ಬಿಜೆಪಿ ನಾಯಕರ ಮೇಲೆ "ಕುಮಾರಣ್ಣ" ಕೋಪಕ್ಕೆ ಇದೇ ಕಾರಣ!
ರಾಜ್ಯದ ಕೆಲವು ಬಿಜೆಪಿ ನಾಯಕರು ಒಳಗೊಳಗೇ ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ನೋಡಿದರೆ, ಭಯ ಬೀಳುತ್ತಿದ್ದಾರೆ ಎನ್ನಲಾಗುತ್ತಿದೆ. ರಾಜ್ಯದ ಕೆಲವು ಬಿಜೆಪಿ ನಾಯಕರನ್ನು ಕಂಡರೆ ಎಚ್.ಡಿ ಕುಮಾರಸ್ವಾಮಿ ಅವರು ಸಹ ಅಸಮಾಧಾನಿತರಾಗಿದ್ದಾರೆ. ಇದಕ್ಕೆ ಕಾರಣವೂ ಇದೆ. ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಆದರೆ, ಈ ನಡುವೆ ಕುಮಾರಣ್ಣ ಹಾಗೂ ಬಿಜೆಪಿ ನಾಯಕರ ನಡುವೆ ತಿಕ್ಕಾಟ ಶುರುವಾಗಿದೆ.
ರಾಜ್ಯದಲ್ಲಿ ಹಾವು - ಮುಂಗುಸಿಯಂತಿದ್ದ ಬಿಜೆಪಿ ಹಾಗೂ ಜೆಡಿಎಸ್‌ನ ನಡುವೆ 2024ನೇ ಸಾಲಿನ ಲೋಕಸಭೆ ಚುನಾವಣೆಗೂ ಪೂರ್ವದಲ್ಲಿ ಮೈತ್ರಿಯಾಗಿದೆ. ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ನಡೆದ ಬೆಳವಣಿಗೆ ಇದಾಗಿದೆ. ಆದರೆ, ಬಿಜೆಪಿ - ಜೆಡಿಎಸ್ ಮೈತ್ರಿಯ ನಡುವೆ ಎಲ್ಲವೂ ಸರಿ ಇಲ್ಲ ಎಂದೇ ಹೇಳಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನ ನಡುವೆ ಮೈತ್ರಿ ಇರುವುದೇನೋ ನಿಜ. ಆದರೆ, ಈ ಮೈತ್ರಿ ಹೇಳಿಕೊಳ್ಳುವಷ್ಟು ಗಟ್ಟಿಯಾಗಿ ಏನು ಇಲ್ಲ.

ಬಿಜೆಪಿಯ ರಾಜ್ಯ ನಾಯಕರು ತೆಗೆದುಕೊಳ್ಳುವ ಹಲವು ನಿರ್ಧಾರಗಳು ಎಚ್.ಡಿ ಕುಮಾರಸ್ವಾಮಿಗೆ ಒಪ್ಪುತ್ತಿಲ್ಲ. ಅಲ್ಲದೇ ಈಚೆಗೆ ನಡೆದ ಬೆಂಗಳೂರು - ಮೈಸೂರು ಪಾದಯಾತ್ರೆಗೂ ಎಚ್.ಡಿ ಕುಮಾರಸ್ವಾಮಿ ಅವರು ಮೊದ ಮೊದಲು ವಿರೋಧ ವ್ಯಕ್ತಪಡಿಸಿದ್ದರು. ನಂತರ ಕೇಂದ್ರ ಬಿಜೆಪಿ ನಾಯಕರ ಮಧ್ಯ ಪ್ರವೇಶದ ನಂತರ ಒಪ್ಪಿಕೊಂಡಿದ್ದರು. ಇದಕ್ಕೆ ಮುಖ್ಯ ಕಾರಣ ಪಾದಯಾತ್ರೆ ನಡೆಸುವುದಕ್ಕೂ ಮೊದಲು ಜೆಡಿಎಸ್ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎನ್ನುವುದು. ಈ ನಡುವೆ ಬಿಜೆಪಿಯ ಕೆಲವು ಒಕ್ಕಲಿಗ ನಾಯಕರು ಹಾಗೂ ಎಚ್.ಡಿ ಕುಮಾರಸ್ವಾಮಿ ನಡುವೆ ಸದ್ದಿಲ್ಲದೆ ಗುದ್ದಾಟ ನಡೆದಿರುವುದು ಬೆಳಕಿಗೆ ಬರುತ್ತಿದೆ.
ದೆಹಲಿ ಮಟ್ಟದಲ್ಲಿ ಮಾತ್ರ ಬಾಂಧವ್ಯ: ಇನ್ನು ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಾಗಿನಿಂದಲೂ ಜೆಡಿಎಸ್ ನಾಯಕ ಒಡನಾಟ ಹೆಚ್ಚಾಗಿ ಇರುವುದು ಬಿಜೆಪಿ ಹೈಕಮಾಂಡ್ ಹಾಗೂ ರಾಷ್ಟ್ರೀಯ ನಾಯಕರೊಂದಿಗೆ ಮಾತ್ರ. ರಾಜ್ಯದಲ್ಲಿ ಜೆಡಿಎಸ್ ನಾಯಕರು ಹಾಗೂ ಬಿಜೆಪಿ ನಾಯಕರ ನಡುವೆ ಹೇಳಿಕೊಳ್ಳುವಂತಹ ಉತ್ತಮ ಸಂಬಂಧ ಇಲ್ಲ. ಅದರಲ್ಲೂ ಬಿಜೆಪಿ ಒಕ್ಕಲಿಗ ನಾಯಕರೊಂದಿಗಂತೂ ಇಲ್ಲ.
ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ನಾಯಕತ್ವವನ್ನು ಬಿಜೆಪಿ ಹೈಕಮಾಂಡ್ ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಾಲಾಗುತ್ತಿದೆ ಎನ್ನುವುದು ಬಿಜೆಪಿ ನಾಯಕರ ಆತಂಕವಂತೆ. ಇನ್ನು ಕುಮಾರಸ್ವಾಮಿ ಅವರು ಸಹ ಬಿಜೆಪಿಯ ಒಕ್ಕಲಿಗ ನಾಯಕರಾದ ಶೋಭಾ ಕರಂದ್ಲಾಜೆ, ಡಾ.ಸಿ.ಎನ್ ಅಶ್ವತ್ಥನಾರಾಯಣ, ಸಿ.ಟಿ ರವಿ ಹಾಗೂ ಆರ್. ಅಶೋಕ್ ಸೇರಿದಂತೆ ವಿವಿಧ ಒಕ್ಕಲಿಗ ನಾಯಕರ ಮೇಲೆ ಅಸಮಾಧಾನಿತರಾಗಿದ್ದಾರೆ ಎನ್ನಲಾಗುತ್ತಿದೆ.
ಕ್ರೆಡಿಟ್ ಲೆಕ್ಕಾಚಾರ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿಯಿಂದ ಈ ಬಾರಿ ಎರಡೂ ಪಕ್ಷಗಳಿಗೂ ಲಾಭವಾಗಿದೆ. ಹಳೇ ಮೈಸೂರು ಭಾಗದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಗೆದ್ದಿರುವುದಕ್ಕೆ ಜೆಡಿಎಸ್ ಪಕ್ಷ ಹಾಗೂ ಎಚ್.ಡಿ ಕುಮಾರಸ್ವಾಮಿ ಅವರ ಕೊಡುಗೆ ಹೆಚ್ಚಾಗಿ ಇದೆ ಎಂದು ಬಿಜೆಪಿ ಹೈಕಮಾಂಡ್ ಮೆಚ್ಚಿಕೊಂಡಿತ್ತು ಎನ್ನಲಾಗುತ್ತಿದೆ. ಅಲ್ಲದೇ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲೂ ಎಚ್.ಡಿ ಕುಮಾರಸ್ವಾಮಿ ಅವರ ಹಿಡಿತ ಹೆಚ್ಚಾಗುತ್ತಿದ್ದು, ರಾಜ್ಯ ಒಕ್ಕಲಿಗ ನಾಯಕರಲ್ಲಿ ತಳಮಳ ಶುರುವಾಗಿದೆ ಎನ್ನಲಾಗುತ್ತಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಬೇಕು ಎಂದು ಬಿಜೆಪಿಯ ಕೆಲವು ನಾಯಕರು ಪಟ್ಟು ಹಿಡಿದಿದ್ದು, ಇದು ಎಚ್.ಡಿ ಕುಮಾರಸ್ವಾಮಿ ಅವರ ಸಿಟ್ಟಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ನಾನು ಈಗಾಗಲೇ ಸಾಕಷ್ಟು ಬಗ್ಗಿದ್ದೇನೆ ಇನ್ನಷ್ಟು ಬಗ್ಗಲು ಆಗಲ್ಲ ಅಂತ ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.












Click it and Unblock the Notifications