ಜೆಡಿಎಸ್- ಕಾಂಗ್ರೆಸ್ ನಿಂದ ಹೊಂದಾಣಿಕೆ ರಾಜಕಾರಣ: ರಾಜ್ಯದಲ್ಲಿ ಅತಂತ್ರ ಸರ್ಕಾರ ಬರಲ್ಲ: ಪ್ರಹ್ಲಾದ್ ಜೋಶಿ ಭವಿಷ್ಯ
ಬೆಂಗಳೂರು, ಮಾರ್ಚ್28: ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ರಣಕಣ ಚುರುಕುಗೊಂಡಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿಯ ದೆಹಲಿ ನಾಯಕರ ಜೊತೆಗೆ ಸಂಪರ್ಕದಲ್ಲಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಹೊಂದಾಣಿಕೆ ರಾಜಕಾರಣ ಮಾಡಲು ಮುಂದಾಗಿವೆ. ಆದರೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಈ ಬಾರಿಯ ಚುನಾವಣೆ ನಂತರ ಅತಂತ್ರ ಸರ್ಕಾರ ಬರಲ್ಲ.ಬಿಜೆಪಿ ಬಹುಮತದ ಸರ್ಕಾರ ಬರಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಇನ್ನೂ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ತಿರಸ್ಕರಗೊಂಡಿರುವ ಪಕ್ಷ ಗುಜರಾತ್, ಈಶಾನ್ಯ ಭಾರತದಲ್ಲಿ ಜನ ತಿರಸ್ಕರಿಸಿದದಾರೆ. ಘೋಷಣೇ ಉಚಿತ, ಭ್ರಷ್ಟಾಚಾರ ಖಚಿತ ಎಂಬ ಪರಿಸ್ಥಿತಿ ಕಾಂಗ್ರೆಸ್ ಗಿದೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕುರಿತು ಮಾತನಾಡಿದ ಅವರು, ಶೀಘ್ರದಲ್ಲೇ ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡುತ್ತೇವೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಉತ್ತಮ ಆಡಳಿತ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಸ್ವಂತ ಬಲದಲ್ಲಿ, ಬಹುಮತ ಪಡೆದು ಸರಕಾರ ರಚಿಸಲಿದೆ: ಎನ್.ರವಿಕುಮಾರ್
ಬಿಜೆಪಿ ಸ್ವಂತ ಬಲದಲ್ಲಿ, ಬಹುಮತ ಪಡೆದು ಸರಕಾರ ರಚಿಸಲಿದೆ. ಲಕ್ಷಾಂತರ ಕಾರ್ಯಕರ್ತರ ಆಸೆ- ಅಭಿಲಾಷೆಗಳಿಗೆ ಪ್ರಾತಿನಿಧ್ಯದ ರೂಪದಲ್ಲಿ ಬಹುಮತ ಪಡೆಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಮನ್‍ಮ್ಯಾನ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸರಕಾರ ಮೀಸಲಾತಿಯನ್ನು ಹೆಚ್ಚಿಸುವ ಮೂಲಕ ಇತಿಹಾಸ ಬರೆದಿದೆ. 10 ವರ್ಷಕ್ಕೆ ಒಮ್ಮೆಯಾದರೂ ಮೀಸಲಾತಿ ಪ್ರಗತಿ ಪರಿಶೀಲನೆ ಆಗಬೇಕೆಂದು ಡಾ. ಅಂಬೇಡ್ಕರ್ ಅವರೇ ಹೇಳಿದ್ದರು. ಆದರೆ, 60 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷವು ರಾಜ್ಯ- ಕೇಂದ್ರದಲ್ಲಿ ಈ ಕೆಲಸ ಮಾಡಿರಲಿಲ್ಲ ಎಂದು ಟೀಕಿಸಿದರು.
ಪ್ರಗತಿಯ ದಾರಿ, ವಿಶ್ಲೇಷಣೆ, ಚರ್ಚೆ ಮಾಡಲೇ ಇಲ್ಲ. ಇದು ಈ ದೇಶದ ಎಸ್‍ಸಿ, ಎಸ್‍ಟಿ, ಒಬಿಸಿ, ಸಾಮಾನ್ಯ ಜನರ ದುರಂತ ಎಂದ ಅವರು, ಬೊಮ್ಮಾಯಿಯವರು ಅದನ್ನು ವಿಶ್ಲೇಷಣೆ ಮಾಡಿದರು. ವಿವಿಧ ಆಯೋಗಗಳ ವರದಿಯನ್ನು ಜಾರಿಗೊಳಿಸುವ ಗೋಜಿಗೇ ಕಾಂಗ್ರೆಸ್ ಸರಕಾರ ಹೋಗಿರಲಿಲ್ಲ. ಬೊಮ್ಮಾಯಿಯವರು ಜೇನುಹುಟ್ಟಿಗೂ ಕೈ ಹಾಕಿ ಅದರ ಸಿಹಿಯನ್ನು (ಜೇನು) ಸಮಾಜಕ್ಕೆ ಕೊಟ್ಟಿದ್ದಾರೆ.
ಸಿದ್ದರಾಮಯ್ಯರು ಲಿಂಗಾಯತರನ್ನು ಒಡೆಯಲು ಮುಂದಾದರು. ಈಗ ನಾವು ಲಿಂಗಾಯತರಿಗೆ ಶೇ 7 ಮೀಸಲಾತಿ ಕೊಟ್ಟಿದ್ದು, ಆ ಸಮಾಜ ಖುಷಿಯಿಂದಿದೆ. ಒಕ್ಕಲಿಗರಿಗೆ ಶೇ 6 ಮೀಸಲಾತಿ ನೀಡಿದ್ದು, ಆ ಸಮಾಜ ಅತ್ಯಂತ ಸಂತಸದಿಂದಿದೆ. ನೀವು (ಕಾಂಗ್ರೆಸ್) ಆಯೋಗದ ಶಿಫಾರಸನ್ನು ಚರ್ಚೆಯೂ ಮಾಡಲಿಲ್ಲ. ನಾವು ಜನರ ಜೊತೆ ಇರುವ ಪಕ್ಷ. ಜನರ ನಾಡಿಮಿಡಿತ ಅರಿತ ಪಕ್ಷ ನಮ್ಮದು. ಸಂವಿಧಾನಕ್ಕೆ ವಿರುದ್ಧವಾಗಿ ಮುಸ್ಲಿಮರಿಗೆ ನೀಡಿದ ಶೇ 4 ಮೀಸಲಾತಿಯನ್ನು ಶೇ 2 ಲಿಂಗಾಯತರಿಗೆ, ಶೇ 2 ಒಕ್ಕಲಿಗರಿಗೆ ಕೊಡುವ ಕೆಲಸವನ್ನು ಬಿಜೆಪಿ ಮಾಡಿದೆ
ಕಾಂಗ್ರೆಸ್ ಪಕ್ಷವು ಸಮಾಜದಲ್ಲಿ ಗಲಾಟೆ ಮಾಡಿಸಿ ಅಶಾಂತಿ ಸೃಷ್ಟಿಸುತ್ತಿದೆ. ರಾಜ್ಯದಲ್ಲಿ ಬಂಜಾರ-ಲಂಬಾಣಿ ಸಮುದಾಯದ ಹೋರಾಟ ನಡೆಯುತ್ತಿಲ್ಲ. ಆ ಸಮುದಾಯದ ಕೆಲವು ಕಾಂಗ್ರೆಸ್ ಪಕ್ಷದವರ ಪಿತೂರಿಯಿಂದ ರಾಜ್ಯದ ವಿವಿಧೆಡೆ ಗಲಭೆ ನಡೆದಿದೆ. ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲೆಸೆತಕ್ಕೆ ಮೊದಲು ಅಲ್ಲಿನ ಕಾಂಗ್ರೆಸ್ಸಿನ ಯುವ ನಾಯಕ, ಪೆಟ್ರೋಲ್ ಬಂಕ್ ಇರುವವರು ಕಾರಣ. ಅವರು ಏನು ಮೀಟಿಂಗ್ ಮಾಡಿದರು, ಪ್ಲಾನ್ ಮಾಡಿದರೆಂಬುದು ಜಗಜ್ಜಾಹೀರಾಗಿದೆ ಎಂದು ತಿಳಿಸಿದರು.












Click it and Unblock the Notifications