Siddaramaiah: ಅನರ್ಹ ಬಿಪಿಎಲ್ ಪಡಿತರ ಚೀಟಿದಾರರಿಗೆ ಶಾಕ್ : ಸಿದ್ದರಾಮಯ್ಯ ಖಡಕ್ ವಾರ್ನಿಂಗ್
ಬೆಂಗಳೂರು, ಜನವರಿ 10: ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳನ್ನು ಪೂರೈಸದ, ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಅನರ್ಹರನ್ನು ಗುರುತಿಸಿ ಹಂತ ಹಂತವಾಗಿ ತೆಗೆದು ಹಾಕಬೇಕು. ಆದರೆ ಒಬ್ಬನೇ ಒಬ್ಬ ಅರ್ಹ ಬಿಪಿಎಲ್ ಕಾರ್ಡುದಾರನ ಬಿಪಿಎಲ್ ಕಾರ್ಡ್ ರದ್ದು ಮಾಡಬಾರದು. ಅನರ್ಹ ಬಿಪಿಎಲ್ ಪಡಿತರ ಚೀಟಿದಾರರು ಸ್ವಯಂ ತಮ್ಮ ಬಿಪಿಎಲ್ ಕಾರ್ಡ್‌ಗಳನ್ನು ಹಿಂತಿರುಗಿಸಲು ಕಾಲಾವಕಾಶ ನೀಡಬೇಕು, ಆ ಬಳಿಕ ಅಂತವರಿಗೆ ನೊಟೀಸ್ ನೀಡಿ ಕಾರ್ಡುಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಕೃಷ್ಣಾದಲ್ಲಿ ನಡೆದ ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಿದ್ದರಾಮಯ್ಯ ಅವರು ಮಾತನಾಡಿ, ಈಗಾಗಲೇ 4ಸಾವಿರ ಸರ್ಕಾರಿ ನೌಕರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಅನ್ನಭಾಗ್ಯ ಯೋಜನೆಯ ನೇರ ನಗದು ವರ್ಗಾವಣೆಯಡಿ ರೂ.4692 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅಕ್ಟೋಬರ್ ಅಂತ್ಯದವರೆಗೆ ರೂ. 3253 ಕೋಟಿ ವೆಚ್ಚ ಮಾಡಲಾಗಿದೆ. 4,44,48,294 ಫಲಾನುಭವಿಗಳು ಇದರ ಲಾಭ ಪಡೆಯುತ್ತಿದ್ದಾರೆ.

ಪಡಿತರ ಹಾಗೂ ಆಹಾರ ಧಾನ್ಯ ವಿತರಣಾ ವ್ಯವಸ್ಥೆಯನ್ನು ತಳಹಂತದಲ್ಲಿ ಬಲಪಡಿಸುವ ಮೂಲಕ ಜಾಗೃತಿ ಸಮಿತಿಗಳಲ್ಲಿ ಜನರ ಸಹಭಾಗಿತ್ವವನ್ನು ಹೆಚ್ಚಿಸಬೇಕು. ಸಮಿತಿ ನಿಯಮಿತವಾಗಿ ಸಭೆ ನಡೆಸುವುದನ್ನು ಖಾತ್ರಿಪಡಿಸಬೇಕು. ರಾಜ್ಯದಲ್ಲಿ ಒಟ್ಟು 4518 ಪೆಟ್ರೋಲ್ ಬಂಕ್‌ಗಳಿದ್ದು, ಡಿಸೆಂಬರ್ ಅಂತ್ಯದವರೆಗೆ 503 ಪೆಟ್ರೋಲ್ ಬಂಕ್‌ಗಳ ತಪಾಸಣೆ ಮಾಡಲಾಗಿದೆ. ಪೆಟ್ರೋಲ್ ಬಂಕ್‌ಗಳ ತಪಾಸಣೆಯನ್ನು ಹೆಚ್ಚಿಸಿ ಅಳತೆ ಮತ್ತು ಗುಣಮಟ್ಟದಲ್ಲಿ ಮೋಸದಂತಹ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು.
ಕನಿಷ್ಠ ಬೆಂಬಲ ಬೆಲೆ ಅಡಿ ಆಹಾರ ಧಾನ್ಯ ಸಂಗ್ರಹಿಸಲು ಎಲ್ಲಾ ವ್ಯವಸ್ಥೆ ಮಾಡಬೇಕು. ರೈತರಿಗೆ ಸಮಸ್ಯೆಯಾಗದಂತೆ ತ್ವರಿತವಾಗಿ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ 1,53,69,945 ಪಡಿತರ ಚೀಟಿಗಳಿದ್ದು, 5,30,88,636 ಸದಸ್ಯ ಫಲಾನುಭವಿಗಳಿದ್ದಾರೆ. ಇಲಾಖೆಯಲ್ಲಿ ಒಟ್ಟು 709 ಹುದ್ದೆಗಳು ಖಾಲಿಯಿವೆ. ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯಡಿ ಕರ್ನಾಟಕದಲ್ಲಿ ಬೇರೆ ರಾಜ್ಯಗಳ 13,383 ಫಲಾನುಭವಿಗಳು ಪಡಿತರ ಸೌಲಭ್ಯ ಪಡೆಯುತ್ತಿದ್ದಾರೆ.
ಕುಟುಂಬದಲ್ಲಿ ಒಬ್ಬರೇ ಇರುವ, 80 ವರ್ಷ ದಾಟಿದವರಿಗೆ ಮನೆ ಬಾಗಿಲಿಗೆ ಆಹಾರ ಧಾನ್ಯ ಒದಗಿಸುವ ಅನ್ನ-ಸುವಿಧಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. 8,500 ಪಡಿತರ ಚೀಟಿದಾರರು ಯೋಜನೆಯಡಿ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.
ಇನ್ನೂ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದು, ಪ್ರಸ್ತುತ ಬಜೆಟ್‌ನಲ್ಲಿ ಇಲಾಖೆಗೆ ರೂ.1864 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ಇದುವರೆಗೆ ರೂ. 1235 ಕೋಟಿ ವೆಚ್ಚವಾಗಿದೆ. ರಾಜ್ಯದಲ್ಲಿ 50 ವರ್ಷ ಪೂರ್ಣಗೊಳಿಸಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪಾರಂಪರಿಕ ಸಂಸ್ಥೆಗಳೆಂದು ಘೋಷಿಸಿ ಉನ್ನತೀಕರಣಕ್ಕಾಗಿ ರೂ.100 ಕೋಟಿ ಒದಗಿಸಲಾಗಿದ್ದು, ಈ ಕಾಮಗಾರಿಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು.
ಕೌಶಲ್ಯಾಭಿವೃದ್ಧಿ ಆದರೆ ಮಾತ್ರ ಉದ್ಯೋಗ ಸಿಗಲು ಸಾಧ್ಯವಿದೆ. ಕೌಶಲ್ಯ ನೀಡಿಕೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಬೇಕು. ಯುವನಿಧಿ ಯೋಜನೆಯಡಿ ನೋಂದಣಿಗೊಂಡವರಿಗೆ ಆದ್ಯತೆ ಮೇರೆಗೆ ಕೌಶಲ್ಯ ತರಬೇತಿ ನೀಡಬೇಕು. ಯುವನಿಧಿ ಯೋಜನೆಯಡಿ ಇದುವರೆಗೆ 1,97,060 ಅಭ್ಯರ್ಥಿಗಳು ನೋಂದಾಯಿಸಿದ್ದು, ಇವರ ಪೈಕಿ 1,61,883 ಅರ್ಹ ಫಲಾನುಭವಿಗಳಿಗೆ ರೂ.216.38 ಕೋಟಿ ನಿರುದ್ಯೋಗ ಭತ್ಯೆ ನೀಡಲಾಗಿದೆ. ಯೋಜನೆಯಡಿ ಅರ್ಹ ಅಭ್ಯರ್ಥಿಗಳ ನೋಂದಣಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.












Click it and Unblock the Notifications