TV9 C-Voter Pre poll Survey 2018: ಅಂದು ಸಮೀಕ್ಷೆ ಹೇಳಿದ್ದೇನು?, ನಂತರ ಆಗಿದ್ದೇನು? ಇಲ್ಲಿ ತಿಳಿಯಿರಿ
ಬೆಂಗಳೂರು, ಏಪ್ರಿಲ್ 25: ಈ ಬಾರಿಯ ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆ ಟಿವಿ9 ಕನ್ನಡ ವಾಹಿನಿಯು ಸಿ-ವೋಟರ್ ಸಮೀಕ್ಷೆ ಪ್ರಕಟಿಸಿದೆ. ಇದೇ ಸುದ್ದಿ ಸಂಸ್ಥೆ ಕಳೆದ 2018ರ ಚುನಾವಣಾ ಪೂರ್ವದಲ್ಲಿ ಸಮೀಕ್ಷೆ ನಡೆಸಿ ವರದಿ ಪ್ರಕಟಿಸಿತ್ತು. ಆ ವರದಿ- ಅಂಕಿ ಅಂಶಗಳು ಹೇಳಿದ್ದೇನು. ತದನಂತರ ಚುನಾವಣೆ ಮತ ಎಣಿಕೆ ಬಳಿಕ ಬಂದ ಫಲಿತಾಂಶ ಏನು? ಎಂಬ ಸಂಪೂರ್ಣ ಚಿತ್ರಣ ಇಲ್ಲಿದೆ.
ಟಿವಿ9 ಸಿ-ವೋಟರ್ ಸಮೀಕ್ಷೆ ಕಳೆದ ಬಾರಿ 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಗಲಿದೆ. ಅದರ ನಂತರ ಸ್ಥಾನ ಬಿಜೆಪಿಗೆ ಹೋಗಲಿದೆ ಎಂದು ಚುನಾವಣಾ ಪೂರ್ವ ಸರ್ವೇಯಲ್ಲಿ ತಿಳಿಸಿತ್ತು. ಆದರೆ ಕಾಂಗ್ರೆಸ್‌ಗೆ ಕಡಿಮೆ ಸ್ಥಾನ ಬಂದು, ಬಿಜೆಪಿ ಬಹುಮತ ಪಡೆದಿತ್ತು. ಆದರೆ ಸ್ಪಷ್ಟ ಬಹುಮತ ಅಂದು ಯಾವ ಪಕ್ಷಕ್ಕೂ ಸಿಕ್ಕಿರಲಿಲ್ಲ.

ಕರ್ನಾಟಕದ ಒಟ್ಟು 224 ವಿಧಾನಸಭಾ ಕ್ಷೇತ್ರಗಳಲ್ಲಿ 2018ರಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ 102 ಸ್ಥಾನ ಲಭಿಸಲಿವೆ ಎಂದು ಹೇಳಲಾಗಿತ್ತು. ಅಂದಿನ ವಿಪಕ್ಷವಾದ ಬಿಜೆಪಿಗೆ ಕೇವಲ 96 ಸೀಟುಗಳು ಬರಲಿವೆ ಎನ್ನಲಾಗಿತ್ತು. ಇನ್ನೂ ಸ್ಥಳೀಯ ಪಕ್ಷ ಜೆಡಿಎಸ್‌ಗೆ 25 ಸ್ಥಾನಗಳು ಒಲಿಯಲಿವೆ ಎಂದು ಸಮೀಕ್ಷೆಯಿಂದ ಬಹಿರಂಗವಾಗಿತ್ತು.
ಆದರೆ 2018ರಲ್ಲಿ ಚುನಾವಣೆ ಪ್ರಕ್ರಿಯೆಯ ನಂತರದ ಮತ ಎಣಿಕೆಯ ಬಳಿಕ ಸ್ಪಷ್ಟವಾಗಿ ಸಿಕ್ಕ ಅಂಕಿ ಅಂಶಗಳಿಗೂ ಮತ್ತು ಚುನಾವಣಾ ಪೂರ್ವ ಸಿ ವೋಟರ್ ಸಮೀಕ್ಷೆಗೂ ವ್ಯತ್ಯಾಸ ಕಂಡು ಬಂದಿತ್ತು. 2018ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತು. ಒಟ್ಟು 104 ಕ್ಷೇತ್ರಗಳನ್ನು ಬಾಚಿಕೊಂಡಿತು. ಕಾಂಗ್ರೆಸ್ ಕೇವಲ 80 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಜೆಡಿಎಸ್ ನೀರ್ಣಾಯಕವಾಗಿತ್ತು
ಇನ್ನು ಜೆಡಿಎಸ್ 37 ಸ್ಥಾನ ಪಡೆಯುವ ಮೂಲಕ ಸರ್ಕಾರ ರಚನೆಯಲ್ಲಿ ನೀರ್ಣಾಯಕ ಪಾತ್ರ ವಹಿಸಿತು. ಮೆಜಾರಿಟಿ ಸಾಬೀತಿಗೂ ಮುನ್ನ ಬಿಜೆಪಿಯ ಬಿಎಸ್ ಯಡಿಯೂರಪ್ಪ ಅವರು ಸಿಎಂ ಸ್ಥಾನ ಅಲಂಕರಿಸಿದ ಎರಡ್ಮೂರು ದಿನಕ್ಕೆ ಸಿಎಂ ಸ್ಥಾನದಿಂದ ಅವರು ಕೆಳಕ್ಕೆ ಇಳಿದರು.

ನಂತರ ಜೆಡಿಎಸ್ ಜತೆಯಾಗಿ ಬಹುಮತ ಸಾಬೀತು ಮಾಡಿದ ಕಾಂಗ್ರೆಸ್ ಪಕ್ಷವು ಜೆಡಿಎಸ್‌ನ ಎಚ್‌ಡಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡುವ ಮೂಲಕ ಸಮ್ಮಿಶ್ರ ಸರ್ಕಾರವನ್ನು ರಚಿಸಿತು. ಅದು ಸಹ ಅಧಿಕಾರಕ್ಕೆ ಬಂದು 17 ತಿಂಗಳು ಬಳಿಕ ಆಪರೇಷನ್ ಕಮಲದಿಂದಾಗಿ ಪತನವಾಯಿತು.
ಇದೀಗ 2023ನೇ ಸಾಲಿನ ವಿಧಾನಸಭಾ ಚುನಾವಣೆಯ ಟಿವಿ9 ಸಿ ವೋಟರ್ ಸರ್ವೇ ಮತ್ತೆ ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ರಾಜ್ಯದ ಉದ್ದಗಲಕ್ಕು ತೆರಳಿ ಜನರಿಂದ ಅಭಿಪ್ರಾಯ ಸಂಗ್ರಹಿಸಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿ ಪ್ರಕಟಿಸಿದೆ ಎಂದು ತಿಳಿದು ಬಂದಿದೆ.












Click it and Unblock the Notifications