ಸಾರಿಗೆ ನೌಕರರ ಮುಷ್ಕರ ಸೋಮವಾರ ಅಂತ್ಯ?
ಬೆಂಗಳೂರು, ಏಪ್ರಿಲ್ 11; ಕರ್ನಾಟಕದಲ್ಲಿ ಸಾರಿಗೆ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಭಾನುವಾರ ಮುಷ್ಕರ 5ನೇ ದಿನಕ್ಕೆ ಕಾಲಿಟ್ಟಿದ್ದು, ಕೆಲವು ಸರ್ಕಾರಿ ಬಸ್‌ಗಳು ಸಂಚಾರ ನಡೆಸುತ್ತಿವೆ.
ಸೋಮವಾರ ಸಾರಿಗೆ ನೌಕರರ ಮುಷ್ಕರ ಅಂತ್ಯಗೊಳ್ಳುವ ನಿರೀಕ್ಷೆ ಇದೆ. ಮುಷ್ಕರದ ನಡುವೆಯೂ ಹಲವು ಜಿಲ್ಲೆಗಳಲ್ಲಿ ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಕಳೆದ ಮೂರು ದಿನಗಳಿಗೆ ಹೋಲಿಕೆ ಮಾಡಿದರೆ ಭಾನುವಾರ ಸರ್ಕಾರಿ ಬಸ್‌ಗಳ ಸಂಚಾರ ಹೆಚ್ಚಾಗಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಕೆಎಸ್ಆರ್‌ಟಿಸಿ ಸಂಚಾರ ವಿಭಾಗದ ಮುಖ್ಯ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ, "ನಾಳೆಯಿಂದ ರಾಜ್ಯದಲ್ಲಿ ಮೊದಲಿನಂತೆ ಬಸ್ ಸಂಚಾರ ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ" ಎಂದು ಹೇಳಿದ್ದಾರೆ.

"ಮುಷ್ಕರದ ನಡುವೆಯೂ ನೌಕರರು ಸ್ವಯಂ ಪ್ರೇರಿತರಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಭಾನುವಾರ ಸುಮಾರು 2 ಸಾವಿರ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದು, ಶೇ 20ರಷ್ಟು ಬಸ್‌ಗಳ ಸಂಚಾರ ಆರಂಭವಾಗಿದೆ. ರಾಜ್ಯದ ಎಲ್ಲಾ ಡಿಪೋಗಳಲ್ಲೂ ಒಂದಷ್ಟು ನೌಕರರು ಕರ್ತವ್ಯಕ್ಕೆ ಬಂದಿದ್ದಾರೆ" ಎಂದರು.
"ದಿನದಿಂದ ದಿನಕ್ಕೆ ಬಸ್‌ಗಳ ಸಂಚಾರ ಹೆಚ್ಚಾಗುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಸ್‌ಗಳ ಸಂಚಾರ ಹೆಚ್ಚಾಗಿದೆ. ನಾಳೆ ಬೆಳಗ್ಗೆಯಿಂದ ಎಂದಿನಂತೆ ರಸ್ತೆಗಿಳಿಯುವ ಸಾಧ್ಯತೆ ಇದೆ" ಎಂದು ತಿಳಿಸಿದರು.
"ಕರ್ತವ್ಯಕ್ಕೆ ಬಾರದ ನೌಕರರ ಸಂಬಳಕ್ಕೆ ಸಾರಿಗೆ ನಿಗಮಗಳು ಕತ್ತರಿ ಹಾಕುತ್ತಿವೆ. ಈಗಲೂ ಸಮಯ ಮೀರಿಲ್ಲ. ಕೆಲಸಕ್ಕೆ ಆಗಮಿಸುವಂತೆ ನೌಕರರಿಗೆ ಈಗಲೂ ಮನವಿ ಮಾಡುತ್ತಿದ್ದೇವೆ" ಎಂದು ಪ್ರಭಾಕರ್ ರೆಡ್ಡಿ ಹೇಳಿದರು.












Click it and Unblock the Notifications