ಯಾವತ್ತೊ ಸತ್ತು ಹೋದ ಪ್ರಕರಣ; ಅದು ನನ್ನ ಸಹಿಯಲ್ಲ ಎಂದ ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಆಗಸ್ಟ್ 22: ನಾನು ಕೇಂದ್ರ ಸಚಿವನಾಗಿದ್ದೇನೆ ಎಂಬ ಹೊಟ್ಟೆಕಿಚ್ಚಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನನ್ನ ಮೇಲೆ ಹಗೆ ಸಾಧಿಸುತ್ತಿದೆ. ಯಾವತ್ತೊ ಸತ್ತು ಹೋದ ಪ್ರಕರಣವನ್ನು, ನನ್ನ ಸಹಿ ಇಲ್ಲದ ಪ್ರಕರಣವನ್ನು ಇಟ್ಟುಕೊಂಡು ನನ್ನ ಮೇಲೆ ಪ್ರಯೋಗ ಮಾಡುತ್ತಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪಿಸಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನನ್ನ ವಿರುದ್ಧ ಹೂಡಿರುವ ಷಡ್ಯಂತ್ರಕ್ಕೆ ಹೆದರಿ ಓಡುವ ಜಾಯಮಾನ ನನ್ನದಲ್ಲ. ನಾನು ಕೂಡ ಕಾನೂನಾತ್ಮಕವಾಗಿಯೇ ಹೋರಾಟ ಮಾಡುತ್ತೇನೆ. ಸಾಯಿ ವೆಂಕಟೇಶ್ವರ ಕಂಪನಿಗೆ ನಾನು ಸೂಜಿ ಮೊನೆಯಷ್ಟು ಜಾಗವನ್ನೂ ನೀಡಿಲ್ಲ. ಅವರು ಗಣಿಗಾರಿಕೆಯನ್ನೂ ಮಾಡಿಲ್ಲ, ಕೇಂದ್ರ ಸರ್ಕಾರ ಅವರಿಗೆ ಅನುಮತಿಯನ್ನೇ ಕೊಟ್ಟಿಲ್ಲ, ರಾಜ್ಯದ ಬೊಕ್ಕಸಕ್ಕೆ ನಯಾಪೈಸೆ ನಷ್ಟವೂ ಆಗಿಲ್ಲ. ವಿಷಯ ಹೀಗಿದ್ದ ಮೇಲೆ ಎಸ್ ಐಟಿ ರಾಜ್ಯಪಾಲರಿಂದ ಪ್ರಾಸಿಕ್ಯೂಶನ್ ಗೆ ಹೇಗೆ ಅನುಮತಿ ಕೋರುತ್ತದೆ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

ಸಾಯಿ ವೆಂಕಟೇಶ್ವರ ಮಿನರಲ್ಸ್ ವಿಚಾರದಲ್ಲಿ ನಾನು ಲೀಗಲ್ ಫೈಟ್ ಮಾಡುತ್ತೇನೆ. ಇಂತಹ ಪರಿಸ್ಥಿತಿಗಳಲ್ಲಿ ಕಾನೂನು ಮೊರೆ ಹೋಗಲೇಬೇಕು. ನೆಲದ ಕಾನೂನಿಗೆ ನಾವು ತಲೆಬಾಗಲೇಬೇಕು ಎಂದರು. ಇಷ್ಟು ದಿನ ಸುಮ್ಮನಿದ್ದ ಕಾಂಗ್ರೆಸ್ ನಾಯಕರು ಈಗ ಎಚ್ಚೆತ್ತುಕೊಂಡಿದ್ದಾರೆ. ಕೇಂದ್ರ ಮಂತ್ರಿ ಅಗಿದ್ದೇನಲ್ಲವೇ, ಅದನ್ನು ಸಹಿಸಿಕೊಳ್ಳುವುದು ಇವರಿಗೆ ಸಾಧ್ಯವಾಗುತ್ತಿಲ್ಲ. ಲೋಕಾಯುಕ್ತ ವಿಶೇಷ ತನಿಖಾ ತಂಡಕ್ಕೆ (SIT) ತನಿಖೆ ಮಾಡಲು ಎಷ್ಟು ದಿನ ಬೇಕು? ಎಂದು ಪ್ರಶ್ನಿಸಿದರು.
2014ರಲ್ಲಿ ನಾನು ನ್ಯಾಯಾಲಯಕ್ಕೆ ಹೋಗಿದ್ದು. ಇವರಿಗೆ ತನಿಖೆ ಮಾಡಲು ಇಷ್ಟು ದಿನ ಬೇಕಾ? ತಿದ್ದಲಾಗಿರುವ ಆದೇಶ ಪತ್ರದ ದಾಖಲೆಯನ್ನು ಪರಿಶೀಲನೆ ಮಾಡಲು ಕೇವಲ ನನ್ನ ಸಹಿಯನ್ನಷ್ಟೇ ಅಲ್ಲ, ನನ್ನ ಕೈ ಬರಹವನ್ನು ಅವರು ತೆಗೆದುಕೊಂಡು ಹೋಗಿದ್ದಾರೆ. ಎಲ್ಲಿ ಬೇಕಾದರೂ ತನಿಖೆ ಮಾಡಲಿ, ಯಾವ ಪ್ರಯೋಗಾಲಯದಿಂದಲಾದರೂ ವರದಿ ಪಡೆಯಲಿ ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.
ಬಿಜೆಪಿ ಮೇಲೆ 21 ಕೇಸ್ ಇದೆ ಎಂದು ಬೊಂಬು ಹಿಡಿದು ಹೇಳಿದರು ಕಾಂಗ್ರೆಸ್ ನಾಯಕರು. ಒಂದನ್ನು ಸಾಬೀತು ಮಾಡುವುದು ಅವರಿಂದ ಸಾಧ್ಯ ಆಗಲಿಲ್ಲ. ಈಗ ನನ್ನ ವಿರುದ್ಧ ಸತ್ತಿರುವ ಕೆಸ್ ಅನ್ನು ಬದುಕಿಸಲು ಹೆಣಗಾಡುತ್ತಿದ್ದಾರೆ. ಬೇಕಾದರೆ ಜೀವ ಇರುವ ಕೇಸನ್ನಾದರೂ ತನ್ನಿ ಸಿದ್ದರಾಮಯ್ಯನವರೇ ಎಂದು ಅವರು ಲೇವಡಿ ಮಾಡಿದರು.
ಈ ಸರ್ಕಾರ ನನ್ನೊಬ್ಬನ ಮೇಲೆ ಮಾತ್ರ ಗದಾ ಪ್ರಹಾರ ಮಾಡುತ್ತಿದೆ. ಇದು ನಿನ್ನೆ ಮೊನ್ನೆಯದ್ದಲ್ಲ. ಈ ಬಗ್ಗೆ ನಾನು ವಿಧಾನಸಭೆಯಲ್ಲೂ ಚರ್ಚೆ ಮಾಡಿದ್ದೆ ಎಂದ ಅವರು; ಪಕ್ಷಕ್ಕಾಗಿ ಭಿಕ್ಷೆ ಬೇಡಿದ್ದೇನೆ. ಇವರ ಹಾಗೆ ಲೂಟಿ ಹೊಡೆದಿಲ್ಲ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
2030ರ ವೇಳೆಗೆ ಬೆಂಗಳೂರಿಗೆ ಸಿಗಲಿದೆ 400 ಕಿಮೀ ವ್ಯಾಪ್ತಿಯ ಮೆಟ್ರೋ, ಉಪನಗರ ರೈಲು ಜಾಲ
ರಾಜ್ಯಪಾಲರು ಮರು ಪರಿಶೀಲನೆ ಮಾಡಿ ಕಳಿಸಿ ಅಂತ ಕಳಿಸಿದ್ದಾರೆ. ಸಾಯಿ ವೆಂಕಟೇಶ್ವರ ದಾಖಲೆಯರುವುದು ನನ್ನ ಬರಹ ಅಲ್ಲ. 6-10-2007ರಲ್ಲಿ ಇದೆಲ್ಲಾ ನಡೆದಿದೆ. ಅದು ನನ್ನ ಸಹಿಯೇ ಅಲ್ಲ, ಯಾರು ಬರೆದುಕೊಂಡಿದ್ದಾನೋ ಗೊತ್ತಿಲ್ಲ. ನಾನು ಆ ಕಂಪನಿಗೆ ಭೂಮಿಯನ್ನೇ ಕೊಟ್ಟಿಲ್ಲ, ಯಾರೆಲ್ಲಾ ಫ್ರಾಡ್ ಮಾಡಿಕೊಂಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ₹20 ಲಕ್ಷ ಹಣವನ್ನು ಅಧಿಕಾರಿಯೊಬ್ಬ ತನ್ನ ಮಗನ ಖಾತೆಗೆ ಕಂಪನಿಯಿಂದ ವರ್ಗಾವಣೆ ಮಾಡಿಸಿಕೊಂಡ ವಿಷಯ ಗೊತ್ತಾದ ಮೇಲೆಯೇ ನಾನು ಎಚ್ಚೆತ್ತುಕೊಂಡಿದ್ದು. ತಪ್ಪು ನೀವು ಇಟ್ಟುಕೊಂಡು ರಾಜ್ಯಪಾಲರನ್ನು, ಕೇಂದ್ರವನ್ನು ಯಾಕೆ ಎಳೆದು ತರುತ್ತೀರಿ? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ನಾನು ಸಾಯಿ ವೆಂಕಟೇಶ್ವರ ಕಡತಕ್ಕೆ ಸಹಿ ಹಾಕಿದೇನೆ ಎಂದು ಯಾರೋ ಈಗ ದಾಖಲೆ ತೆಗೆದಿದ್ದೇವೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ನಾನು ಸಹಿ ಹಾಕಿದ್ದು ಯಾವುದು ಅಂತ ತನಿಖೆ ಮಾಡಿದ್ದೀರಾ? ಎಸ್ ಐಟಿ ತನಿಖೆ ಮಾಡಿದೆಯಾ? ಏನೆಲ್ಲಾ ಅಕ್ರಮ ಆಗಿದೆ ಎಂಬುದು ಸರ್ಕಾರಕ್ಕೆ ಗೊತ್ತಿದೆಯಾ? ಅಧಿಕಾರಿ ಮಗನ ಬ್ಯಾಂಕ್ ಖಾತೆಗೆ ₹20 ಲಕ್ಷ ಹಣ ಹೋಗಿದ್ದನ್ನು ಪತ್ತೆ ಹಚ್ಚಿದ್ದು ಎಸ್ ಐಟಿ ಅಲ್ಲ, ಪೊಲೀಸರೂ ಅಲ್ಲ. ನಾನು ಅದನ್ನು ಪತ್ತೆ ಹಚ್ಚಿದ್ದು. ಪೊನ್ನಣ್ಣ ನಿಮಗಿಂತ ಹೆಚ್ಚು ಕಾನೂನು ಬಲ್ಲವರು ಇದ್ದಾರೆ. ನನಗೂ ಅಲ್ಪಸ್ವಲ್ಪ ಕಾನೂನು ಗೊತ್ತಿದೆ ಎಂದು ಎಂದು ಕೇಂದ್ರ ಸಚಿವರು ತಿರುಗೇಟು ಕೊಟ್ಟರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಟೀಕಾ ಪ್ರಹಾರ ನಡೆಸಿದ ಸಚಿವರು; ಪೊನ್ನಣ್ಣ, FIR ಆಗಿದೆ, ಕುಮಾರಸ್ವಾಮಿ ರಾಜೀನಾಮೆ ಕೊಡಬೇಕು ಎಂದು ಹೇಳುತ್ತೀರಿ. ನಿಮ್ಮ ನಾಯಕನ ರೀತಿಯಲ್ಲಿ ಅಕ್ರಮ, ಪೋರ್ಜರಿ ಮಾಡಿದ್ದಿದ್ದರೆ ನಾನು ಖಂಡಿತಾ ರಾಜೀನಾಮೆ ಕೊಡುತ್ತಿದ್ದೆ. ನಿಮ್ಮ ಮಾತುಗಳನ್ನು ಅಳಿಸಿದ್ದೇನೆ, ರಾಜ್ಯಪಾಲರ ಬಗ್ಗೆ ನೀವೆಲ್ಲ ಉದುರಿಸಿದ ಅಣಿಮುತ್ತುಗಳನ್ನು ಗಮನಿಸಿದ್ದೇನೆ. ಕಂದಾಯ ಸಚಿವ ಕೃಷ್ಣ ಭೈರೇಗೌಡರು ಸುಸಂಸ್ಕೃತರು. ಆದರೂ ರಾಜ್ಯಪಾಲರ ಬಗ್ಗೆ ಅಸಂಸ್ಕೃತ ಭಾಷೆ ಬಳಕೆ ಮಾಡುತ್ತಾರೆ. ಇವರೆಲ್ಲ. ಸಂವಿಧಾನದ ಪ್ರತಿ ಇಟ್ಟುಕೊಂಡು ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದವರು. ನಾಚಿಕೆಯಾಗಬೇಕು ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಈ ಸಾಯಿ ವೆಂಕಟೇಶ್ವರ ಪ್ರಕರಣವನ್ನು ನಾನು ಎಂದೋ ಮುಚ್ಚಿಹಾಕಬಹುದಿತ್ತು. 2011-12ರಲ್ಲಿ ಮುಚ್ಚಿಹಾಕಿಸಬಹುದಿತ್ತು. ಇದೇ ಕಾಂಗ್ರೆಸ್ ಜತೆ ನಾನೇ ಸರ್ಕಾರ ಮಾಡಿದ್ದೆ. ಆಗಲೂ ಮುಚ್ಚಿ ಹಾಕಿಸಬಹುದಿತ್ತು. ಮುಚ್ಚಿಹಾಕಿಸಲು ಎರಡು ಸೆಕೆಂಡ್ ಸಾಕಾಗಿತ್ತು ನನಗೆ. ಪೊನ್ನಣ್ಣ.. ಇದು ಗೊತ್ತಿರಲಿ ನಿಮಗೆ. ನಿಮ್ಮ ಹಾಗೆಯೇ ಲೋಕಾಯುಕ್ತಕ್ಕೆ ಹಲ್ಲು ಕಿತ್ತು ಎಡಿಬಿ ಮಾಡಿಯೊಂಡು ಬಚಾವ್ ಆಗುವ ಪ್ರಯತ್ನ ನಾನು ಮಾಡಲಿಲ್ಲ. ಈಗ ಏನೋ ಹೊಸದನ್ನು ಸಂಶೋಧನೆ ಮಾಡಿದ್ದೇವೆ ಎಂದು ಹೊರಟಿದ್ದೀರಿ. ಅವನ್ಯಾರೋ ಡಿವೈಎಸ್‌ಪಿ ಬಸವರಾಜ್ ಮುಗ್ದಂ ಅಂತೆ. 'ಸರ್.. ನನಗೆ ಬಿಡಿ ಸರ್, ನೋಟೀಸ್ ಕೊಟ್ಟು ಕುಮಾರಸ್ವಾಮಿಯನ್ನ ಕರೆಸುತ್ತೇನೆ' ಎಂದು ಹೇಳುತ್ತಾನಂತೆ. ಕರೆಸಲಿ ನೋಡೋಣ.. ಎಂದು ಕುಮಾರಸ್ವಾಮಿ ಅವರು ಸವಾಲು ಹಾಕಿದರು.












Click it and Unblock the Notifications