ಯಶವಂತಪುರ - ಬೆಂಗಳೂರು ನಡುವೆ ಕೆಲ ರೈಲುಗಳ ಸಂಚಾರ ರದ್ದು- ಕಾರಣವೇನು?
ಹುಬ್ಬಳ್ಳಿ, ಮೇ 14: ವಿವಿಧ ಕಾಮಗಾರಿ ಕೈಗೊಳ್ಳುವ ಸಲುವಾಗಿ ಯಶವಂತಪುರ ಹಾಗೂ ಬೆಂಗಳೂರು ನಿಲ್ದಾಣಗಳ ನಡುವೆ ಕೆಲ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಮೇ 16 ಮತ್ತು 23ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲು (17392) ಕೆಎಸ್‌ಆರ್ ಬೆಂಗಳೂರು ಬದಲು ಯಶವಂತಪುರದಲ್ಲಿ ತನ್ನ ಸೇವೆ ಕೊನೆಗೊಳಿಸಲಿದೆ.
ಮೇ 17 ಮತ್ತು 24 ರಂದು ಕೆಎಸ್‌ಆರ್ ಬೆಂಗಳೂರು-ಹೊಸಪೇಟೆ ದೈನಂದಿನ ಪ್ಯಾಸೆಂಜರ್ ಸ್ಪೆಷಲ್ ರೈಲು (06243) ಕೆಎಸ್‌ಆರ್ ಬೆಂಗಳೂರಿನ ಬದಲಿಗೆ ಯಶವಂತಪುರ ನಿಲ್ದಾಣದಿಂದ ಪ್ರಯಾಣ ಬೆಳೆಸಲಿದೆ.
ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ - ಸೋಲಾಪುರ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಪ್ಯಾಸೆಂಜರ್ ಸ್ಪೆಷಲ್ (07331/07332) ರೈಲುಗಳಿಗೆ ವಿಜಯಪುರ ಜಿಲ್ಲೆಯ ಪಡನೂರ ನಿಲ್ದಾಣದಲ್ಲಿ ಒಂದು ನಿಮಿಷದ ಪ್ರಾಯೋಗಿಕ ನಿಲುಗಡೆ ನೀಡಲಾಗಿದೆ. ಮೂರು ತಿಂಗಳ ಕಾಲ ಅಂದರೆ ಆಗಸ್ಟ್ 11ರವರೆಗೆ ಮುಂದುವರಿಯಲಿದೆ.

ಧಗಧಗ ಹೊತ್ತಿ ಉರಿದ ಐರಾವತ ಬಸ್
ಚಲಿಸುತ್ತಿದ್ದ ಐರಾವತ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಶಿವಮೊಗ್ಗದಿಂದ ಮೈಸೂರಿಗೆ ತೆರಳುತ್ತಿದ್ದ ಐರಾವತ ಸೆಮಿ ಸ್ಲೀಪರ್ ಬಸ್ಸಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿದೆ. ಬಸ್ಸು ಭಾಗಶಃ ಸುಟ್ಟು ಹೋಗಿದೆ. ಜಿಲ್ಲೆಯ ತರೀಕೆರೆ ತಾಲೂಕು ಅಜ್ಜಂಪುರ ಕ್ರಾಸ್ ಬಳಿ ರಾತ್ರಿ 1.30ರ ಹೊತ್ತಿಗೆ ಘಟನೆ ಸಂಭವಿಸಿದೆ.
ಬಸ್ಸಿನಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿದ್ದಾರೆ. ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಬೆಂಕಿ ನಂದಿಸುವ ಪ್ರಯತ್ನವನ್ನು ಮಾಡಿದ್ದಾರೆ. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಈ ವೇಳೆಗಾಗಲೆ ಬಸ್ಸು ಭಾಗಶಃ ಸುಟ್ಟು ಹೋಗಿತ್ತು.
ಐರಾವತ ಬಸ್ಸು ಶಿವಮೊಗ್ಗದಿಂದ ಮೈಸೂರಿಗೆ ತೆರಳುತ್ತಿತ್ತು. ಚಾಲಕ, ನಿರ್ವಾಹಕ ಸೇರಿ ಒಟ್ಟು 40 ಪ್ರಯಾಣಿಕರು ಇದ್ದರು. ಅದೃಷ್ಟವಶಾತ್ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ. ತರೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.












Click it and Unblock the Notifications