ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ. ನಾಗೇಂದ್ರ ಆತ್ಮಹತ್ಯೆಗೆ ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ!

|
Google Oneindia Kannada News

ಬೆಂಗಳೂರು, ಆ. 21: ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳನ್ನು ಶೂನ್ಯಕ್ಕೆ ಇಳಿಸಿ ಸಾಧನೆ ಮಾಡಿ ಸನ್ಮಾನ ಮಾಡಿಸಿಕೊಂಡಿದ್ದ ಮೈಸೂರು ಜಿಲ್ಲಾಡಳಿತದ ಅಧಿಕಾರಿಗಳ ಮತ್ತೊಂದು ಮುಖ ಅನಾವರಣಗೊಂಡಿದೆ. ಜೊತೆಗೆ ಕೊರೊನಾ ವೈರಸ್‌ ನೆಪದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹೇಗೆ ಪ್ರಾಮಾಣಿಕ ವೈದ್ಯರ ಜೀವದೊಂದಿಗೆ ಆಟವಾಡುತ್ತಿದೆ ಎಂಬುದು ಕೂಡ ಬಹಿರಂಗವಾಗಿದೆ. ಅನಗತ್ಯವಾಗಿ ಕೊರೊನಾ ವೈರಸ್ ಪರೀಕ್ಷೆ ಮಾಡಿಸಲು, ರೋಗ ಲಕ್ಷಣಗಳಿಲ್ಲದವರನ್ನೂ ಬಲವಂತವಾಗಿ ಆಸ್ಪತ್ರೆಗೆ ಸೇರಿಸಲು ಒತ್ತಾಯ ಮಾಡಲಾಗುತ್ತಿದೆ ಎಂಬ ಆರೋಪಗಳಿಗೆ ಸಾಕ್ಷಿ ಸಿಕ್ಕಂತಾಗಿದೆ. ಇಡೀ ದೇಶ ಆತಂಕಂದಿಂದ ಮನೆ ಸೇರಿದ್ದಾಗ ನಿಜವಾದ ಸೈನಿಕರಂತೆ ಸೇವೆ ಸಲ್ಲಿಸಿದ್ದ ಸರ್ಕಾರಿ ವೈದ್ಯರು ಇದೀಗ ಕ್ರೂರ ವ್ಯವಸ್ಥೆಗೆ ಸಿಲುಕಿ ಜೀವ ಕಳೆದುಕೊಳ್ಳುತ್ತಿದ್ದಾರೆ.

Recommended Video

ಕೊರೊನ ವಾರಿಯರ್ ನನ್ನು ಬಲಿ ಪಡೆದುಕೊಂಡ ಸರ್ಕಾರ..?! | Oneindia Kannada

ಕೊರೊನಾ ವೈರಸ್ ಸಂಕಷ್ಟದ ಕಾಲದಲ್ಲಿಯೂ ರಾಜ್ಯ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ ಎಂದ ವಿರೋಧ ಪಕ್ಷಗಳ ಆರೋಪಕ್ಕೆ ಇದೀಗ ಮತ್ತೊಂದು ಸಾಕ್ಷಿ ಸಿಕ್ಕಿದೆ. ಆದರೆ ಅಧಿಕಾರಶಾಹಿಗೆ ಪ್ರಾಮಾಣಿಕ ಅಧಿಕಾರಿ ಜೀವ ಕೊಡಬೇಕಾಗಿ ಬಂದಿದ್ದು ದುರಂತ. ಕೊರೊನಾ ವೈರಸ್ ತಡೆಯಲು ಎಲೆಮರೆಕಾಯಿಯಂತೆ ಕೆಲಸ ಮಾಡುತ್ತಿರುವ ವೈದ್ಯರನ್ನು ಕಡೆಗಣಿಸಿ, ಕೊರೊನಾ ವೈರಸ್ ಮಟ್ಟಹಾಕುತ್ತಿರುವುದು ಅಧಿಕಾರಿಗಳ ಸಾಧನೆ ಎಂಬಂತೆ ಬಿಂಬಿಸಿದ್ದು ಇದೀಗ ಬಯಲಾಗಿದೆ.

ಡಾ.ನಾಗೇಂದ್ರ ಅವರ ಅಂತಿಮ ದರ್ಶನ ಪಡೆದ ಸಚಿವ ಕೆ.ಸುಧಾಕರ್ಡಾ.ನಾಗೇಂದ್ರ ಅವರ ಅಂತಿಮ ದರ್ಶನ ಪಡೆದ ಸಚಿವ ಕೆ.ಸುಧಾಕರ್

ಮಾದರಿ ಮೈಸೂರು

ಮಾದರಿ ಮೈಸೂರು

ಕೊರೊನಾ ವೈರಸ್ ತಡೆಗಟ್ಟುವಲ್ಲಿ ಇಡೀ ರಾಜ್ಯದಲ್ಲಿ ಮೈಸೂರು ಜಿಲ್ಲಾಡಳಿತ ಮಾದರಿ ಎನಿಸಿಕೊಂಡಿತ್ತು. ಅದರ ಹಿಂದೆ ಇದ್ದ ಆರೋಗ್ಯ ಅಧಿಕಾರಿಗಳ, ಸರ್ಕಾರಿ ವೈದ್ಯರ ಶ್ರಮ ಯಾರಿಗೂ ಕಾಣಲಿಲ್ಲ. ಬದಲಿಗೆ ಅಧಿಕಾರಿಗಳಿಗೆ ಹಾರ ತುರಾಯಿ ಹಾಕಿ ಸನ್ಮಾನ ಮಾಡಲಾಗಿತ್ತು. ನಿಜವಾಗಿ ಕೆಲಸ ಮಾಡಿದ್ದ ಸಾಧಕರು ತೆರೆಮರೆಯಲ್ಲಿಯೇ ಉಳಿದರು. ಅವರ ಸೇವೆ ಗುರುತಿಸುವುದು ಒಂದೆಡೆ ಇರಲಿ ಅವರು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಒತ್ತಡವನ್ನು ಸರ್ಕಾರ ಅಧಿಕಾರಿಗಳ ಮೂಲಕ ಹಾಕಿಸುತ್ತಿದೆ. ಇದು ವಿರೋಧ ಪಕ್ಷಗಳು ಆರೋಪಿಸಿರುವಂತೆ ಕೋವಿಡ್ ಕಾಲದ ಭ್ರಷ್ಟಾಚಾರದ ಮತ್ತೊಂದು ಮುಖ ಅನಾವರಣವಾಗಿದೆ.

ಅನಗತ್ಯವಾಗಿ ಹೆಚ್ಚೆಚ್ಚು ಕೋವಿಡ್-19 ಪರೀಕ್ಷೆ ಮಾಡಿಸಬೇಕು, ಟಾರ್ಗೆಟ್ ರೀಚ್ ಮಾಡಬೇಕು ಎಂದು ಇಡೀ ರಾಜ್ಯಾದ್ಯಂತ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರ ಒತ್ತಡ ಹಾಕಿಸುತ್ತಿರುವ ಆರೋಪಕ್ಕೆ ಸಾಕ್ಷಿ ಎಂಬಂತೆ ಕೊರೊನಾ ವಾರಿಯರ್ ಡಾ. ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆತ್ಮಹತ್ಯೆಯ ನಂತರ ಹೊರಗೆ ಬರುತ್ತಿರುವ ಒಂದೊಂದು ಸಂಗತಿಗಳು ಕೂಡ ದಂಗು ಬಡಿಸುವಂತಿವೆ. ಕಳೆದ ಮಾರ್ಚ್‌ನಿಂದ ಜೀವದ ಹಂಗು ತೊರೆದು ಜನರ ಜೀವ ರಕ್ಷಣೆ ಮಾಡಿದ್ದ ಕೊರೊನಾ ವಾರಿಯರ್ಸ್ ವೈದ್ಯರು ಇದೀಗ ತಮ್ಮ ಜೀವ ಉಳಿಸಿಕೊಳ್ಳಲು ಸತ್ಯಾಗ್ರಹ ಆರಂಭಿಸಿದ್ದಾರೆ.

ಅಧಿಕಾರಿಗಳಿಗೆ ಸನ್ಮಾನ!

ಅಧಿಕಾರಿಗಳಿಗೆ ಸನ್ಮಾನ!

ಕೊರೊನಾ ಪರೀಕ್ಷೆಗೆ ಟಾರ್ಗೆಟ್ ಕೊಡಲಾಗುತ್ತಿದೆ ಎಂಬ ಆರೋಪಕ್ಕೆ ಉತ್ತರ ಎಂಬಂತೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಾ ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆತ್ಮಹತ್ಯೆಗೆ ಮಾನಸಿಕ ಖಿನ್ನತೆ ಕಾರಣ ಎಂಬ ಅರ್ಥದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿದ್ದರು. ಆದರೆ ಇದೀಗ ಅವರ ಆತ್ಮಹತ್ಯೆಗೆ ನಿಜವಾದ ಕಾರಣಗಳನ್ನು ಮೈಸೂರು ಜಿಲ್ಲೆಯ ಸರ್ಕಾರಿ ವೈದ್ಯರು ಬಹಿರಂಗಗೊಳಿಸಿದ್ದಾರೆ. ಡಾ. ನಾಗೇಂದ್ರ ಅವರ ಸಾವಿಗೆ ನ್ಯಾಯಕ್ಕಾಗಿ ಶವವಿಟ್ಟು ಅಹೋರಾತ್ರಿ ಹೋರಾಟ ಆರಂಭಿಸಿದ್ದಾರೆ.


ಕಳೆದ ಮಾರ್ಚ್‌ ತಿಂಗಳಿನಲ್ಲಿ ಕೋವಿಡ್-19 ಸೋಂಕಿತ ಪ್ರಕರಣ ಕಂಡುಬಂದಾಗಿನಿಂದ ಡಾ. ನಾಗೇಂದ್ರ ಅವರು ಒಂದೇ ಒಂದು ದಿನ ರಜೆಯನ್ನೂ ತೆಗೆದುಕೊಂಡಿಲ್ಲ ಎಂಬುದು ಅವರ ಸೇವಾನಿಷ್ಠೆ ತೋರಿಸುತ್ತದೆ. ಒಂದು ಹಂತದಲ್ಲಿ ಮೈಸೂರು ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಶೂನ್ಯಕ್ಕೆ ಇಳಿದಿತ್ತು. ಆಗ ಸರ್ಕಾರದ ವತಿಯಿಂದ ಅಧಿಕಾರಿಗಳಿಗೆ ಮೈಸೂರಿನಲ್ಲಿ ಸನ್ಮಾನ ಮಾಡಲಾಗಿತ್ತು. ನಿಜವಾದ ಕೊರೊನಾ ವಾರಿಯರ್ಸ್‌ಗಳು ಸೋಂಕಿತರಿಗೆ ಚಿಕಿತ್ಸೆ ಕೊಡುತ್ತಿದ್ದರೆ, ಈಗ ಹೆಚ್ಚೆಚ್ಚು ಕೋವಿಡ್ ಪರೀಕ್ಷೆ ಮಾಡಲು ಟಾರ್ಗೆಟ್‌ ಕೊಟ್ಟಿರುವ ಆರೋಪ ಎದುರಿಸುತ್ತಿರುವ ಅಧಿಕಾರಿಗಳು ಸರ್ಕಾರದಿಂದ ಹಾರತುರಾಯಿಯೊಂದಿಗೆ ಸನ್ಮಾನ ಸ್ವೀಕರಿಸಿದ್ದರು. ಡಾ. ನಾಗೇಂದ್ರ ಅವರಂತಹ ಪ್ರಾಮಾಣಿಕ ಕೊರೊನಾ ವಾರಿಯರ್ಸ್‌ಗಳ ಸೇವೆ ಈವರೆಗೂ ಎಲೆಮರೆಕಾಯಿಯಂತೆಯೇ ಉಳಿದಿದೆ.

ಶವವಿಟ್ಟು ಪ್ರತಿಭಟನೆ

ಶವವಿಟ್ಟು ಪ್ರತಿಭಟನೆ

ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಅವರ ಆತ್ಮಹತ್ಯೆಗೆ ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಕಾರಣ ಎಂದು ಆರೋಪಿಸಿ ಡಿಎಚ್ಓ ಕಚೇರಿ ಎದುರು ಸಂಬಂಧಿಕರು ಹಾಗೂ ವೈದ್ಯರು ಡಾ. ನಾಗೇಂದ್ರ ಅವರ ಮೃತದೇವನ್ನಿಟ್ಟು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಅನಗತ್ಯವಾಗಿ ಕೋವಿಡ್-19 ಆಂಟಿಜೆನ್ ಪರೀಕ್ಷೆ ನಡೆಸುವಂತೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಒತ್ತಡ ಹಾಕುತ್ತಿದ್ದರು. ಸಿಇಓ ಮಿಶ್ರಾ ಕೊಡುತ್ತಿದ್ದ ಕೆಲಸದ ಒತ್ತಡವನ್ನು ನಿಭಾಯಿಸಲು ಖಾಲಿ ಹುದ್ದೆಗಳಿಂದ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಜಿಪಂ ಸಿಇಓ ಮಿಶ್ರಾ ಕಿರುಕುಳದಿಂದ ಡಾ. ನಾಗೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸಂಬಂಧಿಕರು, ಸರ್ಕಾರಿ ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಇಓ ಮಿಶ್ರಾ ಅಮಾನತು ಆಗುವವರೆಗೆ ಜಿಲ್ಲೆಯ ಎಲ್ಲ ಸರ್ಕಾರಿ ವೈದ್ಯರು ಕೆಲಸದಿಂದ ದೂರ ಉಳಿಯಲು ನಿರ್ಧಾರ ಮಾಡಿದ್ದಾರೆ. ದಿನಕ್ಕೆ 300 ರಾಪಿಡ್ ಆ್ಯಂಟಿಜೆನ್ ಪರೀಕ್ಷೆ ಮಾಡಿದಿದ್ದರೇ ರಾಜ್ಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ದೂರು ದಾಖಲು ಮಾಡುವುದಾಗಿ ಮಿಶ್ರಾ ಹೆದರಿಸುತ್ತಿದ್ದರು. ಜನ ಸಾಮಾನ್ಯರೂ ಈಗೀಗ ಕೋವಿಡ್ ಪರೀಕ್ಷೆಗೆ ಒಳಗಾಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಟಾರ್ಗೆಟ್ ರೀಚ್ ಮಾಡುವುದು ಸಾಧ್ಯವಾಗುತ್ತಿರಲಿಲ್ಲ ಎಂದು ಮೈಸೂರು ಜಿಲ್ಲೆಯ ಸರ್ಕಾರಿ ವೈದ್ಯರು ಆರೋಪಿಸಿದ್ದಾರೆ.

ಕಕ್ಕಾಬಿಕ್ಕಿಯಾದ ಸಚಿವರು

ಕಕ್ಕಾಬಿಕ್ಕಿಯಾದ ಸಚಿವರು

ಮೃತ ಡಾ. ನಾಗೇಂದ್ರ ಅವರ ಅಂತಿಮ‌ ದರ್ಶನವನ್ನು ನಿನ್ನೆ ರಾತ್ರಿಯೇ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಪಡೆದರು. ಆಗ ವೈದ್ಯರು ಡಾ. ಸುಧಾಕರ್ ಅವರಿಗೆ ಘೇರಾವ್ ಹಾಕುವ ಪ್ರಯತ್ನ ಮಾಡಿದರು. ಅದೇ ಸಂದರ್ಭದಲ್ಲಿ ಡಾ. ಸುಧಾಕರ್ ಅವರಿಗೆ ಮಹಿಳಾ ವೈದ್ಯರೊಬ್ಬರು ತೀವ್ರ ತರಾಟೆ ತೆಗೆದುಕೊಂಡರು. ಜಿಪಂ ಸಿಇಓ ಮಿಶ್ರಾ ಅವರನ್ನು ಅಮಾನತು ಮಾಡುವಂತೆ ಸಚಿವರಿ​ಗೆ ಒತ್ತಾಯ ಮಾಡಿದರು.

ಸಿಇಒ ಮಿಶ್ರಾ ಒತ್ತಡದಿಂದ ಟಿಎಚ್​ಒ ಡಾ. ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀವು ನಮಗೆ ನ್ಯಾಯ ಒದಗಿಸಿಕೊಡಬೇಕು. ನಮಗೆ ಯಾರ ನಮಸ್ಕಾರ ಬೇಕಿಲ್ಲ, ನಿಮ್ಮ ಸರ್ಕಾರ ಬೇಕಿಲ್ಲ. ನಮಗೆ ಡಾ. ನಾಗೇಂದ್ರ ಬೇಕು. ಕೊಡಿಸೋದಕ್ಕೆ ಆದರೆಬ ಕೊಡಿಸಿ, ಇಲ್ಲದಿದ್ದರೆ ಇಲ್ಲಿಂದ ತೊಲಗಿ. 30 ಲಕ್ಷ ರೂಪಾಯಿ ಕೊಡ್ತೀರಾ? ನಾವೆಲ್ಲ ವೈದ್ಯರು ನಮ್ಮ ವೇತನದಲ್ಲಿ ಅವರಿಗೆ ಪರಿಹಾರ ಕೊಡ್ತೇವೆ. ಸಾಯಿಸಿಬಿಟ್ರಲ್ರೀ ಅಮಾಯಕನನ್ನು ಎಂದು ಸಚಿವ ಸುಧಾಕರ್​ಗೆ ಮಹಿಳಾ ವೈದ್ಯರು ತೀವ್ರ ತರಾಟೆ ತೆಗೆದುಕೊಂಡರು. ಇದರಿಂದಾಗಿ ಡಾ. ಸುಧಾಕರ್ ಅವರು ಏನೂ ಪ್ರತಿಕ್ರಿಯೆ ಕೊಡದೇ ಕಕ್ಕಾಬಿಕ್ಕಿಯಾದರು.

ನಂತರ ಪ್ರತಿಕ್ರಿಯೆ ಕೊಟ್ಟಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು, ಡಾ. ನಾಗೇಂದ್ರ ಅವರು ಸಹೃದಯಿ ಹಾಗೂ ಬಹಳಷ್ಟು ಸೂಕ್ಷ್ಮಮನಸ್ಸಿನವರು ಎಂಬುದು ತಿಳಿದಿದ್ದೇನೆ. ಒಬ್ಬ ವೈದ್ಯನಾಗಿ ಅವರ ಸಾವಿನ ನೋವು ನನಗೂ ಅರ್ಥವಾಗುತ್ತದೆ. ತನಿಖೆಗೆ ಆದೇಶ ಕೊಟ್ಟಿದ್ದು, ಅವರ ಕುಟುಂಬಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ ಎಂದಿದ್ದಾರೆ.

ಟ್ವೀಟ್‌ಗೆ ಸೀಮಿತ ಶ್ರೀರಾಮುಲು

ಟ್ವೀಟ್‌ಗೆ ಸೀಮಿತ ಶ್ರೀರಾಮುಲು

ತಮ್ಮದೆ ಇಲಾಖೆಯ ಪ್ರಾಮಾಣಿಕ ಅಧಿಕಾರಿ ಡಾ. ನಾಗೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡರೂ ಆರೋಗ್ಯ ಸಚಿವ ಶ್ರೀರಾಮುಲು ಅವರು ಇನ್ನೂ ಸ್ಥಳಕ್ಕೆ ಭೇಟಿ ನೀಡದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಕನಿಷ್ಠ ಸ್ಥಳಕ್ಕೆ ಭೇಟಿ ಕೊಟ್ಟು ವೈದ್ಯರ ಅಳಲು ಕೇಳಿದ್ದಾರೆ. ನಂಜನಗೂಡು ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಅವರ ಸಾವೂ ಸೇರಿದಂತೆ ಒಟ್ಟು ನಾಲ್ಕು ವೈದ್ಯರು ಮೈಸೂರು ಜಿಲ್ಲೆಯೊಂದರಲ್ಲಿಯೇ ಕೊರೊನಾ ವೈರಸ್ ಸಂಕಷ್ಟದಲ್ಲಿ ಮೃತಪಟ್ಟಿರುವುದು ಆರೋಗ್ಯ ಸಚಿವ ಶ್ರೀರಾಮುಲು ಅವರ ಗಮನಕ್ಕೆ ಬಂದಂತಿಲ್ಲ.

ತಮ್ಮದೇ ಇಲಾಖೆಯ ವೈದ್ಯರೊಂದಿಗೆ ಮಾತನಾಡಿ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕಾಗಿದ್ದ ಶ್ರೀರಾಮುಲು ಅವರು ಒಂದು ಟ್ವೀಟ್ ಮೂಲಕ ಸಾಂತ್ವನ ಹೇಳಿ, ನ್ಯಾಯದ ಭರವಸೆ ಕೊಟ್ಟಿದ್ದಾರೆ. ಆದರೆ ಇಡೀ ಘಟನೆ ಹಿಂದೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೇ ಇರವುದರಿಂದ ನಮಗೆ ನ್ಯಾಯ ಸಿಗುವ ಬಗ್ಗೆ ಅನುಮಾನಗಳಿವೆ. ತಕ್ಷಣವೇ ಜಿಪಂ ಸಿಇಓ ಮಿಶ್ರಾ ಅಮಾನತು ಮಾಡಿ ತನಿಖೆ ನಡೆಸಬೇಕು ಎಂದು ಧರಣಿ ನಿರತ ವೈದ್ಯರು ಪಟ್ಟುಹಿಡಿದಿದ್ದಾರೆ.

English summary
Nanjanagudu Taluk Health Officer Dr. Nagendra's death has been attributed to pressure from district authorities. HIs family and government doctors allege that Prashant Kumar Mishra, CEO of the District Panchayat was responsible. They demonding suspension of CEO Mishra immediately.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X