CBSE 12ನೇ ತರಗತಿ: ಉತ್ತರ ಪತ್ರಿಕೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಗಡುವು ವಿಸ್ತರಣೆ
ನವದೆಹಲಿ: ಕೇಂದ್ರೀಯ ಫ್ರೌಡಶೀಕ್ಷಣ ಮಂಡಳಿಯು 12ನೇ ತರಗತಿಯ ಉತ್ತರ ಪತ್ರಿಕೆಗಳ ಅಂಕಗಳ ಪರಿಶೀಲನೆ ಹಾಗೂ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು ಪ್ರಮುಖ ಅಪ್ಡೇಟ್ ನೀಡಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಅರ್ಜಿ ಸಲ್ಲಿಕೆಯ ಕಡೆಯ ದಿನಾಂಕವನ್ನು ಒಂದು ದಿನದ ಮಟ್ಟಿಗೆ ವಿಸ್ತರಣೆ ಮಾಡಲಾಗಿದ್ದು, ಜೂನ್ 7ರ ಭಾನುವಾರ ಮಧ್ಯರಾತ್ರಿಯವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ.
ಈ ಹಿಂದೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಜೂನ್ 6, ಶನಿವಾರದ ಮಧ್ಯರಾತ್ರಿ ಕೊನೆಯ ಗಡುವು ಎಂದು ನಿಗದಿಪಡಿಸಲಾಗಿತ್ತು. ಆದರೆ ಆನ್‌ಲೈನ್ ಪೋರ್ಟಲ್‌ನಲ್ಲಿ ಉಂಟಾದ ತಾಂತ್ರಿಕ ದೋಷಗಳು ಮತ್ತು ವಿದ್ಯಾರ್ಥಿಗಳ ತೀವ್ರ ಒತ್ತಾಯದ ಮೇರೆಗೆ, ಇದೀಗ ಜೂನ್ 7ರವರೆಗೆ ದಿನಾಂಕವನ್ನು ವಿಸ್ತರಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಕೂಡಲೇ ತಮ್ಮ ಅರ್ಜಿಗಳನ್ನು ಸಲ್ಲಿಸುವಂತೆ ಮಂಡಳಿ ಪ್ರಕಟಣೆಯಲ್ಲಿ ಮನವಿ ಮಾಡಿದೆ.

ಮರುಮೌಲ್ಯಮಾಪನ ಗಡುವು ವಿಸ್ತರಣೆಗೆ ಕಾರಣವೇನು?
ಈ ಬಾರಿಯ ಸಿಬಿಎಸ್‌ಇ 12ನೇ ತರಗತಿ ಫಲಿತಾಂಶವು ರಾಷ್ಟ್ರಮಟ್ಟದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಮಂಡಳಿಯು ಇದೇ ಮೊದಲ ಬಾರಿಗೆ ರಾಷ್ಟ್ರವ್ಯಾಪಿಯಾಗಿ ಆನ್‌ಲೈನ್ ಸ್ಕ್ರೀನ್ ಮಾರ್ಕಿಂಗ್ ಎನ್ನುವ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಆದರೆ, ಈ ವ್ಯವಸ್ಥೆಯಲ್ಲಿನ ಲೋಪದೋಷಗಳಿಂದಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಫಲಿತಾಂಶ ಪ್ರಕಟವಾದ ಬಳಿಕ, ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಕಾಪಿ ಪಡೆದಾಗ ದೊಡ್ಡ ಅಚಾತುರ್ಯಗಳು ಬೆಳಕಿಗೆ ಬಂದಿವೆ. ಉತ್ತರ ಪತ್ರಿಕೆಯ ಪುಟಗಳು ಸರಿಯಾಗಿ ಸ್ಕ್ಯಾನ್ ಆಗದೆ ಮಸುಕಾಗಿರುವುದು, ಬೇರೆ ವಿದ್ಯಾರ್ಥಿಗಳ ಕೈಬರಹವಿರುವ ಉತ್ತರ ಪತ್ರಿಕೆಗಳು ಅಪ್ಲೋಡ್ ಆಗಿರುವುದು, ಸರಿಯಾದ ಉತ್ತರಗಳಿಗೂ ಅಂಕ ನೀಡದಿರುವುದು ಮುಂತಾದ ಗಂಭೀರ ಆರೋಪಗಳು ಕೇಳಿಬಂದವು. ಇದರಿಂದಾಗಿ ಈ ವರ್ಷದ ಒಟ್ಟಾರೆ ತೇರ್ಗಡೆ ಪ್ರಮಾಣದಲ್ಲಿಯೂ ಭಾರೀ ಕುಸಿತ ಕಂಡುಬಂದು, ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಆತಂಕಗೊಂಡಿದ್ದರು.
ಈ ಗೊಂದಲಗಳ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಆನ್-ಸ್ಕ್ರೀನ್ ಮಾರ್ಕಿಂಗ್ ವ್ಯವಸ್ಥೆಯ ಕುರಿತು ತೀವ್ರ ಟೀಕೆಗಳು ವ್ಯಕ್ತವಾದವು. ವಿದ್ಯಾರ್ಥಿಗಳ ಆಕ್ರೋಶಕ್ಕೆ ಮಣಿದಿರುವ ಸಿಬಿಎಸ್‌ಇ, ಮರುಮೌಲ್ಯಮಾಪನ ಶುಲ್ಕವನ್ನು ಕೂಡ ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ. ಉತ್ತರ ಪತ್ರಿಕೆಯ ಪ್ರತಿಯನ್ನು ಪಡೆಯಲು ಕೇವಲ 100 ರೂಪಾಯಿ ಹಾಗೂ ಪ್ರತಿ ಪ್ರಶ್ನೆಯ ಮರುಮೌಲ್ಯಮಾಪನಕ್ಕೆ 25 ರೂಪಾಯಿಗಳನ್ನು ನಿಗದಿಪಡಿಸಿದ್ದು, ಒಂದು ವೇಳೆ ಅಂಕಗಳು ಹೆಚ್ಚಾದರೆ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿಸುವ ಭರವಸೆಯನ್ನು ನೀಡಿದೆ.
ತಾಂತ್ರಿಕ ದೋಷ ಮತ್ತು ಸೈಬರ್ ದಾಳಿ
ಈ ಡಿಜಿಟಲ್ ಮೌಲ್ಯಮಾಪನದ ಅವಾಂತರಗಳಿಂದಾಗಿ, ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಮರುಪರಿಶೀಲಿಸುವಂತೆ ಮಂಡಳಿಯ ಅಧಿಕೃತ ಪೋರ್ಟಲ್ ಮೊರೆ ಹೋದರು. ಒಂದೇ ಬಾರಿಗೆ ಲಕ್ಷಗಟ್ಟಲೆ ವಿದ್ಯಾರ್ಥಿಗಳು ವೆಬ್‌ಸೈಟ್‌ಗೆ ಲಾಗಿನ್ ಆಗಲು ಯತ್ನಿಸಿದ ಪರಿಣಾಮ, ಸರ್ವರ್ ಡೌನ್ ಆಗಿ ತಾಂತ್ರಿಕ ದೋಷಗಳು ಕಾಣಿಸಿಕೊಂಡವು. ಜೊತೆಗೆ ಮಂಡಳಿಯ ಪೋರ್ಟಲ್ ಮೇಲೆ ಸೈಬರ್ ದಾಳಿ ಕೂಡ ನಡೆದಿದೆ ಎಂದು ವರದಿಯಾಗಿದೆ. ಪೋರ್ಟಲ್‌ನಲ್ಲಿ ಉಂಟಾಗುತ್ತಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸಲು ಹಾಗೂ ಸೈಬರ್ ಭದ್ರತೆಯನ್ನು ಬಲಪಡಿಸಲು ಮಂಡಳಿಯು ಇದೀಗ ಐಐಟಿ ಮದ್ರಾಸ್ ಮತ್ತು ಐಐಟಿ ಕಾನ್ಪುರದ ತಂತ್ರಜ್ಞಾನ ತಜ್ಞರ ನೆರವನ್ನು ಪಡೆದುಕೊಂಡಿದೆ.
In the interest of students, CBSE has decided to extend the last date for submission of applications for Verification and Re-evaluation of Question(s) for the Class XII Board Examinations, thereby providing students additional time and support to complete the process.
— CBSE HQ (@cbseindia29) June 5, 2026
•…
ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡಿರುವ ಸಿಬಿಎಸ್‌ಇ, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಗಡುವನ್ನು ಜೂನ್ 7ರವರೆಗೆ ವಿಸ್ತರಿಸಿದೆ. ಮರುಮೌಲ್ಯಮಾಪನ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆಯಲಿದ್ದು, ಯಾವುದೇ ಆತಂಕ ಬೇಡ ಎಂದು ಮಂಡಳಿ ಭರವಸೆ ನೀಡಿದೆ. ವಿದ್ಯಾರ್ಥಿಗಳು ಅಂತಿಮ ಕ್ಷಣದವರೆಗೆ ಕಾಯದೆ, ಕೂಡಲೇ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಸೂಕ್ತ.












Click it and Unblock the Notifications