ಜುಲೈ 25ರಿಂದ ಸಾರಿಗೆ ಸಂಸ್ಥೆಗಳ ನೌಕರರ ಮುಷ್ಕರ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಜುಲೈ 18 : ವೇತನ ಪರಿಷ್ಕರಣೆ ಬಗ್ಗೆ ಸರ್ಕಾರದ ಏಕಪಕ್ಷೀಯ ನಿರ್ಧಾರ ಖಂಡಿಸಿ ಕೆಎಸ್ಆರ್‌ಟಿಸಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ಜುಲೈ 25ರಿಂದ ಮುಷ್ಕರ ಆರಂಭಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳ ಜಂಟಿ ಸಮಿತಿ ತಿಳಿಸಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ನೌಕರರಿಗೆ ಶೇ 8ರಷ್ಟು ವೇತನ ಹೆಚ್ಚಳ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. 2016ರ ಜನವರಿ 1ರಿಂದಲೇ ಅನ್ವಯವಾಗುವಂತೆ ವೇತನ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ, ಇದಕ್ಕೆ ವಿರೋಧ ವ್ಯಕ್ತವಾಗಿದೆ. [ಸಾರಿಗೆ ಸಂಸ್ಥೆ ನೌಕರರಿಗೆ ಶೇ 8ರಷ್ಟು ವೇತನ ಹೆಚ್ಚಳ]

ksrtc

ಸರಕಾರದ ನಿರ್ಧಾರದಿಂದ ಬಿಎಂಟಿಸಿ, ಕೆಎಸ್ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಎನ್‌ಇಕೆಆರ್‌ಟಿಸಿ ಸೇರಿ ಎಲ್ಲಾ ನಿಗಮಗಳ ನೌಕರರಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಶೇ 45ರಷ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಮುಂದಿಡಲಾಗಿದೆ.

ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ, ಪರಿಶಿಷ್ಟ ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಹಾಗೂ ಅಖಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ.

ಅಖಿಲ ಕರ್ನಾಟಕ ರಾಜ್ಯ ಸಾರಿಗೆ ನೌಕರರ ಮಹಾಮಂಡಳಿಯ ಕೆ.ಎಸ್.ಶರ್ಮ ಅವರು, 'ರಾಜ್ಯ ಸರ್ಕಾರ ಏಕಪಕ್ಷೀಯ ವೇತನ ಪರಿಷ್ಕರಣೆ ಮೂಲಕ ನೌಕರರಿಗೆ ಅನ್ಯಾಯ ಮಾಡಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಶೇ. 23.55 ವೇತನ ಹೆಚ್ಚಳ ಮಾಡಿದ್ದು, ರಾಜ್ಯ ಕೇವಲ ಶೇ.8 ರಷ್ಟು ವೇತನ ಹೆಚ್ಚಿಸಿದೆ' ಎಂದು ಆರೋಪಿಸಿದ್ದಾರೆ.

ಆರು ತಿಂಗಳ ಹಿಂದೆ ಸರ್ಕಾರದ ಜೊತೆ ಮಾತುಕತೆ ನಡೆಸಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟರು ಅವುಗಳನ್ನು ಕಡೆಗಣಿಸಿ ಏಕಪಕ್ಷೀಯವಾಗಿ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಆದ್ದರಿಂದ ಜುಲೈ 25 ರಿಂದ ರಾಜ್ಯಾದ್ಯಂತ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ.

ಬಿಎಂಟಿಸಿ, ಕೆಎಸ್ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಎನ್‌ಇಕೆಆರ್‌ಟಿಸಿ ಸೇರಿ ರಾಜ್ಯದಲ್ಲಿ 1,15,694 ನೌಕರರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Employees of Karnataka transport corporations have threatened to go on strike from July 25, 2016. Government approved to hike salary of employees to 8 percent. But they demanding for 45 percent hike.
Please Wait while comments are loading...