ಟಿಪ್ಪು ಜಯಂತಿ ಗಲಭೆಯ ಹಿಂದೆ ಸರಕಾರದ ಒಳ ರಾಜಕಾರಣ: ಕಟೀಲ್
ಇಡೀ ರಾಜ್ಯದ ಶಾಂತಿ ಕದಡಿದ ಟಿಪ್ಪು ಜಯಂತಿ ಗಲಭೆಯ ಹಿಂದೆ ಸಿದ್ದರಾಮಯ್ಯ ಸರಕಾರದ ಒಳ ರಾಜಕಾರಣ ಅಡಗಿದೆಯೇ? ಸರಕಾರದ ಆಯಕಟ್ಟಿನ ಸ್ಥಾನದಲ್ಲಿ ಇರುವವರ ವ್ಯವಸ್ಥಿತ ತಂತ್ರಗಾರಿಕೆ ಇದಕ್ಕೆ ಕಾರಣವೇ?
ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಡಿಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್, ಕೊನೆಗೂ ಹೈಕಮಾಂಡ್ ಒತ್ತಾಯಕ್ಕೆ ಮಣಿದು ಇತ್ತೀಚೆಗಷ್ಟೇ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದರು. (ಟಿಪ್ಪು ಜಯಂತಿ ವಿವಾದದ ಒಳ-ಹೊರಗು)
ಪರಂ ಅಧಿಕಾರ ಸ್ವೀಕರಿಸಿಕೊಂಡ ಕೆಲವೇ ದಿನಗಳಲ್ಲಿ ಟಿಪ್ಪು ಜಯಂತಿ ಗಲಭೆ, ಇದರಿಂದ ಆರಂಭವಾದ ದಕ್ಷಿಣಕನ್ನಡ, ಹಾಸನ ಮುಂತಾದ ಕಡೆ ನಡೆದ ಹಿಂಸಾಚಾರ ಮೇಲಿನ ಸಂದೇಹಕ್ಕೆ ಮತ್ತಷ್ಟು ಇಂಬು ನೀಡುವಂತಾಗಿದೆ.
ಜೊತೆಗೆ, ಮಡಿಕೇರಿ ಘಟನೆ ನಡೆದಿದ್ದು ಸಿದ್ದರಾಮಯ್ಯ ಸರಕಾರದ ಒಳ ರಾಜಕಾರಣದಿಂದ ಎಂದು ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದು ವಿಷಯಕ್ಕೆ ಸಂಬಂಧಿಸಿದಂತೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.
ಇದಾದ ನಂತರ ರಾಜ್ಯದ ಶಕ್ತಿಕೇಂದ್ರದ ಕೂಗಳತೆ ದೂರದಲ್ಲಿ ನಡೆದ ಮಹಿಳೆಯ ಮೇಲಿನ ಅತ್ಯಾಚಾರ, ಪರಮೇಶ್ವರ್ ಅಧಿಕಾರ ಸ್ವೀಕರಿಸಿಕೊಂಡ ಮೊದಲಲ್ಲೇ ನಡೆದಿದ್ದು ಅವರಿಗೆ ಕಪ್ಪುಚುಕ್ಕೆ ಆಗಿರುವುದಂತೂ ಹೌದು. (ಕುಟ್ಟಪ್ಪ ಸಾವು: ಆಕಸ್ಮಿಕವೋ, ಪೂರ್ವ ನಿಯೋಜಿತವೋ)
ಇದಲ್ಲದೇ, ಮಾಜಿ ಗೃಹ ಸಚಿವ, ಈಗ ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ಕೆ ಜೆ ಜಾರ್ಜ್, ನನ್ನ ಅಧಿಕಾರದ ಅವಧಿಯಲ್ಲಿ ಯಾವುದೇ ಲಾಠಿಚಾರ್ಜ್ ನಡೆದಿಲ್ಲ ಎನ್ನುವ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಮಡಿಕೇರಿ ಗಲಭೆಯ ಸಂಬಂಧ ಹಲವು ಸಂದೇಹಕ್ಕೆ ಎಡೆ ಮಾಡಿಕೊಟ್ಟಿರುವುದಂತೂ ನಿಜ.
ಮಂಗಳೂರು ಸಂಸದರು ನೀಡಿರುವ ಗಂಭೀರ ಹೇಳಿಕೆಯೇನು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಟಿಪ್ಪು ಜಯಂತಿ ಗಲಭೆ ಪೂರ್ವನಿಯೋಜಿತ
ಬಿಜೆಪಿಯ ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಮಡಿಕೇರಿ ಗಲಭೆಗೆ ಸಂಬಂಧಿಸಿದಂತೆ ಗಂಭೀರ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಹಿಂದಿನ ಗೃಹ ಸಚಿವರಿಂದಾಗಿಯೇ ಈ ಗಲಭೆ ನಡೆದಿದೆ ಎಂದು ಕಟೀಲ್ ಆರೋಪಿಸಿರುವುದು ಹೊಸ ಚರ್ಚೆಗೆ ಈಗ ನಾಂದಿ ಹಾಡಿದೆ.

ಕುಟ್ಟಪ್ಪ ಕುಟುಂಬ ಭೇಟಿ ಮಾಡಿದ ಪರಂ
ಮಡಿಕೇರಿ ಗಲಭೆಯಲ್ಲಿ ಮೃತ ವಿಎಚ್ಪಿ ಮುಖಂಡ ಕುಟ್ಟಪ್ಪ ಸಾವಿನ ಹಿಂದೆ ಅನ್ಯ ಕೋಮಿನ ನಾಲ್ವರ ಪೂರ್ವಯೋಜಿತ ಕೃತ್ಯ ಕಾರಣ, ಸೂಕ್ತ ಕ್ರಮ ತೆಗೆದು ಕೊಳ್ಳಬೇಕೆಂದು ಕುಟ್ಟಪ್ಪ ಕುಟುಂಬದ ಸದಸ್ಯರು ಅಲ್ಲಿಗೆ ಭೇಟಿ ನೀಡಿದ್ದ ಪರಮೇಶ್ವರ್ ಅವರನ್ನು ಕಣ್ಣೀರಿಟ್ಟು ಪ್ರಾರ್ಥಿಸಿಕೊಂಡಿದ್ದಾರೆ.

ಸಿಎಂ ಈಗಾಗಲೇ ಹೇಳಿಕೆ ನೀಡಿದ್ದಾಗಿದೆ
ಕುಟ್ಟಪ್ಪ ಸತ್ತಿದ್ದು ಕಪೌಂಡ್ ಹಾರಿ ಬಿದ್ದಿರುವುದಿಂದಾಗಿಯೇ ಹೊರತು ಯಾವುದೇ ಕೋಮು ಗಲಭೆಯಿಂದಾಗಿ ಅಲ್ಲ ಎಂದು ಮುಖ್ಯಮಂತ್ರಿಗಳು ಈಗಾಗಲೇ ಹೇಳಿಕೆ ನೀಡಿ, ಮಡಿಕೇರಿ ಗಲಭೆಗೆ ಬಿಜಿಪಿಯೇ ಕಾರಣ ಎಂದು ಬಿಳಿ ಟವೆಲ್ ಸರಿ ಪಡಿಸಿಕೊಂಡದ್ದಾಗಿತ್ತು. ಆದರೆ ಸೋಮವಾರ (ನ 16) ಕುಟ್ಟಪ್ಪ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕಟೀಲ್ ಹೇಳಿದ್ದು ಹೀಗೆ..
ಟಿಪ್ಪು ಜಯಂತಿ ಆಚರಿಸಿ ಗಲಭೆ ಸೃಷ್ಟಿಸಿರುವುದರ ಹಿಂದೆ ರಾಜ್ಯದ ಒಳ ರಾಜಕಾರಣ ಇದರಲ್ಲಿ ಅಡಗಿದೆ. ಗೃಹ ಸಚಿವ ಪರಮೇಶ್ವರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಿಂದಿನ ಗೃಹ ಸಚಿವ ಕೆ ಜೆ ಜಾರ್ಜ್ ಅವರೇ ಸಂಘರ್ಷ ಹುಟ್ಟು ಹಾಕಿದ್ದಾರೆ. ನನ್ನ ಅಧಿಕಾರದ ಅವಧಿಯಲ್ಲಿ ಯಾವುದೇ ಲಾಠಿಚಾರ್ಜ್ ನಡೆದಿಲ್ಲ ಎಂದು ಹೇಳಿದ್ದಾರೆ, ಮಡಿಕೇರಿ ಗಲಭೆಯ ಒಳಾರ್ಥ ಇದರಿಂದ ತಿಳಿಯುತ್ತದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.

ನನ್ನ ಅಧಿಕಾರದ ಅವಧಿಯಲ್ಲಿ ಏನೂ ಆಗಿಲ್ಲಾಂತರೆ ಜಾರ್ಜ್
ಕಳೆದ ಎರಡೂವರೆ ವರ್ಷಗಳ ಕಾಲ ಗೃಹ ಸಚಿವನಾಗಿದ್ದ ಅವಧಿಯಲ್ಲಿ ಒಂದೇ ಒಂದು ಗೋಲಿಬಾರ್ ಘಟನೆ ನಡೆಯಲಿಲ್ಲ. ಒಂದೇ ಒಂದು ಲಾಠಿ ಚಾರ್ಜ್ ಪ್ರಕರಣ ನಡೆಯಲಿಲ್ಲ. ಇದು ನನ್ನ ಸಾಧನೆ. ನನ್ನ ಕೆಲಸ ತೃಪ್ತಿ ತಂದಿದೆ. ಸಣ್ಣ ಪುಟ್ಟ ಘಟನೆಗಳು ನಡೆದಿರಬಹುದು. ಆದರೆ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂಥ ಪ್ರಕರಣಗಳು ನಡೆದಿಲ್ಲ ಎಂದು ಕೆ ಜೆ ಜಾರ್ಜ್, ಮಡಿಕೇರಿ ಘಟನೆ ನಡೆಯುವ ಮುನ್ನ ಹೇಳಿದ್ದರು.

ಜಗದೀಶ್ ಶೆಟ್ಟರ್ ಹೇಳಿದ್ದು
ಮಡಿಕೇರಿ ಗಲಭೆ ಪ್ರಕರಣವನ್ನು ಸರಕಾರ ಸಿಬಿಐಗೆ ವಹಿಸಲಿ. ಕುಟ್ಟಪ್ಪ ಸಾವಿನ ಮರಣೋತ್ತರ ಪರೀಕ್ಷೆ ಇದುವರೆಗೆ ಬಂದಿಲ್ಲ. ಶಾಹುಲ್ ಗುಂಡೇಟಿನಿಂದ ಸತ್ತಿದ್ದು ಎಂದು ಕೆಲವೇ ಗಂಟೆಯಲ್ಲಿ ಪೋಸ್ಟ್ ಮಾರ್ಟಂ ವರದಿ ಬಂದಾಗಿದೆ. ಕುಟ್ಟಪ್ಪ ಸಾವಿನ ವಿಚಾರದಲ್ಲಿ ಸರಕಾರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.












Click it and Unblock the Notifications