ಕೇಂದ್ರ ಬಜೆಟ್ 2021: ಕಾಂಗ್ರೆಸ್ಸಿನ ಆರ್.ವಿ ದೇಶಪಾಂಡೆ ಹೇಳಿದ್ದೇನು?
ಕಾರವಾರ, ಫೆಬ್ರವರಿ 1: ಸೋಮವಾರ ಕೇಂದ್ರದ 2020-21ರ ಮುಂಗಡ ಪತ್ರವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವುದು ಸ್ವಾಗತಾರ್ಹ ಎಂದು ಹಳಿಯಾಳ ಕಾಂಗ್ರೆಸ್ ಶಾಸಕ ಆರ್.ವಿ ದೇಶಪಾಂಡೆ ತಿಳಿಸಿದರು.
ಕೋವಿಡ್-19 ಹಾಗೂ ಲಾಕ್‌ಡೌನ್ ನಿಂದ ದೇಶದ ಪರಿಸ್ಥಿತಿಯು ವಿಭಿನ್ನವಾಗಿದ್ದು, ಆರ್ಥಿಕತೆಯನ್ನು ಚೇತರಿಸುವ ದೃಷ್ಟಿಯಲ್ಲಿ ಸಮಗ್ರ ದೃಷ್ಟಿಕೋನ ಒಳಗೊಂಡ ಬಜೆಟ್ ಇದಾಗಿದೆ. ಬಹುಶಃ ಕೋವಿಡ್‌ನಿಂದ ಕಲಿತ ಪಾಠವನ್ನು ಬಿಂಬಿಸುತ್ತದೆ. ಒಟ್ಟಾರೆಯಾಗಿ ಈ ಬಜೆಟ್ ಮೂಲಭೂತ ಸೌಕರ್ಯಗಳನ್ನು ಪುನರುಜ್ಜೀವನಗೊಳಿಸುವುದರ ಜೊತೆಗೆ ಬೆಳವಣಿಗೆಗೆ ಹೆಚ್ಚು ಒತ್ತುಕೊಡಲಾಗಿದ್ದು, ಇದರಿಂದ ಸುಸ್ಥಿರ ಅಭಿವೃದ್ಧಿ ಸಾಧಿಸಬಹುದಾಗಿದೆ ಎಂದಿದ್ದಾರೆ.
ಕೃಷಿ, ಆರೋಗ್ಯ, ಮೂಲಸೌಕರ್ಯ, ನೈರ್ಮಲ್ಯ, ಶಿಕ್ಷಣ, ಉತ್ಪಾದನಾ ಕ್ಷೇತ್ರ ಮತ್ತು ಜವಳಿ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಿದ್ದು, ಖರ್ಚಿನ ಬಹುಪಾಲನ್ನು ಬಂಡವಾಳ ವೆಚ್ಚವಾಗಿ ಪರಿವರ್ತಿಸಿದ್ದು ಒಳ್ಳೆಯ ಬೆಳವಣಿಗೆ.

ವಾಹನದ ಮಾಲಿನ್ಯ ನಿಯಂತ್ರಣ ತಡೆಗಟ್ಟುವ ಸಲುವಾಗಿ ಸ್ವಯಂ ಪ್ರೇರಿತವಾಗಿ ಹಳೆಯ ವಾಹನಗಳನ್ನು ಗುಜರಿಗೆ ಸೇರಿಸುವ ಕಾನೂನು, ಅಟೋ ಮೊಬೈಲ್ ಕ್ಷೇತ್ರ ಮತ್ತು ಪರಿಸರಕ್ಕೆ ವರದಾನವಾಗಬಹುದು.
2020-21 ನೇ ಸಾಲಿನಲ್ಲಿ ವಿತ್ತಿಯ ಕೊರೆತೆ ಜಿ.ಡಿ.ಪಿ.ಯ 9.5% ಮತ್ತು ಭವಿಷ್ಯದ 2022ಕ್ಕೆ ವಿತ್ತೀಯ ಕೊರತೆಯನ್ನು ಜಿಡಿಪಿಯು 6.8% ಅಂದಾಜಿಸಿದ್ದು, ಇದು ತೀವ್ರ ಕಳವಳಕ್ಕೆ ಕಾರಣವಾಗಿದೆ ಎಂದು ಆರ್.ವಿ ದೇಶಪಾಂಡೆ ಹೇಳಿದ್ದಾರೆ.
ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಬಹಳ ಜ್ವಲಂತವಾಗಿದೆ. ಇದಕ್ಕೆ ದೇಶದ ಯುವಕರ ಉಜ್ವಲ ಭವಿಷ್ಯದ ದೃಷ್ಟಿಯಿಂದ ಮತ್ತು ರಾಷ್ಟ್ರದ ಸರ್ವಾಂಗೀಣ ಪ್ರಗತಿಗೆ ಈ ಮುಂಗಡ ಪತ್ರ ಸ್ಪಂದಿಸಿ, ಉತ್ತರ ಕಂಡಹಿಡಿಯಬೇಕಾಗಿದೆ. ಈ ಮುಂಗಡ ಪತ್ರದಲ್ಲಿ ವ್ಯಾಪಾರಸ್ಥರು, ಸಣ್ಣ ಕೈಗಾರಿಕೆಗಳು ಮತ್ತು ಮಧ್ಯಮ ವರ್ಗದ ಜನರಿಗೆ ಪರಿಹಾರ ಸಿಕ್ಕಿಲ್ಲ ಎಂದು ಅಭಿಪ್ರಾಯಪಟ್ಟರು.
ಇದರ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ. ಕೋವಿಡ್ ಸಂಕಷ್ಟದಲ್ಲಿ ಜನಸಾಮಾನ್ಯರಿಂದ ಹೆಚ್ಚಿನ ನಿರೀಕ್ಷೆ ಇದ್ದು, ಈ ಬಜೆಟ್‌ನ ಮುಖಾಂತರ ಪೂರೈಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಎಡವಿದೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.












Click it and Unblock the Notifications