ತುಂಗಭದ್ರಾ ಡ್ಯಾಂ ಗೇಟ್ ಚೈನ್ ಕಟ್: ಡಿಕೆಶಿ ಕರ್ತವ್ಯ ಲೋಪ ಎದ್ದುಕಾಣುತ್ತಿದೆ: ಆರ್.ಅಶೋಕ್ ರಿಯಾಕ್ಷನ್
ಬೆಂಗಳೂರು, ಆಗಸ್ಟ್ 11: ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಸಮೀಪದಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ (19) ಚೈನ್ ತುಂಡಾಗಿ ಬಿದ್ದಿದೆ. ಇದು ಸಿದ್ಧಗೊಳ್ಳಲು ಒಂದು ವಾರ ಹಿಡಿಯಬಹುದು. ಅಷ್ಟರಲ್ಲಾಗಲೇ ಡ್ಯಾಂನ ಅರ್ಧದಷ್ಟು ನೀರು ಖಾಲಿಯಾಗುವ ಆತಂಕ ಎದುರಾಗಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ವಾಗ್ದಾಳಿ ನಡೆಸಿದ್ದಾರೆ.
ತುಂಗಭದ್ರಾ ಡ್ಯಾಂ ಗೇಟ್ ಕಟ್ ಆಗಿ ನೀರು ಪೋಲಾಗುತ್ತಿರುವ ಕುರಿತು ಭಾನುವಾರ ಟ್ವೀಟ್ ಮಾಡಿರುವ ಆರ್.ಅಶೋಕ್ ಅವರು, ನೀರಾವರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ತಮ್ಮ ಇಲಾಖೆಗಳ ನಿರ್ವಹಣೆಗಿಂತ ಕಾಂಗ್ರೆಸ್ ಹೈಕಮಾಂಡ್ ಏಜೆಂಟ್ ಕೆಲಸವೇ ಹೆಚ್ಚಾಗಿದೆ. ಪ್ರಜೆಗಳ ಹಿತಕ್ಕಿಂತ, ಪಕ್ಷದ ಹಿತವೇ ಆದ್ಯತೆಯಾಗಿದೆ.

ಡಿಸಿಎಂ ನಿರ್ಲಕ್ಷ್ಯ: ರೈತರಲ್ಲಿ ಆತಂಕ
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರ, ರಾಜಕೀಯ ಮೇಲಾಟ, ಬಣ ಬಡಿದಾಟ, ಪಕ್ಕದ ರಾಜ್ಯಗಳ ಚುನಾವಣೆಗೆ ಹಣ ಹೊಂದಿಸುವಲ್ಲಿ ಬ್ಯುಸಿಯಾಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಜವಾಬ್ದಾರಿ ವಹಿಸಿಕೊಂಡಿರುವ ಇಲಾಖೆಯ ಕರ್ತವ್ಯ ನಿರ್ವಹಿಸಲು ಪಾಪ ಸಮಯ ಎಲ್ಲಿದೆ? ಎಂದು ಲೇವಡಿ ಮಾಡಿದರು.
ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್ ಚೈನ್ ಲಿಂಕ್ ಮುರಿದು ಬಿದ್ದಿದೆ. ಡ್ಯಾಂನ ಹೊರ ಹರಿವು ಏರಿಕೆಯಾಗಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದರಿಂದ ನದಿ ಪಾತ್ರದ ರೈತರನ್ನು ಚಿಂತೆಗೀಡು ಮಾಡಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕಳೆದ ವರ್ಷವೆಲ್ಲ ಬರಗಾಲದಿಂದ ತತ್ತರಿಸಿದ್ದ ಈ ಭಾಗದ ರೈತರು ಈ ವರ್ಷ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗಿರುವುದರಿಂದ ಎರಡು ಬೆಳೆ ತೆಗೆಯಬಹುದು ಎಂದು ನಿಟ್ಟುಸಿರು ಬಿಡುತ್ತಿದ್ದರು. ಹೀಗಿರುವಾಗಲೇ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಈಗ ಬಿತ್ತನೆಯಾಗಿರುವ ಒಂದು ಬೆಳೆಯುೂ ಸಹ ಕೈತಪ್ಪಬಹುದು ಎಂಬ ಆತಂಕ ಅವರಲ್ಲಿ ಶುರುವಾಗಿದೆ ಎಂದು ವಿವರಿಸಿದರು.

ಇಲಾಖೆ ಕೆಲಸ ಮಾಡದೇ ಸಿಎಂ ಕುರ್ಚಿ ಮೇಲೆ ಡಿಸಿಎಂ ಟಾವೆಲ್
ಕಾಲಕಾಲಕ್ಕೆ ಜಲಾಶಯದ ತಾಂತ್ರಿಕ ಸಮಿತಿಯ ಸಭೆ ಮಾಡಿ ಆಣೆಕಟ್ಟಿನ ಸುರಕ್ಷತೆ, ನಿರ್ವಹಣೆ ಬಗ್ಗೆ ಗಮನ ಹರಿಸಿದಿದ್ದರೆ ಇವತ್ತು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಕಳೆದ ವರ್ಷ ಬರಗಾಲದಿಂದ ಜಲಾಶಯ ಖಾಲಿಯಾಗಿದ್ದಾಗ ಡ್ಯಾಂನ ದುರಸ್ತಿ ಕಾರ್ಯ ಮಾಡಲು ಸಮಯವೂ ಇತ್ತು, ಅವಕಾಶವೂ ಇತ್ತು. ಆದರೆ ಮುಖ್ಯಮಂತ್ರಿ ಕುರ್ಚಿ ಮೇಲೆ ಟವಲ್ ಹಾಕುವುದರಲ್ಲೇ ಸದಾಕಾಲ ಬ್ಯುಸಿಯಾಗಿರುವ ಡಿಸಿಎಂ ಸಾಹೇಬರಿಗೆ ತುಂಗಭದ್ರಾ ಅಣೆಕಟ್ಟಿನ ರಿಪೇರಿ ಮಾಡಿಸಲು ಸಮಯ ಎಲ್ಲಿದೆ? ಆಸಕ್ತಿ ಎಲ್ಲಿದೆ? ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮ್ಮ ಅಧಿಕಾರದ ತೆವಲಿಗೆ ರೈತರ ಬದುಕಿನ ಜೊತೆ ಇನ್ನೆಷ್ಟು ದಿನ ಹೀಗೆ ಚೆಲ್ಲಾಟವಾಡುತ್ತೀರಿ? ನಿಮ್ಮ ದುರಾಡಳಿತದಿಂದ ಉತ್ತಮ ಮಳೆಯಾಗಿದ್ದರೂ ಇವತ್ತು ನಾಡಿನ ರೈತರು ಕಣ್ಣೀರಿಡುವ ಪರಿಸ್ಥಿತಿ ಬಂದಿದೆ. ನಿಮ್ಮ ದುರಾಡಳಿತದಿಂದ ಕನ್ನಡಿಗರಿಗೆ ಆದಷ್ಟು ಬೇಗ ಮುಕ್ತಿ ಬೇಕಿದೆ. ನಾಡಿನ ಅನ್ನದಾತರ ಶಾಪ ತಟ್ಟುವ ಮುನ್ನ ರಾಜೀನಾಮೆ ಕೊಟ್ಟು ತೊಲಗಿ ಎಂದು ಅವರು ಆಗ್ರಹಿಸಿದರು.
ಇನ್ನೂ ಈ ಬಗ್ಗೆ ಎಚ್ಚೆತ್ತುಕೊಂಡಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ತುಂಗಭದ್ರಾ ಡ್ಯಾಂ ಗೇಟ್ ದುರಸ್ತಿ ಕುರಿತು ಇಂದು ತುರ್ತು ಕರೆದಿದ್ದಾರೆ. ನೀರು ಪೋಲಾಗದಂತೆ ಕ್ರಮ ಕೈಗೊಳ್ಳಲು ತಜ್ಞರಿಗೆ ಅವರು ಸೂಚನೆ ನೀಡಲಿದ್ದಾರೆ.












Click it and Unblock the Notifications