ಕಡೂರು ತ್ರಿಕೋನ ಸ್ಪರ್ಧೆ: ದತ್ತಾಗೆ ದಕ್ಕಲಿದಿಯಾ ದಳಪತಿಗಳ ಆಶೀರ್ವಾದ?
ಕಡೂರು ಏಪ್ರಿಲ್ 29: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಟಿಕೆಟ್ ಹಂಚಿಕೆ ಗುದ್ದಾಟ ಪೂರ್ಣಗೊಂಡಿದೆ. ಈಗೇನಿದ್ರು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಲಾಭ ಮಾಡಿ ಹಾಗೂ ಪಕ್ಷತೊರೆದು ಟಿಕೆಟ್ ಪಡೆದುಕೊಂಡವರು ಗೆದ್ದು ತಮ್ಮ ಗೌರವದೊಂದಿಗೆ ಪಕ್ಷದ ವರ್ಷಸ್ಸು ಕಾಪಾಡಬೇಕಿದೆ. ಮೂಲ ಹಾಗೂ ಪಕ್ಷಾಂತರ ಅಭ್ಯರ್ಥಿಗಳ ನಡುವೆ ಒಂದು ಹೋರಾಟವಾದರೆ ಮತ್ತೊಂದೆಡೆ ಎದುರಾಳಿಗಳೊಂದಿಗೆ ಗೆಲ್ಲುವುದು ಬಿಗುವಿನ ಹೋರಾಟ. ಹೀಗಾಗಿ ರಾಜ್ಯದ ಚುನಾವಣೆ ಭಾರೀ ಕುತೂಹಲವನ್ನು ಮೂಡಿಸಿದೆ. ಇದಕ್ಕೆ ಚಿಕ್ಕಮಗಳೂರಿನ ಕಡೂರು ಕೂಡ ಹೊರತಾಗಿಲ್ಲ.
ಅಪ್ಪಟ ಬಯಲು ಸೀಮೆ ಭಾಗವಾದ ಕಡೂರು ವಿಧಾನಸಭಾ ಕ್ಷೇತ್ರ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಕ್ಷೇತ್ರವಾಗಿ ಮಾರ್ಪಟ್ಟಿದೆ. ದಲಿತರು, ಅಲೆಮಾರಿಗಳು, ಗೊಲ್ಲ ಮತ್ತು ಉಪ್ಪಾರರಂಥ ಶೋಷಿತ ಸಮುದಾಯದ ಜನಸಂಖ್ಯೆ ಗಣನೀಯವಾಗಿರುವ ಕಡೂರು ವಿಧಾನಸಭಾ ಕ್ಷೇತ್ರದ ಸಾಮಾಜಿಕ, ರಾಜಕೀಯ, ಆರ್ಥಿಕ ಮುಂತಾದ ಆಯಕಟ್ಟಿನ ವಲಯಗಳಲ್ಲಿ ಪ್ರಬಲ ಲಿಂಗಾಯತರದೇ ಪಾರುಪತ್ಯವಿದೆ.

ಕಡೂರು ಕ್ಷೇತ್ರದಲ್ಲಿ ಒಟ್ಟು ಅಂದಾಜು 2,04,865 ಮತದಾರರಿದ್ದಾರೆ. ಇದರಲ್ಲಿ ಲಿಂಗಾಯತ-45,000, ಕುರುಬ-40,000, ಎಸ್‌ಸಿ,ಎಸ್‌ಟಿ-40,000, ಮುಸ್ಲಿಮ್-17,000, ತೆಲುಗು ಗೌಡ+ಒಕ್ಕಲಿಗ-22,000, ಉಪ್ಪಾರ-16,000, ಗೊಲ್ಲ, ಅಲೆಮಾರಿ, ವೈಶ್ಯ ಮುಂತಾದ ಜಾತಿಸಮುದಾಯಗಳ ಮತಗಳಿರುವ ಅಂದಾಜಿದೆ.
ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಅಭ್ಯರ್ಥಿ ವೈಎಸ್ ವಿ ದತ್ತಾ, ಕಾಂಗ್ರೆಸ್ ಅಭ್ಯರ್ಥಿ ಕೆಎಸ್ ಆನಂದ್ ಹಾಗೂ ಬಿಜೆಪಿ ಕೆಎಸ್ ಪ್ರಕಾಶ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಹಲವು ವರ್ಷಗಳಿಂದ ಕಡೂರಿನಲ್ಲಿ ಹಲವಾರು ಬದಲಾವಣೆಗಳಾಗಿವೆ.
2010ರ ತನಕ ಈ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಆಪ್ತವಲಯದ ಕೆ.ಎಂ ಕೃಷ್ಣಮೂರ್ತಿ ಅವರದ್ದೇ ಪಾರುಪತ್ಯವಾಗಿತ್ತು. ಕೆಎಂಕೆ ಅವರ ನಿಧನದ ನಂತರ ಬಿಜೆಪಿಯ ವಿಶ್ವನಾಥ್ ವೈ.ಸಿ ಗೆಲುವು ಸಾಧಿಸಿದರೂ 2013ರ ನಂತರ ಜೆಡಿಎಸ್ ನ ವೈ ಎಸ್ ವಿ ದತ್ತಾ ಅವರು ಇಲ್ಲಿನ ಜನನಾಯಕರಾದರು. 2018ರಲ್ಲಿ ಬಿಜೆಪಿಯ ಬೆಳ್ಳಿ ಪ್ರಕಾಶ್ 62,232 ಗೆಲುವುದ ಸಾಧಿಸಿದರೆ ವೈಎಸ್ ವಿ ದತ್ತಾ 46,860 ಮತಗಳಿಗೆ ತೃಪ್ತಿಪಡೆದುಕೊಂಡಿದ್ದರು.

ವೈಎಸ್‌ವಿ ದತ್ತಾ
ಆದರೆ ಚಿಕ್ಕಮಗಳೂರಿನ ಕಡೂರು ಕ್ಷೇತ್ರದಲ್ಲಿ ಈ ಹಿಂದೆ ಇದ್ದ ಲೆಕ್ಕಾಚಾರವೇ ಬದಲಾಗಿ ಹೋಗಿದೆ. ವಾಸ್ತವವಾಗಿ ಸರಳ ಸಜ್ಜನಿಕ ರಾಜಕಾರಣಿ ಎಂದೇ ಹೆಸರಾದ ಹಾಗೂ ಜೆಡಿಎಸ್‌ನ ಪ್ರಭಾವಿ ನಾಯಕ ಎಂದು ಗುರುತಿಸಿಕೊಂಡಿದ್ದ ವೈಎಸ್‌ವಿ ದತ್ತಾ ಕೆಲ ತಿಂಗಳ ಹಿಂದೆ ತೆನೆ ಇಳಿಸಿ ಕಾಂಗ್ರೆಸ್ ಸೇರಿದ್ದರು. ಹೀಗಾಗಿ ಕಾಂಗ್ರೆಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿಎಂ ಧನಂಜಯ ಅವರಿಗೆ ಜೆಡಿಎಸ್ ಟಿಕೆಟ್ ನೀಡಿತ್ತು.
ಕಡೂರು ಕ್ಷೇತ್ರದಿಂದ ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಪಕ್ಷಕ್ಕೆ ಕರೆಸಿಕೊಂಡಿದ್ದ ಕಾಂಗ್ರೆಸ್ ಕೊನೆಗೆ ವೈಎಸ್‌ವಿ ದತ್ತಾ ಕಡೆ ನೋಡಲೇ ಇಲ್ಲ. ಇದರಿಂದ ಬೇಸತ್ತ ದತ್ತಾ ಕಾಂಗ್ರೆಸ್ ತೊರೆದು ಮತ್ತೆ ಜೆಡಿಎಸ್‌ನತ್ತ ಮುಖ ಮಾಡಿದ್ರು. ಈಗಾಗಲೇ ಟಿಕೆಟ್ ಘೋಷಣೆಯಾಗಿದ್ದ ಸಿಎಂ ಧನಂಜಯ ಅವರ ಮನವೊಲಿಸಿ ಮತ್ತೆ ಜೆಡಿಎಸ್‌ನಿಂದ ದತ್ತಾ ಅವರಿಗೆ ಕಡೂರು ಟಿಕೆಟ್ ನೀಡಲಾಯಿತು. ದೇವೇಗೌಡರ ನಿಷ್ಠಾವಂತರಾಗಿದ್ದ ದತ್ತ ಕಾಂಗ್ರೆಸ್ ಮಾಡಿದ ದ್ರೋಹಕ್ಕೆ ಬೇಸರಗೊಂಡು ಜೆಡಿಎಸ್ ನಿಂದ ಗೆಲುವು ಸಾಧಿಸಲು ತೊಡೆ ತಟ್ಟಿ ನಿಂತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕೆ ಎಸ್ ಆನಂದ್
ಇತ್ತ ಕಾಂಗ್ರೆಸ್‌ನಿಂದ ಧನಂಜಯ ಅವರು ಕಡೂರಿನಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಕಳೆದ ಬಾರಿ ಕಾಂಗ್ರೆಸ್‌ನಿಂದ ಧನಂಜಯ ಸ್ಪರ್ಧೆ ಮಾಡಿದೇ ಇದ್ದರೂ ಧನಂಜಯ ಅವರಿಗೇ ಕಾಂಗ್ರೆಸ್ ಟಿಕೆಟ್ ಪಕ್ಕಾ ಎನ್ನಲಾಗಿತ್ತು. ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಲೆಕ್ಕಾಚಾರವೇ ಬೇರೆಯಾಗಿದೆ.

ಸಿದ್ದರಾಮಯ್ಯರ ಸಿಎಂ ಪರ್ವದಲ್ಲಿ ನಿಗಮವೊಂದರ ಅಧ್ಯಕ್ಷರಾಗಿದ್ದ ಧನಂಜಯ್ ದುಡ್ಡಿನ ಬಲದಲ್ಲಿ ಚುನಾವಣೆ ನಡೆಸುವ ಪ್ಲಾನ್‌ನಲ್ಲಿದ್ದಾರೆ. ಆದರೆ ಕ್ಷೇತ್ರದ ಹೊರಗಿನವರಾದ ಧನಂಜಯ್‌ರನ್ನು ಸ್ವಜಾತಿ ಕುರುಬ ಸಮುದಾಯದವರೇ ನಂಬುತ್ತಿಲ್ಲ ಎಂದು ಜನರು ಮಾತನಾಡಿಕೊಳ್ಳಲಾರಂಭಿಸಿದರು.
ಹೀಗಾಗಿ ಕಳೆದ ವಿಧಾನಸಭಾ ಚುನಾವಣೆ ಎದುರಿಸಿದ್ದ ಕೆಎಸ್ ಆನಂದ್ ಅವರಿಗೆ ಕಾಂಗ್ರೆಸ್ ಮತ್ತೆ ಟಿಕೆಟ್ ನೀಡಿದೆ. ನಿರಂತರವಾಗಿ ಕ್ಷೇತ್ರದಲ್ಲಿ ಜನರ ಜೊತೆಗೆ ಬೆರೆಯುವ ಕೆಲಸ ಮಾಡುತ್ತಿದ್ದರಿಂದ ಕಾಂಗ್ರೆಸ್ ಮತ್ತೆ ಕೆ ಎಸ್ ಆನಂದ್ ಅವರನ್ನ ಕೈ ಕಣಕ್ಕಿಳಿಸಿದೆ.
ಚಿಕ್ಕಮಗಳೂರಿನಲ್ಲಿದ್ದರೂ ಬಯಲು ಸೀಮೆಯ ಭಾಗವಾಗಿರುವ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಈ ಭಾರಿ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಒಂದು ಕಾಲದಲ್ಲಿ ಜಾತ್ಯಾತೀತ ಜನತಾದಳದ ಭದ್ರಕೋಟೆಯಾಗಿದ್ದ ಕಡೂರು, ಈಗ ಬಿಜೆಪಿಗೆ ತನ್ನ ಸ್ಥಾನ ಬಿಟ್ಟುಕೊಟ್ಟಿದೆ. ತಮ್ಮ ವೈಯಕ್ತಿಕ ವರ್ಚಸ್ಸಿನಿಂದಲೇ ಕೆಎಂ ಕೃಷ್ಣಮೂರ್ತಿ ಜನತಾ ದಳ, ಕಾಂಗ್ರೆಸ್‌ನಿಂದಲೂ ಸ್ಪರ್ಧಿಸಿ ಗೆಲುವು ಸಾಧಿಸಿ ಇಲ್ಲಿ ಇತಿಹಾಸ ಬರೆದಿದ್ದಾರೆ.
ಬಿಜೆಪಿ ಕೆಎಸ್ ಪ್ರಕಾಶ್
ಇನ್ನೂ ಬಿಜೆಪಿ ವಿಚಾರಕ್ಕೆ ಬಂದರೆ ಕಳೆದ ಬಾರಿ ಸ್ಪರ್ಧಿಸಿ ಕಡೂರಿನಲ್ಲಿ ಬಿಜೆಪಿ ಕೋಟೆ ಕಟ್ಟಿದ ಕೆಎಸ್ ಪ್ರಕಾಶ್‌ಗೆ ಬಿಜೆಪಿ ಮಣೆ ಹಾಕಿದೆ. ಕಳೆದ ಚುನಾವಣೆಯಲ್ಲಿ 'ಹಣಾ'ಹಣಿಯಿಂದ ಗೆದ್ದ ಕೆ.ಎಸ್.ಪ್ರಕಾಶ್ ಶಾಸಕನಾದ ದಿನದಿಂದ ಸ್ವಜಾತಿ ಲಿಂಗಾಯತರ ಒಳ ಪಂಗಡಗಳನ್ನು ಓಲೈಸುವ ತಂತ್ರಗಳನ್ನು ಪ್ರಯೋಗಿಸುತ್ತಿರವುದರಿಂದ ಕೇಸರಿ ಬಾವುಟಗಳು ಹಳ್ಳಿಗಳಲ್ಲಿ ಹಾರಾಡುತ್ತಿವೆ.
ಕಳೆದ ಬಾರಿ ಬಿಜೆಪಿಯ ಬೆಳ್ಳಿ ಪ್ರಕಾಶ್ ಹಣ ಹರಿಸಿ, ಧರ್ಮಸ್ಥಳ ದೇವರ ಮೇಲೆ ಆಣೆ ಹಾಕಿಸಿ ಓಟು ಖರೀದಿಸಿದರೆಂಬ ಆರೋಪ ಕೇಳಿಬಂದಿತ್ತು. ಈ ಬಾರಿ ಅದ್ಯಾವ ರಣತಂತ್ರ ಪ್ರಕಾಶ್ ರೂಪಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಒಟ್ಟಿನಲ್ಲಿ ಕಡೂರು ಕ್ಷೇತ್ರದಲ್ಲಿ ಒಣಗುತ್ತಿದ್ದ ತೆನೆ ವೈಎಸ್‌ವಿ ದತ್ತಾ ಆಗಮನದಿಂದ ಕಳೆ ಕಟ್ಟಿದೆ. ಇತ್ತಾ ದತ್ತಾ ಅವರನ್ನು ಕರೆಸಿಕೊಂಡು ಮೋಸ ಮಾಡಿದ ಹಣೆಪಟ್ಟಿಯನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಇದೆಲ್ಲದರ ಲಾಭವನ್ನು ಬಿಜೆಪಿ ಪಡೆಯುವ ಸಾಧ್ಯತೆಗಳು ದಟ್ಟವಾಗಿದ್ದು ಈ ಬಾರಿನ ತ್ರಿಕೋನ ಸ್ಪರ್ಧೆ ರೋಚಕತೆಯನ್ನು ಪಡೆದುಕೊಂಡಿದೆ.












Click it and Unblock the Notifications