ದಾಸರಹಳ್ಳಿಯಲ್ಲಿ ಮುನಿರಾಜು ಸೋಲಿಸಲು ಜೆಡಿಎಸ್, ಕಾಂಗ್ರೆಸ್ ತಂತ್ರ!
ಬೆಂಗಳೂರು, ಮಾರ್ಚ್ 06 : ಪೀಣ್ಯ ಕೈಗಾರಿಕಾ ಪ್ರದೇಶವನ್ನು ತನ್ನ ಒಡಲಲ್ಲಿ ಹೊಂದಿರುವ ಕ್ಷೇತ್ರ ದಾಸರಹಳ್ಳಿ. ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯ ಎಸ್.ಮುನಿರಾಜು. ಎರಡು ಚುನಾವಣೆಗಳಲ್ಲಿ ಗೆದ್ದಿರುವ ಅವರು ಈ ಬಾರಿಯೂ ಗೆಲುವು ಸಾಧಿಸಿ ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದ್ದಾರೆ.
2008ಕ್ಕೂ ಮೊದಲು ದಾಸರಹಳ್ಳಿ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿತ್ತು. ಕ್ಷೇತ್ರ ಪುನರ್ ವಿಂಗಡೆನೆಯಾದ ಬಳಿಕ ನಡೆದ ಎರಡು ಚುನಾವಣೆಗಳಲ್ಲಿ ಬಿಜೆಪಿ ಜಯಗಳಿಸಿದೆ. ಬಿಜೆಪಿ ಗೆದ್ದರೂ ತ್ರಿಕೋನ ಸ್ಪರ್ಧೆ ನಡೆದಿದೆ ಎನ್ನುವುದು ವಿಶೇಷ.
ಈ ಬಾರಿಯ ಚುನಾವಣೆಯಲ್ಲಿ ದಾಸರಹಳ್ಳಿ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ತಂತ್ರ ರೂಪಿಸಿವೆ. ಆರ್.ಮಂಜುನಾಥ್ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ಟಿಕೆಟ್‌ಗೆ ಭಾರೀ ಪೈಪೋಟಿ ನಡೆಯುತ್ತಿದೆ.
2013ರ ಚುನಾವಣೆಯಲ್ಲಿ 1.91 ಲಕ್ಷ ಮತದಾರರು ಹಕ್ಕು ಚಲಾವಣೆ ಮಾಡಿದ್ದರು. ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುವ ವಲಸಿಗರು ಹೆಚ್ಚು. ಈ ಬಾರಿ ಮತದಾರರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ಹಾಲಿ ಶಾಸಕರು ಎಸ್.ಮುನಿರಾಜು
ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದಿರುವ ಎಸ್.ಮುನಿರಾಜು ಅವರಿಗೆ ಈ ಬಾರಿಯೂ ಟಿಕೆಟ್ ಖಚಿತ. 2013ರ ಚುನಾವಣೆಯಲ್ಲಿ ಅವರು 57,562 ಮತಗಳನ್ನು ಪಡೆದು ಜಯಗಳಿಸಿದ್ದರು. ಈ ಬಾರಿಯೂ ಗೆಲುವು ಸಾಧಿಸಿ ಹ್ಯಾಟ್ರಿಕ್ ಬಾರಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಆರ್.ಮಂಜುನಾಥ್
ಎಸ್.ಎಂ.ಕೃಷ್ಣ ಅವರಿಗೆ ಗನ್ ಮ್ಯಾನ್ ಆಗಿದ್ದ ಆರ್.ಮಂಜುನಾಥ್ ಜೆಡಿಎಸ್ ಅಭ್ಯರ್ಥಿ. ಗನ್ ಮ್ಯಾನ್ ಮಂಜಪ್ಪ ಎಂದೂ ಅವರು ಪ್ರಸಿದ್ಧಿ ಪಡೆದಿದ್ದಾರೆ. ಎರಡು ಬಾರಿ ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದ ಅವರು ಕೆಲವು ದಿನಗಳ ಹಿಂದೆ ಜೆಡಿಎಸ್ ಸೇರಿದ್ದರು. ಸ್ವತಃ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಕ್ಷೇತ್ರದ ಮೇಲೆ ಹೆಚ್ಚಿನ ಗಮನಹರಿಸಿದ್ದು, ಈ ಬಾರಿ ಅಭ್ಯರ್ಥಿ ಗೆಲ್ಲಿಸಲು ಪಣ ತೊಟ್ಟಿದ್ದಾರೆ.

ಯಾರಾಗಲಿದ್ದಾರೆ ಅಭ್ಯರ್ಥಿ?
ದಾಸರಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆಯಲು ಭಾರೀ ಪೈಪೋಟಿ ನಡೆದಿದೆ. ಕೆ.ನಾಗಭೂಷಣ್, ಸೌಂದರ್ಯ ಮಂಜಪ್ಪ, ಅಮೃತ್ ಗೌಡ, ಉಮೇಶ್ ಬೋರೇಗೌಡ, ಕೆ.ಎಲ್. ತಿಮ್ಮನಂಜಯ್ಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಬಿ.ಎಸ್.ಶಂಕರ್ ಸ್ಪರ್ಧೆ?
ಕಳೆದ ಬಾರಿ ಹಿರಿಯ ಕಾಂಗ್ರೆಸ್ ನಾಯಕ ಬಿ.ಎಲ್.ಶಂಕರ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ 46,734 ಮತಗಳನ್ನು ಪಡೆದಿದ್ದರು. ಈ ಬಾರಿ ಅವರು ಚಿಕ್ಕಮಗಳೂರಿನಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ದಾಸರಹಳ್ಳಿಯಿಂದ ಸ್ಪರ್ಧಿಸಲಿದ್ದಾರೆಯೇ? ಕಾದು ನೋಡಬೇಕು.

ಬಿಜೆಪಿಯ ಬಲ ಹೆಚ್ಚು
ದಾಸರಹಳ್ಳಿ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಾರ್ಡ್‌ಗಳಿವೆ. 5 ವಾರ್ಡ್‌ಗಳಲ್ಲಿ ಬಿಜೆಪಿಯ ಸದಸ್ಯರಿದ್ದಾರೆ. ಆದ್ದರಿಂದ, ಪಕ್ಷದ ಬಲ ಹೆಚ್ಚಿದೆ. 2 ವಾರ್ಡ್‌ಗಳಲ್ಲಿ ಕಾಂಗ್ರೆಸ್, 1 ವಾರ್ಡ್‌ನಲ್ಲಿ ಜೆಡಿಎಸ್ ಸದಸ್ಯರಿದ್ದಾರೆ.












Click it and Unblock the Notifications