತುಮಕೂರು ಸಂಸದ ಜಿ. ಎಸ್. ಬಸವರಾಜ 2019ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರನ್ನು ಸೋಲಿಸಿದ್ದರು. ಈ ವರ್ಷದ ಜನವರಿಯಲ್ಲಿ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಅವರು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಪ್ತರು. ಸಂಸದರ ಪುತ್ರ ಜ್ಯೋತಿ ಗಣೇಶ್ ತುಮಕೂರು ನಗರ ಕ್ಷೇತ್ರದ ಬಿಜೆಪಿ ಶಾಸಕರು.












Click it and Unblock the Notifications