ರಾಜ್ಯದ ಎಲ್ಲಾ ನಗರದಲ್ಲಿ ಶೌಚಾಲಯ; ಸರ್ಕಾರ ಕೋರ್ಟ್‌ಗೆ ಹೇಳಿದ್ದೇನು?
ಬೆಂಗಳೂರು, ನವೆಂಬರ್ 03; ರಾಜ್ಯದಲ್ಲಿ ಮುಂದಿನ ಎರಡು ವರ್ಷದಲ್ಲಿ ಹೆಚ್ಚಾಗಲಿರುವ ಜನಸಂಖ್ಯೆ ಹಾಗೂ ಶೇ.5ರಷ್ಟು ಫ್ಲೋಟಿಂಗ್ ಪಾಪ್ಯುಲೇಷನ್‌ಗೆ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶೌಚಾಲಯ ಮತ್ತು ಮೂತ್ರಾಲಯಗಳನ್ನು ನಿರ್ಮಿಸಲು ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ ಎಂದು ಕರ್ನಾಟಕ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಲೆಟ್‌ಜ್‌ಕಿಟ್ ಫೌಂಡೇಷನ್ ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳ ಸ್ಥಿತಿ ಮತ್ತು ನಿರ್ವಹಣೆಗೆ ಸಂಬಂಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಲೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.

ಸರ್ಕಾರಿ ವಕೀಲರು, ನಗರಾಭಿವೃದ್ಧಿಇಲಾಖೆಯ ಕಾರ್ಯದರ್ಶಿ ಎಂ. ಎನ್. ಅಜಯ್ ನಾಗಭೂಷಣ್ ಅವರ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಆ ಪ್ರಮಾಣ ಪತ್ರ ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿಯಲ್ಲಿ ಕಾನೂನು ಸೇವಾ ಪ್ರಾಧಿಕಾರವನ್ನು ಪ್ರತಿವಾದಿಯನ್ನಾಗಿ ಮಾಡಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ರಾಜ್ಯ ಸರ್ಕಾರದ ಕ್ರಿಯಾ ಯೋಜನೆ ಬಗ್ಗೆ ಸ್ವತಂತ್ರ ಪರಿಶೀಲನಾ ವರದಿ ಸಲ್ಲಿಸಬೇಕು ಎಂದು ಸೂಚಿಸಿತು.
ಅಲ್ಲದೇ ಕ್ರಿಯಾ ಯೋಜನೆಗೆ ಕೇಂದ್ರ ಸರ್ಕಾರದ ಹಣವೆಷ್ಟು?, ರಾಜ್ಯದ ಪಾಲಿನ ಅನುದಾನ ಎಷ್ಟು?, ಅದನ್ನು ಹೇಗೆ ಬಳಸಲಾಗುತ್ತಿದೆ?. ಕ್ರಿಯಾ ಯೋಜನೆಯ ಅನುಷ್ಠಾನ ಹೇಗೆ? ಎಂಬ ವಿವರವಾದ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು 2024ರ ಜ.11ಕ್ಕೆ ಮುಂದೂಡಿತು.
ಏನಿದೆ ಪ್ರಮಾಣಪತ್ರದಲ್ಲಿ?; ರಾಜ್ಯದಲ್ಲಿ ಪ್ರಸ್ತುತ 312 ನಗರ ಸ್ಥಳೀಯ ಸಂಸ್ಥೆಗಳಿವೆ. ಅವುಗಳಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕವಾಗಿ ತಲಾ 6 ರಿಂದ 7 ಸೀಟ್‌ಗಳಂತೆ ಒಟ್ಟು 9,167 ಸೀಟ್‌ಗಳ ಸಾಮರ್ಥ್ಯದ 1,360 ಸಾರ್ವಜನಿಕ ಶೌಚಾಲಯಗಳಿವೆ.
ಕೇಂದ್ರ ಸಾರ್ವಜನಿಕ ಆರೋಗ್ಯ ಪರಿಸರ ಸಂಘಟನೆ ಹಾಗೂ ಸ್ವಚ್ಛ ಭಾರತ್ ಮಿಷನ್ ಮಾರ್ಗಸೂಚಿಗಳಂತೆ ಪ್ರತಿ ನಗರ ಸ್ಥಳೀಯ ಸಂಸ್ಥೆಗಳ ಒಟ್ಟು ಜನಸಂಖ್ಯೆಯಲ್ಲಿ ಶೇ.5ರಷ್ಟು, ಅಂದರೆ 250 ಮಂದಿಯನ್ನು ಬಂದು ಹೋಗುವ ಜನಸಂಖ್ಯೆಯೆಂದು ಪರಿಗಣಿಸಬೇಕು. ಆ 250 ಜನಸಂಖ್ಯೆಗೆ ಒಂದು ಶೌಚಾಲಯ/ ಮೂತ್ರಾಲಯ ಒದಗಸಲಾಗುವುದು ಎಂದು ಹೇಳಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ 2011ರ ಜನಸಂಖ್ಯೆ ಪ್ರಕಾರ ರಾಜ್ಯದ ನಗರ ಜನಸಂಖ್ಯೆ1.57 ಕೋಟಿ ಇದ್ದು, 2026ರಲ್ಲಿ ಈ ಜನಸಂಖ್ಯೆ 2.01 ಕೋಟಿ ಆಗಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ ಶೇ.5ರಂತೆ ಬಂದು ಹೋಗುವ ಜನಸಂಖ್ಯೆ10 ಲಕ್ಷ ಆಗಲಿದೆ. ಈ ಶೇ.5ರಷ್ಟು ಬಂದು ಹೋಗುವ ಜನಸಂಖ್ಯೆ ಆಧರಿಸಿ ಪ್ರತಿ 250 ಮಂದಿಗೆ ಸಾರ್ವಜನಿಕ ಶೌಚಾಲಯದ ಒಂದು ಸೀಟ್ ಒದಗಿಸಬೇಕಾಗಿದೆ.
ಅದಕ್ಕಾಗಿ, 3,081 ಸೀಟ್‌ಗಳ 384 ಹೊಸ ಸಾರ್ವಜನಿಕ ಶೌಚಾಲಯಗಳನ್ನು 37.22 ಕೋಟಿ ರೂ. ವೆಚ್ಚದಲ್ಲಿ , 2,726 ಮೂತ್ರಾಲಯಗಳಿರುವ 635 ಮೂತ್ರಾಲಯ ಬ್ಲಾಕ್‌ಗಳನ್ನು 8.72 ಕೋಟಿ ರೂ. ವೆಚ್ಚದಲ್ಲಿ ಹಾಗೂ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ಹೆಚ್ಚು ಜನ ಬಂದು ಹೋಗುವ ನಗರ ಸ್ಥಳೀಯ ಸಂಸ್ಥೆಗಳ ಪ್ರದೇಶಗಳಲ್ಲಿ 1,223 ಸೀಟ್‌ಗಳ 199 ಇ-ಶೌಚಾಲಯಗಳನ್ನು 30.58 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಲಾಗಿದೆ.











Click it and Unblock the Notifications