ಮಡಿಕೇರಿ : ಈಜಲು ತೆರಳಿದ ಬಾಲಕರಿಬ್ಬರು ನೀರುಪಾಲು
ಮಡಿಕೇರಿ, ಮೇ 21 : ಹೊಳೆಗೆ ಈಜಲು ತೆರಳಿದ ಬಾಲಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ದಕ್ಷಿಣ ಕೊಡಗಿನ ಪೊನ್ನಂಪೇಟೆ ಸಮೀಪದ ಕಿರುಗೂರು ಗ್ರಾಮದ ಹೊನ್ನಿಕೊಪ್ಪಲುವಿನಲ್ಲಿ ಬುಧವಾರ ನಡೆದಿದ್ದು, ಗುರುವಾರ ಘಟನೆ ಬೆಳಕಿಗೆ ಬಂದಿದೆ.
ಹನ್ನೆರಡರ ಪ್ರಾಯದ ಸಚಿನ್ ಹಾಗೂ ಪ್ರಜ್ವಲ್ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ದೈವಿ ಬಾಲಕರು.

ಕಳೆದ ಒಂದು ವಾರದ ಹಿಂದೆ ಕಿರುಗೂರಿನಲ್ಲಿ ವಾಸವಿರುವ ತನ್ನ ಅಜ್ಜಿಯ ಮನೆಗೆ ಬಿಳುಗುಂದದ ಸಚಿನ್ ಬಂದಿದ್ದ. ಮೇ.20ರಂದು ಬೆಳಿಗ್ಗೆ 11ರ ಸುಮಾರಿಗೆ ಸಚಿನ್ ಹಾಗೂ ಪ್ರಜ್ವಲ್ ಅಜ್ಜಿಯ ಮನೆ ಸಮೀಪವಿರುವ ಹೊನ್ನಿಕೊಪ್ಪ ಕೀರೆಹೊಳೆಯ ಗಣಪತಿ ಬಿಡುವ ಗುಂಡಿಗೆ ಈಜಲು ತೆರಳಿದ್ದಾರೆ. ಈ ಸಂದರ್ಭ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಸಂಜೆಯಾದರೂ ಮಕ್ಕಳಿಬ್ಬರು ಮನೆಗೆ ಬರಲಿಲ್ಲವೆಂದು ಸಚಿನ್‌ನ ತಾಯಿ ಶೋಭಾ ಹಾಗೂ ಪ್ರಜ್ವಲ್ ತಾಯಿ ಲತಾ ಸುತ್ತಮುತ್ತ ಹುಡುಕಾಡಿದ್ದಾರೆ. ಆದರೆ, ಯಾವುದೆ ಸುಳಿವು ದೊಕಿರಲಿಲ್ಲ. ಗುರುವಾರ ಬೆಳಿಗ್ಗೆ ಹೊಳೆಯ ಬಳಿ ತೆರಳಿದಾಗ ಮಕ್ಕಳು ಧರಿಸಿದ ಬಟ್ಟೆಗಳು ಕೆರೆಯ ಬದಿಯಲ್ಲಿ ಬಿದ್ದಿದ್ದವು. ಸುದ್ದಿ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಹುಡುಕಾಟ ನಡೆಸಿದಾಗ ಹೊಳೆಯಲ್ಲಿ ಬಾಲಕರಿಬ್ಬರ ಮೃತ ದೇಹಗಳು ಕಂಡುಬಂದಿವೆ.
ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸ್ ಠಾಣೆ ಸಿಬ್ಬಂದಿಗಳು ಆಗಮಿಸಿದ ನಂತರ ಮೃತ ದೇಹವನ್ನು ಹೊಳೆಯಿಂದ ಹೊರತೆಗೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.












Click it and Unblock the Notifications