TV9 C-Voter Opinion Poll Survey: ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಕಡೆ ಮತದಾರನ ಒಲವು: ಬಿಜೆಪಿ, ಜೆಡಿಎಸ್ ಗತಿ ಏನು?
ಟಿವಿ 9 ಮತ್ತು ಸಿ ವೋಟರ್ ನಡೆಸಿದ ಜಂಟಿ ಚುನಾವಣೆ ಸಮೀಕ್ಷೆ ಬಹಿರಂಗವಾಗಿದೆ. ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಈ ಬಾರಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ. ಏಪ್ರಿಲ್ 20 ಮತ್ತು 21ರಂದು ಈ ಸಮೀಕ್ಷೆಯನ್ನು ಮಾಡಲಾಗಿದೆ ಎಂದು ಟಿವಿ 9 ಮತ್ತು ಸಿ ವೋಟರ್ ತಿಳಿಸಿದೆ. ತಾನು ಮಾಡಿರುವ ಸಮೀಕ್ಷೆ ಶೇಕಡಾ 95 ರಷ್ಟು ನಿಖರವಾಗಿರುತ್ತದೆ ಎಂದು ಟಿವಿ 9 ಹೇಳಿಕೊಂಡಿದೆ.
ಟಿವಿ 9, ಸಿ-ವೋಟರ್ ಸಮೀಕ್ಷೆ ಪ್ರಕಾರ ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಈ ಬಾರಿ ಕಾಂಗ್ರೆಸ್ ಸ್ಪಷ್ಟ ಮೇಲುಗೈ ಸಾಧಿಸಲಿದೆ. ಮುಂದಿನ ಮುಖ್ಯಮಂತ್ತಿ, ಮೋದಿ ಜನಪ್ರಿಯತೆ, ಕಾಂಗ್ರೆಸ್ ಉಚಿತ ಕೊಡುಗೆಗಳು, ಅಭಿವೃದ್ಧಿ ವಿಚಾರಗಳು ಮುಂತಾದ ಪ್ರಶ್ನೆಗಳನ್ನು ಸಮೀಕ್ಷೆ ವೇಳೆ ಕೇಳಲಾಗಿದ್ದು ಜನತೆ ಉತ್ತರ ನೀಡಿದ್ದಾರೆ. ಕಲ್ಯಾಣ ಕರ್ನಾಟಕ ಬೀದರ್, ಬಳ್ಳಾರಿ, ಕಲಬುರಗಿ, ಕೊಪ್ಪಳ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳನ್ನು ಒಳಗೊಂಡಿದೆ.

ಕಲ್ಯಾಣ ಕರ್ನಾಟಕದಲ್ಲಿ ಒಟ್ಟು 31 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಈ ಬಾರಿ 11 ರಿಂದ 15 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಹೇಳಿದೆ. ಇನ್ನು ಈ ಭಾಗದಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದು 16 ರಿಂದ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂದು ಸಮೀಕ್ಷೆ ತಿಳಿಸಿದೆ. ಜೆಡಿಎಸ್ ಈ ಭಾಗದಲ್ಲಿ ಪ್ರಭಾವ ಹೊಂದಿಲ್ಲ ಆದರೂ ಒಂದು ಸ್ಥಾನದಲ್ಲಿ ಗೆಲ್ಲಬಹುದು ಎನ್ನಲಾಗಿದ್ದು, ಪಕ್ಷೇತರ ಅಭ್ಯರ್ಥಿ ಕೂಡ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.
ಮತದಾನದ ವೇಳೆಗೆ ಬದಲಾಗಲಿದೆ ಚಿತ್ರಣ
ಈ ಸರ್ವೆಯನ್ನು ಏಪ್ರಿಲ್ 20 ಮತ್ತು 21ರಂದು ಮಾಡಲಾಗಿದೆ. ಆದರೆ ನಂತರದ ದಿನಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅಮಿತ್ ಶಾ, ಪ್ರಧಾನಿ ಮೋದಿ, ಜೆಪಿ ನಡ್ಡಾ ರಾಜ್ಯದಲ್ಲಿ ಪ್ರಚಾರ ಮಾಡಿದ್ದಾರೆ. ಕಾಂಗ್ರೆಸ್ ಕೂಡ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಕೂಡ ರಾಜ್ಯದಲ್ಲಿ ಪ್ರಚಾರ ಮಾಡಿದ್ದಾರೆ. ಸಿದ್ದರಾಮಯ್ಯ ನೀಡಿದ ಲಿಂಗಾಯತ ಸಿಎಂ ಹೇಳಿಕೆ ವಿವಾದ ಕೂಡ ತೀವ್ರವಾಗಿದ್ದು ಚಿತ್ರಣ ಬದಲಾಗುವ ಸಾಧ್ಯತೆ ಇದೆ.
ಮತದಾನಕ್ಕೆ ಇನ್ನೂ ಹದಿನೈದು ದಿನಗಳಿದ್ದು ಕೊನೆಯ ಹಂತದಲ್ಲಿ ಮತದಾರ ಯಾವ ಪಕ್ಷದ ಕಡೆ ಒಲವು ತೋರುತ್ತಾನೆ ಎನ್ನುವುದನ್ನು ನೋಡಬೇಕಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಜನರ ಮನಸ್ಸಿನಲ್ಲಿ ಏನಿದೆ ಎನ್ನುವುದು ಬಹಿರಂಗವಾಗಲಿದೆ.












Click it and Unblock the Notifications