ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಇಂದು: ಮತ್ತೆ ದೋಸ್ತಿ ಶುರು

ಬೆಂಗಳೂರು, ಸೆಪ್ಟೆಂಬರ್ 3: ರಾಜ್ಯದ ಮೂರು ಮಹಾನಗರ ಪಾಲಿಕೆಗಳು ಸೇರಿದಂತೆ ಒಟ್ಟು 105 ನಗರ ಸ್ಥಳೀಯ ಸಂಸ್ಥೆಗಳಿಗೆ ಆಗಸ್ಟ್ 31ರಂದು ಚುನಾವಣೆ ನಡೆದಿತ್ತು.
ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಸೆಪ್ಟೆಂಬರ್ 3ರಂದು ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದ್ದು, ಮಧ್ಯಾಹ್ನ 2 ಗಂಟೆ ವೇಳೆಗೆ ಬಹುತೇಕ ಪಲಿತಾಂಶ ಹೊರ ಬೀಳುವ ನಿರೀಕ್ಷೆ ಇದೆ.
ಮೈಸೂರು, ತುಮಕೂರು, ಶಿವಮೊಗ್ಗ ಮಹಾನಗರ ಪಾಲಿಕೆಗಳಿಗೆ ಮತ ಎಣಿಕೆ ಕಾರ್ಯ ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದ್ದು, ರಾಜ್ಯದ 29 ನಗರಸಭೆ, 53 ಪುರಸಭೆ ಹಾಗೂ 20 ಪಟ್ಟಣ ಪಂಚಾಯತಿಗಳ ಮತ ಎಣಿಕೆ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.
ಮತ ಎಣಿಕೆ ಕಾರ್ಯಕ್ಕೆ ರಾಜ್ಯ ಚುನಾವಣಾ ಆಯೋಗ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಅಗತ್ಯ ಪೊಲೀಸ್ ಭದ್ರತೆ ಈಗಾಗಲೇ ಒದಗಿಸಲಾಗಿದೆ.
ಲೋಕಲ್ ವಾರ್ ಮುಗೀತು ಫಲಿತಾಂಶಕ್ಕೆ ಕ್ಷಣಗಣನೆ
ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಭಾರಿ ಮಹತ್ವ ಪಡೆದಿದೆ. ರಾಜ್ಯ ಸಮ್ಮಿಶ್ರ ಸರ್ಕಾರದ ಮೈತ್ರಿ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಸ್ವತಂತ್ರವಾಗಿಯೇ ಕಣಕ್ಕೆ ಇಳಿದಿವೆ.
ಸ್ಥಳೀಯ ಮಟ್ಟದಲ್ಲಿ ದೋಸ್ತಿ ಸಾಧ್ಯವಿಲ್ಲ ಎಂಬುದಾಗಿ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟು ಹಿಡಿದ ಪರಿಣಾಮವಾಗಿ ಮೈತ್ರಿ ಪಕ್ಷಗಳೇ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪರಸ್ಪರ ಕಾದಾಟದಲ್ಲಿ ತೊಡಗಿವೆ.
ಈ ಎರಡೂ ಪಕ್ಷಗಳ ಇಬ್ಬಗೆ ನೀತಿ ಅನುಸರಿಸುತ್ತಿವೆ ಎಂಬ ಆರೋಪದೊಂದಿಗೆ ಪ್ರತಿಪಕ್ಷ ಬಿಜೆಪಿ ಭಾರಿ ಪ್ರಮಾಣದ ಪೂರಕ ಫಲಿತಾಂಶದ ನಿರೀಕ್ಷೆಯಲ್ಲಿದೆ.
ಕಳೆದ ಶುಕ್ರವಾರ ಮತದಾನ ಮುಗಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಪಕ್ಷವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಜೆಡಿಎಸ್ ಜತೆ ಕೈಜೋಡಿಸಲಿದೆ ಎಂದು ಘೋಷಿಸಿದ್ದು, ಬಿಜೆಪಿಗೆ ಭಾರಿ ಸವಾಲು ಒಡ್ಡಿದೆ.